ಬೆಂಗಳೂರು :ನಮ್ಮ ಸಂಸ್ಕೃತಿಯನ್ನು ಉಳಿಸಲು ನಮ್ಮ ಕ್ಷೇತ್ರದ ಯೋಜನೆಗಳಿಗೆ ಮಹನೀಯರ ಹೆಸರುಗಳನ್ನು ನಾಮಕರಣ ಮಾಡಲಾಗುವುದು ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಗೋವಿಂದ ರಾಜ ವಿಧಾನಸಭಾ ಕ್ಷೇತ್ರದ ಪಾಲಿಕೆ ಸೌಧದಲ್ಲಿ ಗುರುವಾರ ಹಿರಿಯ ಸಂಶೋಧಕ, ಸಾಹಿತಿ ಚಿಂತಕ ನಾಡೋಜ ಡಾ.ಎಂ.ಚಿದಾನಂದ ಮೂರ್ತಿ ಸಭಾಂಗಣವ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಚಿದಾನಂದಮೂರ್ತಿ ಅವರು ತಮ್ಮ ಸಂಶೋಧನೆಯಲ್ಲಿ ವಾಸ್ತವಾಂಶಕ್ಕೆ ಹೆಚ್ಚು ಒತ್ತು ನೀಡಿದ್ದರು. ರಾಜ್ಯದ ಮೂಲೆ, ಮೂಲೆಗಳಿಗೆ ತೆರಳಿ ಕನ್ನಡ ನಾಡಿನ ಇತಿಹಾಸವನ್ನು ಸಂಶೋಧಿಸಿದ್ದಾರೆ ಎಂದು ಅವರು ಸ್ಮರಿಸಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಅಭಿವೃದ್ಧಿ ಯೋಜನೆಗಳಿಗೆ ರಾಷ್ಟ್ರ ಮತ್ತು ರಾಜ್ಯಕ್ಕೆ ಸೇವೆ ಸಲ್ಲಿಸಿದ ಮಹನೀಯರುಗಳ ಹೆಸರುಗಳನ್ನು ನಾಮಕರಣ ಮಾಡಲಾಗುತ್ತಿದೆ. ಇದೇ ರೀತಿ, ರಾಷ್ಟ್ರಕ್ಕೆ ಸಂಶೋಧನೆ ಮೂಲಕ ಉಪಯುಕ್ತ ಕೊಡುಗೆ ನೀಡಿರುವ ಚಿದಾನಂದಮೂರ್ತಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು ಎಂದು ಅವರ ಹೆಸರನ್ನು ಪಾಲಿಕೆ ಸಭಾಂಗಣಕ್ಕೆ ಇಡಲಾಗಿದೆ ಎಂದರು. ಈ ಸಂದರ್ಭದಲ್ಲಿ ನಾಯಂಡಹಳ್ಳಿಯ 200 ಹಾಸಿಗೆಯ ಆಸ್ಪತ್ರೆಗೆ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಹೆಸರಿಡುವ ಬಗ್ಗೆ ಅವರು ಪ್ರಕಟಿಸಿದರು.
ಕಾಯಕ ಯೋಗಿ ಶ್ರೀ ಬಸವೇಶ್ವರ, ದಾಸಶೇಷ್ಠ ಕನಕದಾಸ, ಸಂಗೊಳ್ಳಿ ರಾಯಣ್ಣ, ನಾಡಪ್ರಭು ಕೆಂಪೇಗೌಡರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ, ಪೇಜಾವರ ಶ್ರೀ ಅವರಂಥ ಮಹನೀಯರುಗಳ ಹೆಸರುಗಳನ್ನು ಶಾಶ್ವತವಾಗಿ ಸ್ಮರಿಸಿಕೊಳ್ಳಲು ಮತ್ತು ಮುಂದಿನ ಪೀಳಿಗೆಯು ಮಹನೀಯರುಗಳ ಆದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಂಡು ಉತ್ತಮ ಪ್ರಜೆಯಾಗಲೆಂಬ ಉದ್ದೇಶದಿಂದ ಹೆಸರುಗಳನ್ನು ನಾಮಕರಣ ಮಾಡಲಾಗಿದೆ ಎಂದರು.