ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಇತ್ತೀಚೆಗೆ ನಡೆಸಲಾಗಿದ್ದ ನೀಟ್ ಪರೀಕ್ಷೆಯಲ್ಲಿ ರಾಜ್ಯದ 72,262 ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಈ ಬಾರಿ ಒಟ್ಟಾರೆ 1,22,423 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ರಾಷ್ಟ್ರೀಯ ಮಟ್ಟದ ಮೊದಲ ಐದು ಸ್ಥಾನಗಳಲ್ಲಿ ಇಬ್ಬರು, ಅಗ್ರ 10 ಸ್ಥಾನಗಳಲ್ಲಿ ಮೂವರು ರಾಜ್ಯದ ವಿದ್ಯಾರ್ಥಿಗಳಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಮೂರನೇ ರ್ಯಾಂಕ್ ಪಡೆದ ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್‌ನ ಹೃಷಿಕೇಶ್ ನಾಗಭೂಷಣ ಗಂಗುಲೆ ರಾಜ್ಯಕ್ಕೆ ಮೊದಲಿಗರು. ಇವರು ರಾಜ್ಯ ಸಿಇಟಿಯಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ, ಪಶು ವೈದ್ಯಕೀಯದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದರು. ದಿಲ್ಲಿ ಏಮ್ಸ್ ಸೇರಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿದ್ದು ವೈದ್ಯಕೀಯ ಕ್ಷೇತ್ರದಲ್ಲಿ ಇನ್ನಷ್ಟು ಮುಂದುವರಿಯಲು ನಿರ್ಧರಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಉಚಗಾವಿಯ ರುಚಾ ಪವಾಶೆ ರಾಷ್ಟ್ರಮಟ್ಟದಲ್ಲಿ 4ನೇ ರ್ಯಾಂಕ್ ಪಡೆದಿದ್ದು, ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಇವರು ಸೇಂಟ್ ಝೇವಿಯರ್ಸ್ ಪ್ರೌಢಶಾಲೆ ಹಾಗೂ ರಾಜಾ ಲಖಮಗೌಡ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ.