ಕರ್ನಾಟಕ

karnataka

ETV Bharat / state

ನಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಕಾಯಿದೆ ತಿದ್ದುಪಡಿಗೆ ವಕೀಲರ ಆಗ್ರಹ

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿರ್ವಸಿಟಿಯ ಕಾರ್ಯಕಾರಿ ಸಮಿತಿ ಮಂಡಳಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಆಯಾ ರಾಜ್ಯಗಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಇರುವಂತೆ ಮಂಡಳಿ ರಚನೆ ಮಾಡುವುದಕ್ಕೆ ವಕೀಲರು ಆಗ್ರಹಿಸಿದ್ದಾರೆ.

lawyer
ವಕೀಲ

By

Published : Jan 26, 2023, 2:23 PM IST

ಬೆಂಗಳೂರು : ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿರ್ವಸಿಟಿಯ ಕಾರ್ಯಕಾರಿ ಸಮಿತಿ ಮಂಡಳಿಯನ್ನು ಪುನರ್ ರಚಿಸಲು ಮತ್ತು ಅದರ ಆಡಳಿತಮಂಡಳಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಆಯಾ ರಾಜ್ಯಗಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಇರುವಂತೆ ಮಂಡಳಿ ರಚನೆ ಮಾಡುವುದಕ್ಕೆ ಅವಕಾಶ ಕಲ್ಪಿಸುವಂತೆ ವಕೀಲರು ಆಗ್ರಹಿಸಿದ್ದಾರೆ. ಈ ಸಂಬಂಧ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಜಿ. ಮಾಧುಸ್ವಾಮಿ ಅವರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ರಾಜ್ಯದ ಹಲವು ಮಂದಿ ವಕೀಲರು ಸಹಿ ಹಾಕಿದ್ದಾರೆ.

ದೇಶದ ಪ್ರತಿಷ್ಠಿತ ಕಾನೂನು ಶಾಲೆಗಳಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ಒಂದಾಗಿದೆ. ಈ ಶಾಲೆ 1986ರ ಕಾಯಿದೆಯಡಿ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಕರ್ನಾಟಕ ಶಾಸನಸಭೆ ಅನುಮೋದಿಸಿದೆ. ಅಲ್ಲದೆ, ಕಾನೂನು ಶಾಲೆಯಲ್ಲಿ ಸ್ಥಳೀಯರಿಗೆ ಶೇ.25ರಷ್ಟು ಮೀಸಲು ಕಲ್ಪಿಸಲು ಶಾಸನ ರೂಪಿಸಿತ್ತು. ಅದನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಇದಾದ ಬಳಿಕ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ತನ್ನ 2021ರ ವಿಸ್ತರಣಾ ಯೋಜನೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಮೀಸಲು ನೀಡುವುದಾಗಿ ತಿಳಿಸಿತ್ತು. ಆದರೆ, ಶಾಲೆಯಲ್ಲಿ ಆಗಿರುವ ನೋಂದಣಿಯನ್ನು ಪರಿಶೀಲಿಸಿದ್ದರೂ ಸಹ ಅದು ಜಾರಿಯಾಗಿರಲಿಲ್ಲ. ಹೀಗಾಗಿ ಕರ್ನಾಟಕ ಕಾಯಿದೆ ತಿದ್ದುಪಡಿ ಮಾಡಿ ಸ್ಥಳಿಯರಿಗೂ ಈ ಕಾನೂನು ಶಾಲೆಯಲ್ಲಿ ಮೀಸಲಾತಿ ಲಭ್ಯವಾಗುವಂತೆ ಮಾಡಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದರು.

ಪ್ರಸ್ತುತ ಕಾನೂನು ಶಾಲೆಯ ಆಡಳಿತವನ್ನು ಜನರಲ್ ಕೌನ್ಸಿಲ್ ಮತ್ತು ಎಕ್ಸಿಕ್ಯೂಟಿವ್ ಕೌನ್ಸಿಲ್‌ನ ಸದಸ್ಯರು ನಿರ್ವಹಿಸುತ್ತಿದ್ದಾರೆ. ಆದರೆ, ಈ ಕೌನ್ಸಿಲ್‌ಗಳಿಗೆ ರಾಜ್ಯದ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿಲ್ಲ. ಆದ್ದರಿಂದ ಈ ಮಂಡಳಿಗಳಿಗೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಜತೆಗೆ ಹೈಕೋರ್ಟ್‌ನ ಇಬ್ಬರು ಹಿರಿಯ ನ್ಯಾಯಮೂರ್ತಿಗಳು, ಕರ್ನಾಟಕ ಮೂಲದ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು, ಕರ್ನಾಟಕ ವಕೀಲರ ಪರಿಷತ್ ಅಧ್ಯಕ್ಷರು, ರಾಜ್ಯ ಕಾನೂನು ಸಚಿವರು, ರಾಜ್ಯ ಅಡ್ವೊಕೇಟ್ ಜನರಲ್ ಸೇರಿದಂತೆ ಸ್ಥಳೀಯ ಪ್ರತಿನಿಧಿಗಳನ್ನು ಸೇರಿಸಬೇಕು. ಅದಕ್ಕೆ ಅನುಕೂಲಕರವಾಗುವಂತಹ ಕಾನೂನುನನ್ನು ತಿದ್ದುಪಡಿ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ರಾಜ್ಯದವರು ಕೇವಲ ನಾಮಕಾವಸ್ತೆಗಾಗಿ ಇರುವ ಪ್ರತಿನಿಧಿತ್ವ ಸಾಲದು. ಕರ್ನಾಟಕ ಮೂಲದ ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳಿಗೆ ನಿಜವಾದ ಪ್ರಾತಿನಿಧ್ಯ ದೊರಕಬೇಕು. ಹಾಗಾಗಿ ಕಾನೂನು ತಿದ್ದುಪಡಿ ಮಾಡುವ ಕುರಿತಂತೆ ಮುಂಬರುವ ಅಧಿವೇಶನದಲ್ಲಿಯೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ಪ್ರತಿಭಟನೆ:ಬೆಂಗಳೂರು ನಗರದ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡದ ಪರಿಣಾಮದಿಂದ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಸೇರಿದಂತೆ ನೂರಾರು ಜನ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಸ್ಥಳೀಯರಿಗೆ ಅವಕಾಶ ನೀಡದ ಶಾಲೆಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ದರು. ಇದೀಗ ಪತ್ರದ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದನ್ನು ಓದಿ:ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿ, ಕನ್ನಡ ಶಾಲೆ ಉಳಿಸಬೇಕಿದೆ: ಹೊರಟ್ಟಿ

ABOUT THE AUTHOR

...view details