ಬೆಂಗಳೂರು :ಸಾರ್ವಜನಿಕ ಹಿತಾಸಕ್ತಿಗಿಂತ ರಾಷ್ಟ್ರದ ಭದ್ರತೆ ಅತಿ ಮುಖ್ಯ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ತೆಲಂಗಾಣದ ನಲಗೊಂಡ ಜಿಲ್ಲೆಯ ಯಾದಾದ್ರಿಯಲ್ಲಿ ಶಾಖೋತ್ಪನ್ನ ವಿದ್ಯುತ್ ಘಟಕ ಸ್ಥಾಪನೆ ಸಂಬಂಧ ಟೆಂಡರ್ ನಿರ್ವಹಣೆ ಬಗ್ಗೆ ಮಕಾವ್ಬರ್ ಬೀಕೆ ಪ್ರೈವೇಟ್ ಲಿಮಿಟೆಡ್ ಬಿಡ್ ಪರಿಗಣಿಸುವಂತೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಹೆಚ್‌ಇಎಲ್)ಗೆ ನಿರ್ದೇಶಿಸಿದೆ.
ಚೀನಾ ಮೂಲದ ಫುಜಿಯಾನ್ ಲಾಂಗ್‌ಕಿಂಗ್ ಕಂಪನಿಗೆ ಟೆಂಡರ್ ನೀಡಿದ್ದ ಬಿಎಚ್‌ಇಎಲ್ ಕ್ರಮ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠ ರದ್ದುಗೊಳಿಸಿದೆ. ಇದೇ ವೇಳೆ, ಬಿಹೆಚ್‌ಇಎಲ್‌ನ ಇಂಡಸ್ಟ್ರಿಯಲ್ ಸಿಸ್ಟಂ ಗ್ರೂಪ್ 2022ರ ಸೆಪ್ಟೆಂಬರ್ 29ರಂದು ನೀಡಿದ್ದ ಲೆಟರ್ ಆಫ್ ಇಂಟೆಂಟ್ ಅನ್ನೂ ಸಹ ನ್ಯಾಯಾಲಯ ರದ್ದು ಮಾಡಿದೆ.
ಬಿಎಚ್‌ಇಎಲ್ ಟೆಂಡರ್ ನೀಡುವ ಮುನ್ನ ಹಣಕಾಸು ಸಚಿವಾಲಯ 2020ರ ಜುಲೈ 23ರಂದು ರಾಷ್ಟ್ರದ ರಕ್ಷಣಾ ಆಸಕ್ತಿ ಕುರಿತು ಹೊರಡಿಸಿರುವ ಆದೇಶವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಿತ್ತು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಬಿಟಿಎಲ್‌ಇಪಿಸಿ ಲಿಮಿಟೆಡ್ ಮತ್ತು ಚೀನಾದ ಫುಜಿಯಾನ್ ಲಾಂಗ್‌ಕಿಂಗ್ ಕಂಪನಿಯ ವಹಿವಾಟು ಗಮನದಲ್ಲಿ ಇರಿಸಿಕೊಂಡರೆ ಸಕ್ಷಮ ಪ್ರಾಧಿಕಾರ ಕಂಪನಿಯ ನೋಂದಣಿಗೂ ಮುನ್ನ ಕಡ್ಡಾಯ ಅಗತ್ಯತೆಗಳನ್ನು ಪಾಲಿಸಿಲ್ಲ. ಕಂಪನಿಯ ವಿಚಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿದೆ ಎಂದು ಹೇಳಲಾಗುತ್ತಿದೆ. ಆದರೆ, ರಾಷ್ಟ್ರದ ಭದ್ರತೆಯ ಹಿತಾಸಕ್ತಿ ವಿಚಾರ ಬಂದಾಗ ಸಾರ್ವಜನಿಕ ಹಿತಾಸಕ್ತಿಯು ಗೌಣವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.