ಬೆಂಗಳೂರು: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಭಾನುವಾರ ಅಭ್ಯರ್ಥಿಯನ್ನು ಘೋಷಿಸಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿರುವ ಡಿ ಕೆ ಶಿವಕುಮಾರ್, ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಹಕ್ಕು ನನಗಾಗಲಿ, ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರಿಗಾಗಲಿ ಇಲ್ಲ. ಎಐಸಿಸಿಗೆ ಮಾತ್ರ ಅಭ್ಯರ್ಥಿಗಳ ಘೋಷಣೆ ಮಾಡುವ ಹಕ್ಕು ಇರುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಇಂದು ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಕೆಲ ಸಂದರ್ಭಗಳಲ್ಲಿ ಕಳೆದ ಬಾರಿ ಸೋಲು ಕಂಡವರಿಗೆ ಉತ್ತೇಜನ ನೀಡುವ ಉದ್ದೇಶದಿಂದಲೂ ಹೇಳಿರಬಹುದು. ಅದನ್ನು ಬಿಟ್ಟರೆ ಮಲ್ಲಿಕಾರ್ಜುನ ಖರ್ಗೆ ಅವರೇ ನಮಗೆ ಹೈಕಮಾಂಡ್. ಅವರಿಗೆ ಘೋಷಣೆ ಮಾಡುವ ಹಕ್ಕಿದೆ. ನನಗೂ ಕೂಡ ಆ ಹಕ್ಕಿಲ್ಲ ಎಂದು ಒತ್ತಿ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವೋಟರ್ ಐಡಿ ದಾಖಲೆ ಸಂಗ್ರಹ ಹಗರಣದ ಬಗ್ಗೆ ಭಾರತೀಯ ಚುನಾವಣಾ ಆಯೋಗಕ್ಕೆ ದೂರು ನೀಡುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿ, ನಾವು ನಾಳೆಗೆ ಟೈಮ್ ಕೇಳಿದ್ದೇವೆ. ನಮಗೆ ಮುಖ್ಯ ಚುನಾವಣಾ ಆಯುಕ್ತರೇ ಬೇಕು. ನಮ್ಮ ಹತ್ತಿರ ಅನೇಕ ಮಾಹಿತಿ ಇವೆ. ಪೊಲೀಸ್ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಗಮನಿಸುತ್ತಿದ್ದೇವೆ. ಮ್ಯಾಪಿಂಗ್ ಯಾವ ರೀತಿ ಮಾಡಿದ್ದಾರೆ, ಅದಕ್ಕೆ ಅನುಮತಿ ಇದೆಯಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ನೀವೆಲ್ಲಾ ಆಶೀರ್ವದಿಸಿ ಗೆಲ್ಲಿಸಬೇಕು.. ಮದುವೆ ವೇದಿಕೆಯಲ್ಲೂ ಸಿದ್ದರಾಮಯ್ಯ ರಾಜಕೀಯ ಭಾಷಣ
ಎಲೆಕ್ಷನ್ ಅಫೀಸರ್ ಮಾಧ್ಯಮಗಳಲ್ಲೇ ಒಪ್ಪಿಕೊಂಡಿದ್ದಾರೆ. ನಮಗೆ ಉನ್ನತ ಅಧಿಕಾರಿಗಳಿಂದ ಆದೇಶ ಬಂತು. ಆದೇಶ ಬಂದಿದ್ದಕ್ಕೆ ನಮ್ಮ ಕರ್ತವ್ಯ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆ ಉನ್ನತ ಅಧಿಕಾರಿ ಯಾರು? ಯಾರೋ ಒಬ್ಬರು, ಇಬ್ಬರು 15000 ಸಾವಿರಕ್ಕೆ ಕೆಲಸಕ್ಕೆ ಬಂದಿರುವರನ್ನು ಬಂಧನ ಮಾಡುವುದಲ್ಲ. ಯಾರು ಕಿಂಗ್ ಪಿನ್ ಇದ್ದಾರೆ, ಯಾರು ಮಂತ್ರಿಗಳು ಇದ್ದಾರೆ, ಯಾರು ಶಾಸಕರು ಇದ್ದಾರೆ, ಇವರೆಲ್ಲರ ದಾಖಲಾತಿಗಳು ನಮ್ಮ ಬಳಿ ಇವೆ. ಶಾಸಕರ ರೆಕಮೆಂಡ್ ಮಾಡಿರುವ ದಾಖಲಾತಿ, ಶಾಸಕರು, ಮಂತ್ರಿಗಳು ಫೋನ್ನಲ್ಲಿ ಮಾತಾಡಿರುವ ದಾಖಲೆ ಸಹ ಇದೆ. ರಾಜರಾಜೇಶ್ವರಿ, ಮಲ್ಲೇಶ್ವರಂ, ಬೊಮ್ಮನಹಳ್ಳಿ, ಮಹಾದೇವಪುರ ಹೀಗೆ 28 ಕ್ಷೇತ್ರದ ಎಆರ್ಒಗಳ ಮೇಲೆ ಕೇಸ್ ದಾಖಲಾಗಬೇಕು. ಪೊಲೀಸರು ಏನು ಮಾಡುತ್ತಾರೆ ಎಂದು ನಾವು ಕಾಯುತ್ತಿದ್ದೇವೆ ಎಂದು ಡಿಕೆಶಿ ತಿಳಿಸಿದರು.
ವೋಟರ್ಸ್ ಮಾನಿಪ್ಯುಲೇಷನ್ ವಿಚಾರ ಕುರಿತು ಮಾತನಾಡಿ, ನಾನು ಅದರ ಬಗ್ಗೆ ಈಗ ಮಾತಾಡಲ್ಲ. ಹಿಂದೆ ರೇಪ್ ಕೇಸ್, 40% ಕಮಿಷನ್ ಸೇರಿದಂತೆ ಅನೇಕ ಪ್ರಕರಣಗಳನ್ನು ಸಿಎಂ ಯಡಿಯೂರಪ್ಪ ತಮ್ಮ ಮಂತ್ರಿಗಳನ್ನು ರಕ್ಷಣೆ ಮಾಡಲು ಬಿ ರಿಪೋರ್ಟ್ ಬರೆಸಿ ಮುಚ್ಚಿ ಹಾಕಿದ್ದಾರೆ. ಇದನ್ನು ಕೂಡ ಮುಚ್ಚಿಹಾಕುವ ಅನುಮಾನವಿದೆ ಎಂದರು.
ಕಾಂಗ್ರೆಸ್ ವಿರುದ್ಧ ಸಿಎಂ ಆರೋಪ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, 2013 ರಿಂದ ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಸಿಎಂ ಮಾತನ್ನು ನಾವು ಸ್ವಾಗತ ಮಾಡುತ್ತೇವೆ. ನಮ್ಮದು ಮಾಡಲಿ, ಅವರದ್ದು ಮಾಡಲಿ. ನಾವು ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ಮತಗಳನ್ನು ಮಾರುತ್ತಿದ್ದಾರೆ. ದತ್ತಾಂಶ ಕೊಟ್ಟು ಮಾರಾಟ ಮಾಡುತ್ತಿದ್ದಾರೆ. ಎಷ್ಟೆಷ್ಟು ಹಣ ಕಲೆಕ್ಟ್ ಆಗುತ್ತಿತ್ತು, ಎಲ್ಲಾ ಮಾಹಿತಿ ನಮ್ಮಲ್ಲಿವೆ. ಇದು ಸಾರ್ವಜನಿಕ ಆಸ್ತಿ, ಮತದಾರ ಪಟ್ಟಿಯಿಂದ ಅಹಿಂದ ಮತಗಳನ್ನು ಡಿಲಿಟ್ ಮಾಡಿದ್ದಾರೆ. ಯಾರು ಅವರಿಗೆ ಮತ ಹಾಕಲ್ವೋ ಅವರದ್ದೆಲ್ಲ ಹೆಸರು ಡಿಲಿಟ್ ಮಾಡಿದ್ದಾರೆ. ಈ ಎಲ್ಲಾ ಮಾಹಿತಿ ನಮ್ಮಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿವರಿಸಿದರು.
ಇದನ್ನೂ ಓದಿ:ಡಿಕೆಶಿಗೆ ಸಿದ್ದರಾಮಯ್ಯ ಗುದ್ದು?: ಅತ್ತ ಟಿಕೆಟ್ಗಾಗಿ ಅರ್ಜಿ, ಇತ್ತ ಅಭ್ಯರ್ಥಿಗಳ ಘೋಷಣೆ