ಬೆಂಗಳೂರು:ಪ್ರಧಾನಿಯಾದವರು ಜನರ ಸಮಸ್ಯೆ ಆಲಿಸಲು ದೇಶ ಸುತ್ತಬೇಕೇ ವಿನಃ ಭಾಷಣ ಮಾಡುವುದಕ್ಕಲ್ಲ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು 11 ತಿಂಗಳ ಅಧಿಕಾರಾವಧಿಯಲ್ಲಿ ಜನರ ಸಮಸ್ಯೆ ಆಲಿಸುವುದಕ್ಕಾಗಿ ದೇಶದ ವಿವಿಧ ಭಾಗಗಳನ್ನು ಸುತ್ತಿದ್ದರು ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಂ.ಆರ್ ಶ್ರೀನಿವಾಸಮೂರ್ತಿ ಹೇಳಿದರು.
ಪಾರದರ್ಶಕ ಮಾಧ್ಯಮ ಸಂಸ್ಥೆ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಬರೆದಿರುವ ಆಂಗ್ಲ ಭಾಷೆ 'ಫರ್ರೋಸ್ ಇನ್ ದಿ ಫೀಲ್ಡ್' ಕೃತಿಯನ್ನು ರೋಸಿ ಡಿಸೋಜಾ ಅವರು ಕನ್ನಡಕ್ಕೆ ಅನುವಾದಿಸಿರುವ 'ನೇಗಿಲ ಗೆರೆಗಳು' ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಭಾಷಣ ಮಾಡಲೆಂದೇ ಪ್ರವಾಸ ಮಾಡುವ ಪ್ರಧಾನಿಗಳು ಬೇರೆ, ಜನರ ಸಮಸ್ಯೆ ಆಲಿಸಿ ಪರಿಹಾರ ನೀಡಲು ಪ್ರವಾಸ ಮಾಡುವ ಪ್ರಧಾನಿಗಳೇ ಬೇರೆ. ದೇವೇಗೌಡರು ಪ್ರಧಾನಿಯಾದ ಒಂದೇ ವಾರಕ್ಕೆ ಜಮ್ಮು-ಕಾಶ್ಮೀರ ಪ್ರವಾಸ ಮಾಡಿ ಅಲ್ಲಿನ ಜನರ ಸಮಸ್ಯೆ ಆಲಿಸಿದ್ದರು. 11 ತಿಂಗಳ ಅವಧಿಯಲ್ಲಿ ನಾಲ್ಕು ಭಾರಿ ಕಾಶ್ಮೀರಕ್ಕೆ ಭೇಟಿ ನೀಡಿದ ಏಕೈಕ ಪ್ರಧಾನಿ ಇವರು ಎಂದು ಶ್ಲಾಘಿಸಿದರು.
ದೇವೇಗೌಡರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಾಗ ಪ್ರತಿಪಕ್ಷಗಳು ನಾವು ನಿಮ್ಮ ರಾಜಕೀಯ ವಿರೋಧಿಗಳೇ ಹೊರತು, ನಿಮ್ಮ ಶತ್ರುಗಳಲ್ಲ ಎಂದು ಹೇಳಿದ್ದರು. ಇಂದಿನ ರಾಜಕಾರಣದಲ್ಲಿ ವಿರೋಧಿಗಳನ್ನು ಶತ್ರುಗಳನ್ನಾಗಿ ನೋಡಲಾಗುತ್ತಿದೆ. ಹೀಗಾದಾಗ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. 'ನೇಗಿಲ ಗೆರೆಗಳು' ಪುಸ್ತಕ ಓದಿದಲ್ಲಿ ಪ್ರಜಾಪ್ರಭುತ್ವದ ಒಂದು ಮುಖ ಪರಿಚಯವಾಗುತ್ತದೆ. ಜತೆಗೆ ಪ್ರಜಾಪ್ರಭುತ್ವ ನಡೆಯಬೇಕಾದ ರೀತಿಯಲ್ಲಿ ಸಾಗುತ್ತಿದೆಯೇ ಅಥವಾ ಬೇರೆ ರೀತಿ ನಡೆಯುತ್ತಿದೆಯೇ ಎಂದು ನಾವು ಆಲೋಚಿಸಬೇಕಾಗುತ್ತದೆ ಎಂದರು.
ಕೇಂದ್ರ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಡಾ. ಎಸ್.ಎಸ್. ಮೀನಾಕ್ಷಿ ಸುಂದರಂ ಮಾತನಾಡಿ " ದೇವೇಗೌಡರು ಕಾನೂನು ಮತ್ತು ನೀರಾವರಿ ಇಲಾಖೆಗ ಕಾರ್ಯದರ್ಶಿಗಳಿಗಿಂತಲೂ ಆಳವಾದ ಜ್ಞಾನ ಹೊಂದಿದ್ದರು. ಇಷ್ಟಾದರೂ ಯಾರ ಬಗ್ಗೆಯೂ ವೈಯಕ್ತಿಕ ದ್ವೇಷ ಹೊಂದಿರಲಿಲ್ಲ" ಎಂದರು.