ಬೆಂಗಳೂರು: ನೇಕಾರರ ವಿಶೇಷ ಯೋಜನೆಯಡಿ ಪ್ರಸ್ತುತ ಜಾರಿಯಲ್ಲಿರುವ 20 ಹೆಚ್.ಪಿ.ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ವಿದ್ಯುತ್ ಮಗ್ಗದ ಘಟಕಗಳಿಗೆ 1.25 ರೂ. ದರದಲ್ಲಿ ವಿದ್ಯುತ್ ಪೂರೈಕೆ ಯೋಜನೆಯನ್ನು ಮುಂದುವರೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಸೋಮವಾರ ತಮ್ಮನ್ನು ಭೇಟಿಯಾದ ನೇಕಾರರ ಸಮುದಾಯಗಳ ಒಕ್ಕೂಟ ನಿಯೋಗದ ಬೇಡಿಕೆಗಳಿಗೆ ಸಿಎಂ ಸ್ಪಂದಿಸಿ, ಈ ವಿಷಯ ತಿಳಿಸಿದರು.
10 ಹೆಚ್.ಪಿ.ವರೆಗಿನ ಘಟಕಗಳಿಗೆ 250 ಯುನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸಲು ಆಯವ್ಯಯದಲ್ಲಿ ಘೋಷಿಸಲಾಗಿದ್ದು, ಶೀಘ್ರವೇ ಆದೇಶ ಹೊರಡಿಸಲಾಗುತ್ತದೆ. ಅಲ್ಲದೆ ಹಿಂದುಳಿದ ವರ್ಗಗಳ 2ಎ ವರ್ಗದಡಿ ಬರುವ ಸಮುದಾಯಗಳ ಗುತ್ತಿಗೆದಾರರಿಗೆ 1 ಕೋಟಿ ರೂ. ವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ಘೋಷಿಸಲಾಗಿದೆ ಎಂದು ವಿವರಿಸಿದರು.
ಸಿಎಂ ಭೇಟಿಯಾದ ನೇಕಾರರ ಸಮುದಾಯದ ಒಕ್ಕೂಟ ರಾಜಕೀಯ ಪ್ರಾತಿನಿಧ್ಯಕ್ಕೆ ಮನವಿ: ನೇಕಾರರು ತಮ್ಮ ವೃತ್ತಿಪರ ಚಟುವಟಿಕೆಗಳಿಗೆ ಮುಖ್ಯಮಂತ್ರಿಗಳು ಹಿಂದಿನಿಂದಲೂ ಬೆಂಬಲ ನೀಡಿದ್ದನ್ನು ಸ್ಮರಿಸಿ, ತಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯವನ್ನೂ ನೀಡುವಂತೆ ಮನವಿ ಮಾಡಿದರು. ಒಕ್ಕೂಟಕ್ಕೆ ಬೆಂಗಳೂರು ಮಹಾನಗರದಲ್ಲಿ ನಿವೇಶನ ನೀಡುವುದು, ಕಾಂತರಾಜ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಹಂಪಿ ಗಾಯತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ, ತಪಸಿಹಳ್ಳಿ ದಿವ್ಯಜ್ಞಾನಾನಂದ ಸ್ವಾಮೀಜಿ, ಬಾಗಲಕೋಟೆ ಜಿಲ್ಲೆ ನೀರಲಕೇರಿ ಸಿದ್ಧಾರೂಢ ಮಠದ ಘನಲಿಂಗ ಸ್ವಾಮೀಜಿ, ಧಾರವಾಡದ ಶಿವಾನಂದ ಮಠದ ಶಿವಾನಂದ ಸ್ವಾಮೀಜಿ, ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಬಿ.ಎಸ್.ಸೋಮಶೇಖರ ಮತ್ತಿತರ ನೇಕಾರ ಮುಖಂಡರು ಉಪಸ್ಥಿತರಿದ್ದರು.
ಉಪ್ಪಾರ ಸಮಾಜದ ಮುಖಂಡರಿಂದ ಸಿಎಂ ಭೇಟಿ:ಚಿತ್ರದುರ್ಗದ ಭಗೀರಥ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಉಪ್ಪಾರ ಸಮಾಜದ ಮುಖಂಡರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿತು. ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಪ್ರವರ್ಗ 1ರಲ್ಲಿರುವ ಸಮಾಜವಾದ ಉಪ್ಪಾರ ಜನಾಂಗಕ್ಕೆ ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಂಡಿದ್ದು, ವರದಿ ಸ್ವೀಕಾರ ಮಾಡಿ ಮೀಸಲಾತಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮನವಿ ಮಾಡಿದರು. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ವಿದ್ಯಾರ್ಥಿ ನಿಲಯ, ಸಮುದಾಯ ಭವನ, ಶಿಕ್ಷಣ ಸಂಸ್ಥೆಗೆ ಜಮೀನು ಮಂಜೂರು ಮಾಡುವುದು, ರಾಜಕೀಯ ಪ್ರಾತಿನಿಧ್ಯ, ಭಗೀರಥ ಗುರುಪೀಠದ ಆಶ್ರಯದಲ್ಲಿ ಮಧುರ ಕಣಿವೆ ಸಹಕಾರ ಸಾಮುದಾಯಿಕ ಬೇಸಾಯ ಸಂಘಕ್ಕೆ 500 ಎಕರೆ ಜಮೀನು ಗುತ್ತಿಗೆ ಅವಧಿ ಮುಗಿದಿದ್ದು ಗುರುಪೀಠದ ಶಿಕ್ಷಣ ಸಂಸ್ಥೆಗಳ ಟ್ರಸ್ಟ್ ಹೆಸರಿಗೆ ಖಾಯಂ ಆಗಿ ಭೂಮಿ ಮಂಜೂರು ಮಾಡುವುದು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಜು.26ರಂದು ಅಧಿಕಾರಿಗಳೊಂದಿಗೆ ಸಿಎಂ ವಿಡಿಯೋ ಸಂವಾದ:ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 26ರಂದು ಸಂಜೆ 4 ಗಂಟೆಗೆ ರಾಜ್ಯದ ಹವಾಮಾನ ಮತ್ತು ಮಳೆ ಬೆಳೆ ಪರಿಸ್ಥಿತಿ ಕುರಿತಂತೆ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ.
ಇದನ್ನೂ ಓದಿ: ಬಿಜೆಪಿ ಜನರಿಗೆ ದ್ರೋಹ ಮಾಡಿದ ಪಕ್ಷ, ನಾವು ನುಡಿದಂತೆ ನಡೆಸಿದ್ದೇವೆ: ಸಿಎಂ ಸಿದ್ದರಾಮಯ್ಯ ಪ್ರತಿಪಾದನೆ