ಬೆಂಗಳೂರು : ಇಂದು ನಗರದ ಟೌನ್ಹಾಲ್ನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಯಿತು.
ಚುನಾವಣಾ ಆಯೋಗ ಆಯೋಜಿಸಿದ್ದ ಕಾರ್ಯಕ್ರಮವನ್ನು ರಾಜ್ಯಪಾಲ ವಜೂಬಾಯಿ ವಾಲಾ ಉದ್ಘಾಟಿಸಿದರು. ಆ ಬಳಿಕ ಮಾತನಾಡಿದ ಅವರು, ಪ್ರತಿ ನಾಗರಿಕರಿಗೆ ತಮ್ಮ ಜವಾಬ್ದಾರಿ ಅರಿತುಕೊಳ್ಳಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ರಾಷ್ಟ್ರದ ಕಾರ್ಯ ಮಾಡುವವನೇ ನಿಜವಾದ ಕಾರ್ಯಕರ್ತ. ಮತ ಚಲಾವಣೆ ಮಾಡುವುದು ನಮ್ಮ ಅಧಿಕಾರ. ರಾಷ್ಟ್ರದ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾದಷ್ಟೂ ರಾಷ್ಟ್ರ ಬಲಿಷ್ಠ ಆಗುತ್ತದೆ ಎಂದರು.
ರಾಷ್ಟ್ರೀಯ ಮತದಾರರ ದಿನಾಚರಣೆ ಸ್ವಾತಂತ್ರ್ಯ ದೊರಕಿಸಿಕೊಡಲು ಮಹಾತ್ಮ ಗಾಂಧಿ, ವಲ್ಲಭಭಾಯಿ ಪಟೇಲ್ ದುಡಿದಿದ್ದಾರೆ. ವ್ಯಕ್ತಿಗತವಾಗಿ ಅಲ್ಲದೇ ರಾಷ್ಟ್ರದ ಒಳಿತಿಗಾಗಿ ಕೆಲಸ ಮಾಡಿದ ಮಹಾನುಭಾವರು. ಇವರು ನಮ್ಮ ದೇಶಕ್ಕಾಗಿ ದುಡಿದರು. ಇಂದು ಮತದಾರರೂ ಸಹ ಒಂದಾಗಿ ದುಡಿದರೆ ರಾಷ್ಟ್ರದ ಏಳಿಗೆ ಸಾಧ್ಯ. ಆಗ ದೇಶ ಬಲಿಷ್ಠ ಆಗುತ್ತದೆ ಎಂದರು.
ಬಳಿಕ ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರ ಲಿಂಗಾನುಪಾತ 989 ಇದೆ. ಶೇ.69 ರಷ್ಟು ಮತದಾನ ಆಗುತ್ತಿರುವುದು ಸಂತಸದ ವಿಚಾರ ಎಂದು ತಿಳಸಿದರು. ಇದೇ ವೇಳೆ ಯುವ ಮತದಾರರಿಗೆ ಪ್ರತಿಜ್ಞಾವಿಧಿ ಭೋದಿಸಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಯುಕ್ತರಾದ ಬಿ.ಹೆಚ್ .ಅನಿಲ್ ಸೇರಿದಂತೆ ಅನೇಕ ಅಧಿಕಾರಿಗಳು ಭಾಗಿಯಾಗಿದ್ದರು.