ಬೆಂಗಳೂರು : ಅಧಿಕಾರಕ್ಕೆ ಬರಲು ಮೆಟ್ಟಿಲು ಮಾಡಿಕೊಂಡಿದ್ದ ವೀರಶೈವ ಲಿಂಗಾಯತ ಸಮುದಾಯವನ್ನು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಿಲ್ಲ. ಸಮುದಾಯದ ಹಿರಿಯ ಶಾಸಕರೂ ಗಟ್ಟಿ ದನಿ ಎತ್ತುತ್ತಿಲ್ಲ ಎನ್ನುವುದು ದುರ್ದೈವದ ಸಂಗತಿಯಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ಟೀಕಿಸಿದ್ದಾರೆ.
ಇದನ್ನೂ ಓದಿ :ಇವರು ರಾಜ್ಯದ ಏಕೈಕ ಉಪ್ಪಾರ ಶಾಸಕ: ಸೋಮಣ್ಣ ಸೋಲಿಸಿದ ಪುಟ್ಟರಂಗಶೆಟ್ಟಿಗೆ ಸಿಗಲಿದೆಯೇ ಮಂತ್ರಿಗಿರಿ?
ಅಧಿಕಾರಕ್ಕೆ ಬರಲು ವೀರಶೈವ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ ಮೆಟ್ಟಿಲಾಗಿಸಿಕೊಂಡಿತ್ತು. ಈಗ ಅಧಿಕಾರ ದಾಹದಿಂದ ಸಮುದಾಯವನ್ನೇ ಮರೆತಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಹಿರಿಯ ನಾಯಕರೂ ಈಗ ಮೌನ ತಾಳಿದ್ದಾರೆ. ಸಮುದಾಯದ 39 ಶಾಸಕರು ಗೆದ್ದಿದ್ದರೂ ಉನ್ನತ ಸ್ಥಾನ ಕೇಳುವಲ್ಲಿ ಗಟ್ಟಿ ದನಿ ಕೇಳಿಸುತ್ತಿಲ್ಲ ಅನ್ನೋದು ವ್ಯಂಗ್ಯದ ವಿಚಾರ ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಇದನ್ನೂ ಓದಿ :ಕೆ. ಹೆಚ್. ಮುನಿಯಪ್ಪ ಗೆಲುವು: ಘಾಟಿ ಸುಬ್ರಮಣ್ಯಸ್ವಾಮಿಗೆ 1001 ಈಡುಗಾಯಿ ಒಡೆದು ಹರಕೆ ತೀರಿಸಿದ ಅಭಿಮಾನಿಗಳು
ಕಾಂಗ್ರೆಸ್ನ ಮುಖವಾಡ ಶಾಶ್ವತವಾಗಿ ಕಳಚಿ ಬಿದ್ದಿದೆ. ವೀರಶೈವ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಂಡಿದೆ. ಅಲ್ಲದೇ ಸಮುದಾಯಕ್ಕೆ ನ್ಯಾಯ ಕೊಡದೇ ವಂಚಿಸಿದೆ. ಬಿಜೆಪಿ ಒಂದೇ ಪಕ್ಷ ಎಲ್ಲ ಸಮುದಾಯಗಳಿಗೂ ಬಸವಣ್ಣನ ಆಶಯಗಳಿಗೆ ತಕ್ಕಂತೆ ನ್ಯಾಯ ಒದಗಿಸುವ ಪಕ್ಷವಾಗಿದೆ. ಕರ್ನಾಟಕದ ಜನತೆಗೆ ಶೀಘ್ರದಲ್ಲೇ ಕಾಂಗ್ರೆಸ್ನ ಸುಳ್ಳುಗಳ ಅರಿವಾಗಲಿದೆ. ರಾಜ್ಯದ ಜನತೆ ಮತ್ತೆ ಬಿಜೆಪಿಯನ್ನು ಬೆಂಬಲಿಸುವ ವಿಶ್ವಾಸ ಇದೆ ಎಂದು ಬಿ.ವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
ಸಚಿವ ಸಂಪುಟದಲ್ಲಿ ಸಮುದಾಯಕ್ಕೆ ಹೆಚ್ಚಿನ ಆದ್ಯತೆ :ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೊಂದಲವಾಗಿತ್ತು. ಈ ಸಂದರ್ಭದಲ್ಲಿ ನಿನ್ನೆ(ಗುರುವಾರ) ಪ್ರತಿಕ್ರಿಯಿಸದ ಅಖಿಲ ಭಾರತೀಯ ವೀರಶೈವ ಮಹಾಸಭಾದ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು, ನನಗೆ ಮುಖ್ಯಮಂತ್ರಿ ಸ್ಥಾನವನ್ನು ಹೈಕಮಾಂಡ್ ನೀಡಿದರೆ ನಿಭಾಯಿಸಲು ನಾನು ಸಿದ್ಧ ಎಂದು ಹೇಳಿದ್ದರು. ಆದರೆ ರಾಜ್ಯ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದೆ.
ಇದಕ್ಕೂ ಮುಂಚೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ ನೀಡುವಂತೆ ಅಖಿಲ ಭಾರತೀಯ ವೀರಶೈವ ಮಹಾಸಭಾದಿಂದ ಎಐಸಿಸಿ ಅಧ್ಯಕ್ಷರಿಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ರಣದೀಪ್ ಸುರ್ಜೇವಾಲ ಅವರಿಗೆ ಪತ್ರ ಬರೆದಿರುವ ಬಗ್ಗೆ ತಿಳಿಸಿದ್ದರು.
ಈ ಹಿನ್ನಲೇ ವಿಧಾನಸಭೆ ಚುನಾವಣೆಯಲ್ಲಿ ವೀರಶೈವ ಲಿಂಗಾಯತರು ಅತ್ಯಧಿಕ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಸಮುದಾಯದ ಶಾಸಕರು ಚುನಾಯಿತರಾಗಿದ್ದಾರೆ. ವೀರಶೈವ ಲಿಂಗಾಯತ ಮತಬ್ಯಾಂಕ್ ಉಳಿಸಿಕೊಳ್ಳಲು ಸಚಿವ ಸಂಪುಟದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ :ಬಿ.ಕೆ.ಹರಿಪ್ರಸಾದ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಕೊಡಿ: ಕಾಂಗ್ರೆಸ್ ಹೈಕಮಾಂಡ್ಗೆ ಅಭಯಚಂದ್ರ ಜೈನ್ ಒತ್ತಾಯ