ಕರ್ನಾಟಕ

karnataka

ETV Bharat / state

ಸೇವೆ ಖಾಯಂ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ - ಎಐಸಿಸಿಟಿಯು ರಾಜ್ಯಾಧ್ಯಕ್ಷ ಕ್ಲಿಫ್ಟನ್ ಡಿ ರೊಜಾರಿಯೋ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ.

national-labour-union-protest-at-bengaluru
ಸೇವೆ ಖಾಯಂ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

By

Published : Jun 28, 2023, 10:49 PM IST

ಬೆಂಗಳೂರು: ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ (ಎಐಸಿಸಿಟಿಯು) ಸೇವೆ ಖಾಯಂ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೋಲಾರ, ರಾಯಚೂರು, ಹುಬ್ಬಳ್ಳಿ- ಧಾರವಾಡ, ಮಂಗಳೂರು, ಕೊಡಗು, ಕೊಪ್ಪಳ ಮತ್ತು ಬೆಂಗಳೂರಿನಲ್ಲಿ ಬುಧವಾರ ಪ್ರತಿಭಟನೆಗಳನ್ನು ಹಮ್ಮಿಕೊಂಡಿತ್ತು.

ನಗರದ ಫ್ರೀಡಂ ಪಾರ್ಕ್​ನಲ್ಲಿ ನಡೆದ ಪ್ರತಿಭಟನೆಯಲ್ಲಿ ಎಐಸಿಸಿಟಿಯು ರಾಜ್ಯಾಧ್ಯಕ್ಷ ಕ್ಲಿಫ್ಟನ್ ಡಿ ರೊಜಾರಿಯೋ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳಿಂದಾಗಿ ಕಾರ್ಮಿಕರು ಹಲವಾರು ಸಂಕಷ್ಟಗಳನ್ನು ಎದುರಿಸಬೇಕಾಯಿತು. ಪ್ರಸ್ತುತ ಸರ್ಕಾರವು ಕಾರ್ಮಿಕರ ಹಕ್ಕೊತ್ತಾಯಗಳನ್ನು ಈಡೇರಿಸುವುದರೊಂದಿಗೆ ಕನಿಷ್ಠ ವೇತನವನ್ನು ರೂ. 35,000ಕ್ಕೆ ಹೆಚ್ಚಳ ಮಾಡಬೇಕು. ಉದ್ಯೋಗ ಭದ್ರತೆಯನ್ನು ಒದಗಿಸಬೇಕು ಮತ್ತು ಸರ್ಕಾರಿ ಮತ್ತು ಖಾಸಗಿ ವಲಯದ ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಹಲವಾರು ಸರ್ಕಾರಗಳು ಬಂದು ಹೋಗಿವೆ. ಆದರೂ ಕಾರ್ಮಿಕರು ಮಾತ್ರ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ನಾವು ಕನಿಷ್ಠ ವೇತನದ ಹೆಚ್ಚಳಕ್ಕಾಗಿ, ಸಾಮಾಜಿಕ ಭದ್ರತೆಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.

ಬಿಬಿಎಂಪಿ ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ಎಂ. ನಿರ್ಮಲ ಮಾತನಾಡಿ, 2022ರ ಜುಲೈ ತಿಂಗಳಿನಲ್ಲಿ ನಾಲ್ಕು ದಿನಗಳವರೆಗೆ ಪೌರಕಾರ್ಮಿಕರು ಮುಷ್ಕರವನ್ನು ಮಾಡಿ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು ಮತ್ತು ಆಟೋ ಡ್ರೈವರ್ಸ್ ಮತ್ತು ಸಹಾಯಕರನ್ನು ನೇರ ಪಾವತಿ ವೇತನದಡಿ ತಂದು ಖಾಯಂಗೊಳಿಸಬೇಕೆಂದು ಹಕ್ಕೊತ್ತಾಯವನ್ನು ಮಂಡಿಸಲಾಗಿತ್ತು. ಹಿಂದಿನ ಬಿಜೆಪಿ ಸರ್ಕಾರ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಇನ್ನೂ ಆಗಿಲ್ಲ. ಈಗಿನ ಸರ್ಕಾರದಲ್ಲಿ ಆಗಬಹುದು ಎಂದು ವಿಶ್ವಾಸವನ್ನು ಹೊಂದಿದ್ದೇವೆ. 2017ರಲ್ಲಿ ಕಾಂಗ್ರೆಸ್ ಸರ್ಕಾರ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಕನಿಷ್ಠ ವೇತನವನ್ನು ಹೆಚ್ಚಳ ಮಾಡಿತ್ತು. ಮತ್ತೆ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸುತ್ತಾರೆ ಎಂದು ನಂಬಿದ್ದೇವೆ ಎಂದು ಹೇಳಿದರು.

ಎಐಸಿಸಿಟಿಯು ರಾಜ್ಯ ಕಾರ್ಯದರ್ಶಿ ಪಿ.ಪಿ. ಅಪ್ಪಣ್ಣ ಮಾತನಾಡಿ, ಕಾರ್ಮಿಕ ವಿರೋಧಿ ನೀತಿಗಳು, ಕಾರ್ಖಾನೆ ಕಾಯ್ದೆಯನ್ನು ಒಳಗೊಂಡಂತೆ ಇತರ ಕಾಯ್ದೆಗಳಿಗೆ ತಂದ ತಿದ್ದುಪಡಿಗಳು ಮತ್ತು ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ಹಿಂಪಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಎಐಸಿಸಿಟಿಯು ವತಿಯಿಂದ ಹಲವಾರು ಪ್ರತಿಭಟನೆಗಳು ನಡೆಯುತ್ತಿದ್ದು, ಕಳೆದ 500ಕ್ಕೂ ಹೆಚ್ಚು ದಿನಗಳಿಂದ ಬೆಂಗಳೂರಿನ ಐ.ಟಿ.ಐ ಕಾರ್ಮಿಕರು ಕೆಲಸ ನಿರಾಕರಣೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಯಾಜಾಕಿ ಕಾರ್ಮಿಕರು ಸಹ ಕೆಲಸ ನಿರಾಕರಣೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಪೌರಕಾರ್ಮಿಕರು ಹಾಗೂ ಗಾರ್ಮೆಂಟ್ ಕಾರ್ಮಿಕರು ಸಹ ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುತ್ತಿದ್ದಾರೆ. ಈ ಕಾರ್ಮಿಕರ ಹಕ್ಕೊತ್ತಾಯಗಳನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿದರು.

ರೆಡಿ- ಮಿಕ್ಸ್ ಕಾಂಕ್ರೀಟ್ ಕಂಪನಿ, ಐಟಿಐ, ಎನ್ ಎ ಎಲ್, ಪೌರಕಾರ್ಮಿಕರು, ಆಟೋ ಚಾಲಕರು ಮತ್ತು ಸಹಾಯಕರು, ಬೀದಿ ವ್ಯಾಪಾರಿಗಳು, ನಿಮ್ಹಾನ್ಸ್, ವಿಕ್ಟೊರಿಯಾ, ಸೆಂಟ್ ಫಿಲೋಮಿನಾಸ್ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುವ ಹೌಸ್ ಕೀಪಿಂಗ್ ಕಾರ್ಮಿಕರು, ಆಟೋ ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು, ಮತ್ತು ಇತರೆ ಕಾರ್ಮಿಕರು ರಾಜ್ಯಾದ್ಯಂತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ :ಕಾಂಗ್ರೆಸ್ ಸರ್ಕಾರ ಜನರ ಕಿವಿಗೆ ಹೂ ಇಡುವ ಕೆಲಸ ಮಾಡ್ತಿದೆ: ಬಿ.ವೈ.ವಿಜಯೇಂದ್ರ

ABOUT THE AUTHOR

...view details