ಬೆಂಗಳೂರು:ಸಾಹಿತ್ಯಕ್ಕೆ ಈಗ ಆಪರೇಷನ್ ಮಾಡಲು ಹೊರಟಿದ್ದಾರೆ ನಟ, ಬರಹಗಾರ, ಹಾಡುಗಾರ, ಕಿರು ತೆರೆ ನಿರ್ದೇಶಕ ನವೀನ್ ಕೃಷ್ಣ. ನವೀನ್ ಕೃಷ್ಣ ಹಿರಿಯ ನಟ ಶ್ರೀನಿವಾಸಮೂರ್ತಿ ಅವರ ಹಿರಿಯ ಪುತ್ರ. ಹಾಡಿನಲ್ಲೂ ಮಾಧುರ್ಯ ಕಂಠವನ್ನು ಹೊಂದಿದ್ದಾರೆ. ಈ ಲಾಕ್ ಡೌನ್ ಸಂದರ್ಭದಲ್ಲಿ ಅವರು ಒಂದು ಹೊಸ ಪ್ರಯತ್ನಕ್ಕೆ ಸಜ್ಜಾಗಿದ್ದಾರೆ.
ಅದೇ ಆಪರೇಷನ್ ಸಾಹಿತ್ಯ! ಅನೇಕ ಜನಪ್ರಿಯ ಗೀತೆಗಳನ್ನು ಇಟ್ಟುಕೊಂಡು ಕೆಲವು ಸಾಲುಗಳನ್ನು ಸ್ವತಃ ಹಾಡಿ ನವೀನ್ ಕೃಷ್ಣ ಆಯಾ ಹಾಡುಗಳ ಒಳ ಅರ್ಥವನ್ನು ಹೇಳುತ್ತಾ ಹೋಗುತ್ತಾರೆ. ಒಂದು ಹಾಡು ರಚನೆ ಆದಾಗ ಅದನ್ನು ಆರಾದಿಸಿರುತ್ತೇವೆ. ಆದರೆ ಅಲ್ಲಿ ಅಡಗಿರುವ ಒಬ್ಬ ಸಾಹಿತಿಯ ಸಾಹಿತ್ಯ ಅನುಭವ, ತಾಕತ್ತು ಸಂಗೀತ ಪ್ರಿಯರು ಹೆಚ್ಚಾಗಿ ಗಮನಿಸುವುದಿಲ್ಲ ಎನ್ನುವ ನವೀನ್ ಕೃಷ್ಣ ಕಳೆದ ಹನುಮ ಜಯಂತಿ ಅಂದೆ ಒಂದು ಚಾಲನೆ ನೀಡಿದ್ದಾರೆ.
ಈ ಆಪರೇಷನ್ ಸಾಹಿತ್ಯ ನವೀನ್ ಕೃಷ್ಣ ಆಯ್ಕೆ ಮಾಡಿಕೊಂಡ ಮೊದಲ ಗೀತೆ. ಚಿ.ಉದಯಶಂಕರ್ ಅವರ ರಚನೆ, ಡಾ ರಾಜಕುಮಾರ್ ಕಂಠದಲ್ಲಿ, ಉಪೇಂದ್ರ ಕುಮಾರ್ ಸ್ವರ ಸಂಯೋಜನೆಯ ಹನುಮನ ನೋಡಿದಿರ....ಈ ಗೀತೆಯಲ್ಲಿ ಇರುವ ಶಕ್ತಿ ಹಾಗೂ ತುಲನೆ ಮಾಡಿ ಹನುಮಂತನನ್ನು ವಿವರಿಸಿರುವುದು ಕಂಡಿದೆ. ಎಟುಕದ ಹಣ್ಣನ್ನು ಸಾಮಾನ್ಯವಾಗಿ ಬಿಟ್ಟು ಬಿಡುತ್ತೇವೆ. ಆದರೆ ಆ ಸೂರ್ಯನನ್ನು ಹಿಡಿಯಲು ಹೋಗುವ ಹನುಮ, ಹಾಗೆ ಸಮುದ್ರ ಹಾರುವುದು ಈ ಹಾಡಿನಲ್ಲಿ ಬರುವುದನ್ನು ವಿಶ್ಲೇಷಣೆ ಮಾಡಿದ್ದಾರೆ ನವೀನ್ ಕೃಷ್ಣ.
ಒಂದು ಗೀತೆಯಲ್ಲಿ ಬರುವ ಅದ್ಬುತ ಸಾಲುಗಳನ್ನು ಇಟ್ಟುಕೊಂಡು ಆಪರೇಷನ್ ಸಾಹಿತ್ಯ ಮಾಡಲು ನವೀನ್ ಕೃಷ್ಣ ಎರಡನೇ ಹಾಡನ್ನು ಯುಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಅದೇ ಬಾ ನಲ್ಲೇ ಮಧುಚಂದ್ರಕ್ಕೆ ಸಿನಿಮಾ ಹಾಡು ದಲಿತ ಕವಿ ಸಿದ್ದಲಿಂಗಯ್ಯ ಅವರು ರಚನೆ ಮಾಡಿರುವ ಆ ಬೆಟ್ಟದಲ್ಲಿ....ಬೆಳದಿಂಗಳಲ್ಲಿ....ಸುಳಿದಾಡ ಬೇಡ ಗೆಳತಿ....ಇದು ಪ್ರೇಮ ಗೀತೆ. ಇದರಲ್ಲೂ ಪ್ರೇಮಿಯನ್ನು ಯಾವ ಪರಿಯಾಗಿ ಕಾಪಾಡಿಕೊಳ್ಳುತ್ತಾನೆ ಎಂಬುದು ವ್ಯಕ್ತವಾಗುತ್ತದೆ. ನಾದ ಬ್ರಹ್ಮ ಹಂಸಲೇಖ ಅವರ ಸಂಗೀತ ಈ ಚಿತ್ರಕ್ಕಿದೆ. ಕನ್ನಡದಲ್ಲಿ ಐಎಎಸ್ ಬರೆದು ದೊಡ್ಡ ಹುದ್ದೆ ಏರಿದ ಕೆ.ಶಿವರಾಮು ನಾಯಕ.
ನವೀನ್ ಕೃಷ್ಣ ಹೊಸ ಆಲೋಚನೆಗಳನ್ನು ಮಾಡುವುದರಲ್ಲಿ ನಿಸ್ಸೀಮ. ಧಿಮಾಕು ಸಿನಿಮಾದಿಂದ ನಾಯಕ ಪಟ್ಟ ಏರಿದ ನವೀನ್ ಕೃಷ್ಣ, ಕದಂಬ ಕನ್ನಡ ಸಿನಿಮಾದಲ್ಲಿ ಡಾ ವಿಷ್ಣುವರ್ಧನ್ ಜೊತೆ ಅವರ ಮಗನಾಗಿ ಅದ್ಬುತ ಅಭಿನಯ ನೀಡಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ಒಂದು ಏಕ ಪಾತ್ರಾಭಿನಯ ಮಾಡಿ ಕೊರೊನಾ ಹಿಮ್ಮೆಟ್ಟಿ ನಿಲ್ಲೋಣ ಎಂದು ಕರೆ ನೀಡಿದ್ದಾರೆ.