ಬೆಂಗಳೂರು :ನಬಾರ್ಡ್ ಸಂಸ್ಥೆ ವತಿಯಿಂದ ರಾಜ್ಯ ಮಟ್ಟದ ಸಾಲಗೋಷ್ಠಿಯಲ್ಲಿ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ ಕೃಷಿ ಕ್ಷೇತ್ರ ಈಗ ಉತ್ಪಾದನೆಯಿಂದ ಆದಾಯ ತರುವ ಹಾದಿಗೆ ಬೆಳೆಯಬೇಕಿದೆ ಎಂದರು. ಕೇವಲ 18.21% ಬಂಡವಾಳ ಕೃಷಿ ಕ್ಷೇತ್ರಕ್ಕೆ ಹೂಡಿಕೆ ಆಗುತ್ತಿದೆ, ಇದು ಹೆಚ್ಚಾಗಬೇಕಿದೆ. ಮೀನುಗಾರಿಕೆ ಹಾಗೂ ಹೈನುಗಾರಿಕೆಯಲ್ಲಿ ಬಂಡವಾಳ ಹರಿದು ಬರಬೇಕು. ಜೊತೆಗೆ ರಾಜ್ಯ ಸರ್ಕಾರ ಕೇಂದ್ರದ ಒಂದು ಜಿಲ್ಲೆ ಒಂದು ಉತ್ಪನ್ನಕ್ಕೆ ಉತ್ತೇಜನೆ ನೀಡುತ್ತಿದೆ ಎಂದರು.
ರಾಜ್ಯ 10 ವರ್ಷದಲ್ಲಿ ಸಾಕಷ್ಟು ಅತಿವೃಷ್ಟಿ-ಅನಾವೃಷ್ಟಿ ಅನುಭವಿಸಿದೆ. ಜೊತೆಗೆ ಕಳೆದ ವರ್ಷ ಕೋವಿಡ್ ಮಹಾಮಾರಿಯಿಂದ ಲಾಕ್ಡೌನ್ ಸಂದರ್ಭದಲ್ಲೂ ಉತ್ಪಾದನೆ ಹೆಚ್ಚಾದರೂ, ರೈತರು ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ, ಸಾಲದ ವಿಷಯದಲ್ಲಿ ರೈತರ ಮೇಲೆ ಮೃದು ಧೋರಣೆ ಅನುಸರಿಸಿ ಎಂದು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ವಿವಿಧ ಬ್ಯಾಂಕ್ಗಳ ಅಧಿಕಾರಿಗಳಿಗೆ ಸಲಹೆ ನೀಡಿದರು.
ಮೀನುಗಾರಿಕೆ ಕುರಿತ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಇವೆ. ಇದಕ್ಕೆ ರೈತರು ಬ್ಯಾಂಕ್ನಲ್ಲಿ ನೋಂದಣಿ ಮಾಡಿಕೊಂಡಿದ್ದರು. ಸಾಲದ ಮಂಜೂರು ಆಗಿರುವ ಸಂಖ್ಯೆ ಕಡಿಮೆ ಇದೆ. ಆತ್ಮನಿರ್ಭರ ಭಾರತದ ಯೋಜನೆಯತ್ತ ಬ್ಯಾಂಕ್ ಗಮನ ಹರಿಸಬೇಕು ಎಂದು ವಂದಿತಾ ಶರ್ಮಾ ಬ್ಯಾಂಕ್ಗಳ ಕುರಿತು ಹೇಳಿದರು.
ನಂತರ ಮಾತನಾಡಿದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್, ರಾಜ್ಯದಲ್ಲಿ ಶೇ.55ಕ್ಕಿಂತ ಹೆಚ್ಚು ಭೂ ಹಿಡುವಳಿ 1 ಹೆಕ್ಟರ್ಗಿಂತ ಕಡಿಮೆ ಇದೆ. ಇದರಲ್ಲೂ ರಾಜ್ಯದಲ್ಲಿ ಗುತ್ತಿಗೆ ರೂಪದಲ್ಲಿ ಕೃಷಿ ನಡೆಯುತ್ತಿದೆ, ಈ ಕಾರಣದಿಂದ ಹೆಚ್ಚಿನ ಯೋಜನೆಗಳು ಇವರಿಗೆ ದೊರಕುವುದಿಲ್ಲ ಎಂದರು.
ಇದೇ ವೇಳೆ ಸ್ಟೇಟ್ ಫೋಕಸ್ ಪೇಪರ್ 2021-22 ಪುಸ್ತಕವನ್ನು ಬಿಡುಗಡೆ ಮಾಡಲಾಯಿತು, ಕಾರ್ಯಕಾರಿ ಸಾರಾಂಶ ಹೊತ್ತ ಇದರಲ್ಲಿ 2021-22ರ ಕೃಷಿ ವಲಯದಲ್ಲಿ ₹1,45,213 ಕೋಟಿ ಆದ್ಯತೆ ವಲಯದಲ್ಲಿ ವೆಚ್ಚ ಮಾಡಲು ಸರ್ಕಾರಕ್ಕೆ ಹಾಗೂ ಬ್ಯಾಂಕ್ಗಳಿಗೆ ಸಲಹೆ ನೀಡಲಾಗಿದೆ.
ಕೃಷಿ ಸಾಲಕ್ಕೆ ₹1,16,346 ಕೋಟಿ, ಕೃಷಿ ಮೂಲಸೌಕರ್ಯಕ್ಕೆ ₹ 6,734 ಕೋಟಿ, ಕೃಷಿ ಪೂರಕ ಚಟುವಟಿಕೆಗಳಿಗೆ ₹22,133 ಕೋಟಿ ಸೇರಿ ಒಟ್ಟು ಕೃಷಿ ಸಾಲ ₹1,45,213 ಬ್ಯಾಂಕ್ ನೀಡಬೇಕಿದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ₹1,08,509 ಕೋಟಿ ಸಾಲ ಸೇರಿದಂತೆ ಗೃಹ ಹಾಗೂ ಇತರೆ ಆದ್ಯತೆ ವಲಯಕ್ಕೆ ₹2,96,051 ಸಾಲ ಮುಂದಿನ ಆರ್ಥಿಕ ವರ್ಷದಲ್ಲಿ ನೀಡಬೇಕು ಎಂದು ನಬಾರ್ಡ್ ಬ್ಯಾಂಕ್ಗಳಿಗೆ ಸಲಹೆ ನೀಡಿದೆ.
ಈ ವೇಳೆ ಜಿಕೆವಿಕೆ ಉಪಕುಲಪತಿ ರಾಜೇಂದ್ರ ಪ್ರಸಾದ್, ನಬಾರ್ಡ್ ಮುಖ್ಯ ವ್ಯವಸ್ಥಾಪಕ ನೀರಜ್ ಕುಮಾರ್ ವರ್ಮಾ, ಗ್ರಾಮೀಣ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಮುಖ್ಯಸ್ಥರು ಪಾಲ್ಗೊಂಡಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೃಷಿ ಕುರಿತ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು.
ಇದನ್ನೂ ಓದಿ:ಮೈಸೂರು ಮಹಾನಗರ ಪಾಲಿಕೆ ಜೆಡಿಎಸ್-ಕಾಂಗ್ರೆಸ್ ಪಾಲು:ಮೇಯರ್ ಆಗಿ ರುಕ್ಮಿಣಿ ಮಾದೇಗೌಡ