ಕರ್ನಾಟಕ

karnataka

ETV Bharat / state

ಬೆಂಗಳೂರಿಗೂ ಬಂತು ನೆಬುಲಾ : ಹೇಗಿರುತ್ತೆ 3ಡಿ ವಾಲ್ಯುಮೆಟ್ರಿಕ್ ಡಿಸ್​ಪ್ಲೇ ಕಾರ್ಯಾಚರಣೆ? - ಕಂಬೈನ್ಡ್ ಕ್ರಾಫ್ಟಿಕ್

ಬೆಂಗಳೂರಿನ ಅರಮನೆಯಲ್ಲಿ ನಡೆಯುತ್ತಿರುವ ಟೆಕ್ ಸಮ್ಮಿಟ್​ನಲ್ಲಿ ನೆಬುಲಾ 3ಡಿ ವಾಲ್ಯುಮೆಟ್ರಿಕ್ ಡಿಸ್​ಪ್ಲೇ ಪ್ರದರ್ಶನ ನೋಡುಗರ ಗಮನ ಸೆಳೆದಿದೆ.

3ಡಿ ವಾಲ್ಯುಮೆಟ್ರಿಕ್ ಡಿಸ್ ಪ್ಲೆ
3ಡಿ ವಾಲ್ಯುಮೆಟ್ರಿಕ್ ಡಿಸ್ ಪ್ಲೆ

By ETV Bharat Karnataka Team

Published : Nov 29, 2023, 7:43 PM IST

Updated : Nov 29, 2023, 7:49 PM IST

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಆರಂಭಗೊಂಡಿರುವ ಬೆಂಗಳೂರು ಟೆಕ್ ಸಮ್ಮಿಟ್​ನಲ್ಲಿ ನೆಬುಲಾ (ಜ್ಯೋತಿರ್ಮೇಘ) 3ಡಿ ವಾಲ್ಯುಮೆಟ್ರಿಕ್ ಡಿಸ್​ಪ್ಲೇ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ. ಒಂದೇ ಆಕೃತಿಯನ್ನು ಮೂರು ದಿಕ್ಕಿನಿಂದಲೂ ನೋಡುವ ಹಾಗೂ ಎದುರಿನ ಆಕೃತಿಯಂತೆ ಅನುಕರಿಸುವ ನೆಬುಲಾ ನೋಡುಗರ ಗಮನ ಸೆಳೆಯುತ್ತಿದೆ.

ಜಾಗತಿಕವಾಗಿ ಹೆಚ್ಚಿನ ಮನ್ನಣೆ ಪಡೆದುಕೊಳ್ಳುತ್ತಿರುವ ಪ್ರಚಾರ ಪರಿಕರ ನೆಬುಲಾ ಇದೀಗ ಬೆಂಗಳೂರಿಗೂ ಕಾಲಿಟ್ಟಿದೆ. ಬೆಂಗಳೂರು ಮೂಲದ ಕ್ರಾಫ್ಟೆಕ್ 360 ಎನ್ನುವ ಕಂಪನಿ ನೆಬುಲಾ ಪರಿಚಯಿಸಿದ್ದು, ಇಲ್ಲಿನ ಅರಮನೆಯಲ್ಲಿ ನಡೆಯುತ್ತಿರುವ ಟೆಕ್ ಸಮ್ಮಿಟ್​ನಲ್ಲಿ ಪ್ರದರ್ಶನಕ್ಕೆ ಕಾಲಿಟ್ಟಿದೆ. ಇದರ ವಿಶೇಷತೆ ಎಂದರೆ ಪ್ರಸ್ತುತಪಡಿಸುವ ವಸ್ತು ಹಾಗು ವಿಷಯ ಎರಡೂ ಕೂಡ ನೆಬುಲದ ಮೂರು ದಿಕ್ಕಿನಲ್ಲಿಯೂ ಒಂದೇ ರೀತಿ ಪ್ರಕಾಶಿಸುತ್ತದೆ. ಯಾವುದಾದರೂ ಉತ್ಪನ್ನದ ಪ್ರಚಾರ ಅಥವಾ ಉತ್ಪನ್ನದ ಬಿಡುಗಡೆ ಜಾಹೀರಾತು ಪ್ರದರ್ಶನ ಮಾಡುವುದಾದರೆ ಮೂರು ದಿಕ್ಕಿನಲ್ಲಿಯೂ ಒಂದೇ ರೀತಿಯಲ್ಲಿ ಪ್ರದರ್ಶನವಾಗಲಿದೆ.

ಇನ್ನು ಇದರ ಮತ್ತೊಂದು ವಿಶೇಷತೆ ಎಂದರೆ ನೆಬುಲಾದ ಎದುರಿಗಿರುವ ವ್ಯಕ್ತಿಯನ್ನು ಅನುಕರಿಸಿ ವಿದ್ಯುತ್ ದೀಪಗಳನ್ನು ಬೆಳಗಿಸುತ್ತದೆ. ವ್ಯಕ್ತಿಯ ಹಾವಭಾವ, ಚಲನವಲನವನ್ನೇ ಬೆಳಕಿನಲ್ಲಿ ಪ್ರತಿಬಿಂಬಿಸುತ್ತದೆ. ಇದು ಕೂಡ ಮೂರು ದಿಕ್ಕಿನಲ್ಲಿಯೂ ಕಾಣಿಸುತ್ತದೆ. ವ್ಯಕ್ತಿಯ ಮ್ಯಾಪಿಂಗ್ ಪೂರ್ಣ ಪ್ರಮಾಣದಲ್ಲಿ ಮಾಡುತ್ತದೆ. ಇದನ್ನು ಫನ್ ಗೇಮ್​ಗಳಲ್ಲಿ ಬಳಸಬಹುದಾಗಿದೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ನೆಬುಲಾ ಫನ್ ಗೇಮ್​ಗಳಲ್ಲಿ ಬಳಕೆಯಾಗುತ್ತಿದೆ. ಪ್ರಚಾರಕ್ಕೂ ಉಪಯೋಗಿಸಲಾಗುತ್ತಿದೆ. ಇದೀಗ ಇಂತಹ ನೆಬುಲಾ ಭಾರತಕ್ಕೆ ಕರ್ನಾಟಕದ ಮೂಲಕ ಕಾಲಿಟ್ಟಿದೆ. ಕ್ರಾಫ್ಟೆಕ್ 360 ಕಂಪನಿ ದೇಶದ ಏಕೈಕ ನೆಬುಲಾ ಉತ್ಪಾದಕ ಕಂಪನಿಯಾಗಿದೆ.

ಈ ಕುರಿತು ಈಟಿವಿ ಭಾರತದ ಜೊತೆಗೆ ಮಾತನಾಡಿದ ಕ್ರಾಫ್ಟೆಕ್ 360 ಕ್ಲೈಂಟ್ ಸರ್ವಿಸಿಂಗ್ ಎಕ್ಸಿಕ್ಯುಟಿವ್ ಗಗನ ಪಿ, ಕ್ರಾಫ್ಟೆಕ್360 ಎನ್ನುವ ಬೆಂಗಳೂರು ಮೂಲದ ಕಂಪನಿ, 3ಡಿ ವಾಲ್ಯುಮೆಟ್ರಿಕ್ ಡಿಸ್​ಪ್ಲೇ ಮಾಡುತ್ತಿದೆ. ಈ ರೀತಿ 3ಡಿ ವಾಲ್ಯುಮೆಟ್ರಿಕ್ ಡಿಸ್​ಪ್ಲೇ ಉತ್ಪಾದನೆ ಮಾಡುತ್ತಿರುವ ದೇಶದ ಮೊದಲ ಕಂಪನಿಯಾಗಿದೆ. ಜಗತ್ತಿನಲ್ಲಿ ಎರಡೇ ಕಂಪನಿಗಳಿವೆ. ಒಂದು ಜರ್ಮನ್ ಮೂಲದ ಕಂಪನಿಯಾದರೆ ಮತ್ತೊಂದು ನಮ್ಮದು. ಇದರ ವಿಶೇಷತೆ ಎಂದರೆ ನೆಬುಲಾದಲ್ಲಿ ಏನನ್ನೇ ಡಿಸ್​ಪ್ಲೇ ಮಾಡಿದರೂ ಅದನ್ನು ಮೂರು ಕಡೆಯಿಂದಲೂ ಒಂದೇ ರೀತಿಯಾಗಿ ನೋಡಬಹುದಾಗಿದೆ. 2 ಡಿ ಮಾದರಿಯಲ್ಲಿ ಆದರೆ ಒಂದೇ ಕಡೆ ನೋಡಬಹುದು. ಆದರೆ ನೆಬುಲಾದಲ್ಲಿ ಮೂರು ಕಡೆಯಿಂದಲೂ ಒಂದೇ ರೀತಿಯ ಆಕೃತಿಯನ್ನು ನೋಡಬಹುದಾಗಿದೆ ಎಂದರು.

ಇದರ ಮತ್ತೊಂದು ವಿಶೇಷತೆ ಎಂದರೆ ಎದುರಿಗಿರುವ ಆಕೃತಿಯ ಚಲನವಲನವನ್ನೇ ನೆಬುಲಾ ಅನುಕರಿಸುತ್ತದೆ. ದೀಪದ ಪರದೆಯಲ್ಲಿ ವ್ಯಕ್ತಿ ಅಥವಾ ಆಕೃತಿಯ ಚಲನವಲನಕ್ಕೆ ತಕ್ಕಂತೆ ಅದೇ ರೀತಿ ಗ್ರಹಿಸಿ ವಿದ್ಯುತ್ ದೀಪದಲ್ಲಿ ಪ್ರತಿಬಿಂಬಿಸುತ್ತದೆ. ಟೆಕ್ ಇಂಟರಾಕ್ಷನ್ ಅಂಡ್ ಮಾರ್ಕೆಟಿಂಗ್ ಕಂಬೈನ್ಡ್ ಕ್ರಾಫ್ಟಿಕ್ ನೆಬುಲಾ ಆಗಿದ್ದು, ಬ್ರಾಂಡ್​ಗಳ ಪ್ರಚಾರ, ಶಾಶ್ವತ ನಿರ್ಮಾಣಕ್ಕೆ ಬಳಸಬಹುದು. ಬ್ರಾಂಡ್ ಆಕ್ಟಿವೇಷನ್​ಗೆ ಬಳಕೆ ಮಾಡಬಹುದು. ನಿಮ್ಮ ಹೊಸ ಉತ್ಪನ್ನ ಡಿಸೈನ್ ಮಾಡಬಹುದು. ವಾಸ್ತುಶಿಲ್ಪದಡಿ ಶಾಶ್ವತ ರೀತಿಯಲ್ಲಿಯೂ ಅಳವಡಿಸಬಹುದಾಗಿದೆ. ಕಂಪನಿ, ಅಪಾರ್ಟ್​ಮೆಂಟ್​ಗಳಲ್ಲಿ ಇಂಟರಾಕ್ಟಿವ್ ಫನ್ ಮಾಡಲು ಬಳಸಬಹುದಾಗಿದೆ. ಉತ್ಪನ್ನ ಬಿಡುಗಡೆ, ಉತ್ಪನ್ನಗಳ ಪ್ರಚಾರಕ್ಕೂ ಬಳಸಬಹುದು ಎಂದು ಹೇಳಿದರು.

ಗ್ರಾಹಕರು ಯಾವ ರೀತಿಯ ವಿನ್ಯಾಸ ಬಯಸುತ್ತಾರೆಯೋ ಅದಕ್ಕೆ ತಕ್ಕಂತೆ ನಾವು ನೆಬುಲವನ್ನು ಕಸ್ಟಮೈಸೇಷನ್ ಮಾಡಿಕೊಡುತ್ತೇವೆ. ಕ್ರಿಯೇಟಿವ್ ಜವಾಬ್ದಾರಿಯೂ ನಮ್ಮದೇ ಆಗಿರಲಿದೆ. ಸಾಫ್ಟ್ ವೇರ್ ಕೂಡ ನಾವೇ ಮಾಡಿಕೊಡುತ್ತೇವೆ. ಹಾರ್ಡ್​ವೇರ್ ಕೂಡ ನಮ್ಮ ಕಡೆಯಿಂದಲೇ ಮಾಡಿಕೊಡಲಾಗುತ್ತದೆ. ಯಾವ ಅಳತೆಯ ನೆಬುಲಾ ಬೇಕು ಎಂದರೆ ಅದರಂತೆ ಅವರ ಬಯಕೆಯ ವಿನ್ಯಾಸ ರೂಪಿಸಿ, ಸಿದ್ಧಪಡಿಸಿಕೊಡಲಾಗುತ್ತದೆ. ಇದನ್ನು ಖರೀದಿ ಮಾಡಬಹುದು ಹಾಗೂ ಬಾಡಿಗೆಗೂ ಪಡೆಯಬಹುದಾಗಿದೆ ಎಂದು ಹೇಳಿದರು.

ಲೆಂತ್, ಹೈಟ್, ವಿಡ್ತ್ ಎಲ್ಲ ಕಸ್ಟಮೈಸಡ್ ಆಗಿರಲಿದೆ. ಅಗತ್ಯವಿದ್ದವರು ನಮ್ಮ ಸಂಸ್ಥೆಯನ್ನು ಸಂಪರ್ಕಿಸಿದರೆ ಹೆಚ್ಚಿನ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು. ಅಂತರ್ಜಾಲ, ಸಾಮಾಜಿಕ ಜಾಲತಾಣದಲ್ಲಿ ವಿವರಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ :3D Printed Post Office: ಬೆಂಗಳೂರಿನಲ್ಲಿ ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡ ಉದ್ಘಾಟನೆ

Last Updated : Nov 29, 2023, 7:49 PM IST

ABOUT THE AUTHOR

...view details