ಬೆಂಗಳೂರು: ಉಗ್ರ ಸಂಘಟನೆಗಳೊಂದಿಗೆ ನಂಟು ಶಂಕೆ ಹಿನ್ನೆಲೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕರ್ನಾಟಕದ ಬೆಂಗಳೂರು ಸೇರಿದಂತೆ ನಾಲ್ಕು ರಾಜ್ಯಗಳ ಸುಮಾರು 20 ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿದೆ. ಕರ್ನಾಟಕದ 11 ಸ್ಥಳಗಳು, ಜಾರ್ಖಂಡ್‌ನ 4, ಮಹಾರಾಷ್ಟ್ರದ 3 ಮತ್ತು ದೆಹಲಿಯ 1 ಸ್ಥಳಗಳಲ್ಲಿ ಎನ್ಐಎ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸುತ್ತಿದೆ. ಬೆಂಗಳೂರಿನ ಪುಲಿಕೇಶಿ ನಗರ, ಶಿವಾಜಿ ನಗರ, ಜೆ ಸಿ ನಗರದ ಚಿನ್ನಪ್ಪ ಗಾರ್ಡನ್ ಸೇರಿದಂತೆ ಹಲವು ಕಡೆ, ಬಳ್ಳಾರಿಯ ಕೆಲವೆಡೆ ದಾಳಿ ಮುಂದುವರೆದಿದೆ.
ಬಳ್ಳಾರಿ ನಗರಕ್ಕೆ ಎನ್ಐಎದಿಂದ ಏಕಾಏಕಿ ದಾಳಿ:ಇಂದು ಬೆಳಗ್ಗೆಯಿಂದಲೇ ಬಳ್ಳಾರಿಯಲ್ಲಿ ಎನ್‌ಐಎ ಕಾರ್ಯಾಚರಣೆ ಆರಂಭವಾಗಿದ್ದು, ನಿಷೇಧಿತ ಪಿಎಫ್‌ಐ ಸಂಘಟನೆಯ ಕೆಲ ಸದಸ್ಯರ ಮನೆಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಬಳ್ಳಾರಿಯ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದ ವ್ಯಕ್ತಿಯ ಬಳಿ ಇದ್ದ ವಸ್ತುವನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಇದಲ್ಲದೆ ಕಾನೂನುಬಾಹಿರ ಚಟುವಟಿಕೆಗೆ ಯತ್ನಿಸುತ್ತಿದ್ದ ಆರೋಪದಡಿ ಪಿಎಫ್‌ಐ ಮಾಜಿ ಪ್ರಧಾನ ಕಾರ್ಯದರ್ಶಿಯೊಬ್ಬರ ಮನೆಯಲ್ಲೂ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಬಳ್ಳಾರಿ ನಗರದ ಕೌಲ್ ಬಜಾರ್, ಬ್ರೂಸ್ಪೇಟೆ ಮತ್ತು ಗಾಂಧಿನಗರ ಠಾಣೆ ವ್ಯಾಪ್ತಿಯ ಐದಾರು ಕಡೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ, ಕಡತಗಳನ್ನು ಪರಿಶೀಲಿಸುತ್ತಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಹೈದರಾಬಾದ್ನ ಎನ್ಐಎ ಅಧಿಕಾರಿಗಳು ಬಳ್ಳಾರಿಯಲ್ಲಿ ಆರೋಪಿಯೊಬ್ಬನನ್ನು ಬಂಧಿಸಿ ಕರೆದೊಯ್ದಿದ್ದರು.