ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಕೋಟ್ಪಾ 2003 ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಕುರಿತು ಏರ್ಪಡಿಸಿದ್ದ 5 ದಿನದ ತರಬೇತಿ ಕಾರ್ಯಾಗಾರಕ್ಕೆ ಆಯುಕ್ತರು ಚಾಲನೆ ನೀಡಿದ್ದಾರೆ.
ಮಕ್ಕಳನ್ನು ಹಾಗೂ ಧೂಮಪಾನ ಮಾಡದವರನ್ನು ತಂಬಾಕು ದುಷ್ಪರಿಣಾಮದಿಂದ ದೂರವಿಡಬೇಕು ಹಾಗೂ ಅವ್ಯಾಹತವಾಗಿ ಧೂಮಪಾನ ವಲಯ ಕಾನೂನನ್ನು ಉಲ್ಲಂಘನೆ ಮಾಡುತ್ತಿರುವವರ ಮೇಲೆ ನಿಷ್ಪಕ್ಷಪಾತವಾಗಿ ಕ್ರಮತೆಗೆದುಕೊಳ್ಳಬೇಕು ಎಂದು ಆಯುಕ್ತರು ಉಪಸ್ಥಿತರಿದ್ದ ಎಲ್ಲಾ ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದರು.
ಧೂಮಪಾನ ಮಾಡುವುದರಿಂದ ಹಾಗೂ ಪರೋಕ್ಷ ಧೂಮಪಾನದಿಂದ ದೇಹದ ರೋಗನಿರೋಧಕ ಶಕ್ತಿಯು ಕುಂದುತ್ತದೆ. ಇದರಿಂದ ಕೋವಿಡ್-19 ನಂತಹ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚು. ಸದ್ಯದ ಪರಿಸ್ಥಿತಿಯಲ್ಲಿ, ಕೋವಿಡ್-19 ಸಂಖ್ಯೆಯು ಈಗ ಇಳಿಮುಖ ಕಾಣುತ್ತಿದೆ. ಆದರೆ ಸ್ವಲ್ಪ ನಿರ್ಲಕ್ಷ್ಯತೆ ತೋರಿದರೂ ಕೋವಿಡ್-19 ಪ್ರಮಾಣ ಹೆಚ್ಚಲಿದೆ. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕಾಗಿದೆ ಎಂದು ತಿಳಿಸಿದರು.
ಹೋಟೇಲ್, ಬಾರ್ ಮತ್ತು ರೆಸ್ಟೋರೆಂಟ್, ಪಬ್, ಕ್ಲಬ್‌ಗಳಲ್ಲಿ ಕೋಟ್ಪಾ 2003 ಕಾಯಿದೆಯನ್ನು ಉಲ್ಲಂಘಿಸಿ ಧೂಮಪಾನಕ್ಕೆ ಅವಕಾಶವನ್ನು ನೀಡಲಾಗುತ್ತಿದೆ. ಧೂಮಪಾನ ಮಾಡಲು ಅವಕಾಶ ನೀಡಬೇಕಾಗಿದ್ದಲ್ಲಿ ಅಂತಹ ಸ್ಥಳ ಮಾಲೀಕರು ಕೋಟ್ಪಾ 2003 ಕಾಯಿದೆಯ ಅನುಸಾರ ಧೂಮಪಾನ ವಲಯ/ಕೊಠಡಿಯನ್ನು ನಿರ್ಮಿಸಿ, ಪಾಲಿಕೆಯಿಂದ ನಿರಕ್ಷೇಪಣಾ ಪತ್ರವನ್ನು ತಗೆದುಕೊಂಡು ಅಲ್ಲಿ ಧೂಮಪಾನಕ್ಕೆ ಅನುಮತಿ ನೀಡಬಹುದಾಗಿದೆ. ಹಾಗೊಮ್ಮೆ ಅನುಮತಿ ಪಡೆಯದೆ ಧೂಮಪಾನಕ್ಕೆ ಅವಕಾಶ ನೀಡುವುದಾಗಲಿ, ಧೂಮಪಾನ ವಲಯ ಸ್ಥಾಪಿಸುವುದಾಗಲಿ ಮಾಡಿದ್ದಲ್ಲಿ ಅಂತಹ ವ್ಯಾಪಾರಸ್ಥರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮಾಧಿಕಾರಿ ಹಾಗೂ ಪಶ್ಚಿಮ ವಲಯ ಆರೋಗ್ಯಾಧಿಕಾರಿ ಡಾ.ಮನೋರಂಜನ್ ಹೆಗ್ಡೆ ಮಾತನಾಡಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವು 5 ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಶಾಲಾ ಕಾಲೇಜು ಮಕ್ಕಳಿಗೆ ಅರಿವು, ವಿವಿಧ ಇಲಾಖೆಗಳು ಹಾಗು ಪಾಲುದಾರ ಸಂಸ್ಥೆಗಳ ಪದಾಧಿಕಾರಿಗಳಿಗೆ ಕೋಟ್ಪಾ 2003 ಕಾಯ್ದೆಯ ತರಬೇತಿ, ಐ.ಇ.ಸಿ ಚಟುವಟಿಕೆಗಳು, ತಂಬಾಕು ವ್ಯಸನ ಮುಕ್ತಿ ಸಹಾಯ ಹಾಗು ಅನುಷ್ಠಾನ ಕಾರ್ಯಾಚರಣೆಗಳು ಇದರ ಪ್ರಮುಖ ಅಂಶಗಳಾಗಿದೆ. ಅನುಷ್ಠಾನ ಕಾರ್ಯಾಚರಣೆಯಲ್ಲಿ ವಿವಿಧ ಇಲಾಖೆಗಳ ಸಹಕಾರ ಹಾಗೂ ಸಹಾಯ ಅಗತ್ಯವಾಗಿದೆ. ಶಾಲಾ ಕಾಲೇಜುಗಳ ಹತ್ತಿರ ತಂಬಾಕು ಮಾರಾಟ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ವಿರುದ್ಧ ಇನ್ನು ಮುಂದೆ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.