ಬೆಂಗಳೂರು:ನಗರ ಹೊರವಲಯದ ಹಸಿರುತಾಣ ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಐಐಎಚ್‌ಆರ್ ಆಯೋಜಿಸಿರುವ ಐದು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳ ಈಗ ಅತ್ಯಂತ ಜನಾಕರ್ಷಣೆಯ ತಾಣವಾಗಿ ಹೊರಹೊಮ್ಮುತ್ತಿದೆ.
ಕೊರೊನಾ ಆತಂಕದ ನಡುವೆಯೂ ಸಾವಿರಾರು ಜನ ತೋಟಗಾರಿಕಾ ಮೇಳದತ್ತ ಹೆಜ್ಜೆ ಹಾಕುತ್ತಿದ್ದಾರೆ. ಎರಡನೇ ದಿನವಾದ ಮಂಗಳವಾರವೂ ಮೇಳದ ಎಲ್ಲೆಡೆ ಜನವೋ ಜನ. ರೈತರು, ರೈತ ಮಹಿಳೆಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಆಸಕ್ತರು ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದರು. ಬಗೆ ಬಗೆಯ ಹೂವು-ಹಣ್ಣು-ತರಕಾರಿಗಳನ್ನು ಕಣ್ತುಂಬಿಕೊಂಡರು. ಮಳಿಗೆಗಳಲ್ಲಿ ತಮಗೆ ಬೇಕಾದ ಹಣ್ಣು-ತರಕಾರಿ ಬೀಜ-ಗೊಬ್ಬರ ಕುರಿತು ಮಾಹಿತಿಗಳನ್ನು ಪಡೆದರು.
ತೋಟಗಾರಿಕಾ ಯಂತ್ರೋಪಕರಣಗಳ ಉಪಯೋಗವನ್ನು ಪ್ರಾತ್ಯಕ್ಷಿಕೆ ಮೂಲಕ ವೀಕ್ಷಿಸಿದರು. ವಿಶೇಷವಾಗಿ ಐಐಎಚ್‌ಆರ್‌ನ ವಿಶೇಷ ತರಕಾರಿ, ಪುಷ್ಪ ಮತ್ತು ಔಷಧೀಯ ಬೀಜ ಹಾಗೂ ಸಸ್ಯಗಳ ಮಾರಾಟ ಮಳಿಗೆಗಳ ಸುತ್ತಲೂ ಜನರು ಮುಗಿಬಿದ್ದಿದ್ದರು. ಇಲ್ಲಿ ಅಭಿವೃದ್ಧಿಪಡಿಸಿರುವ ಹಣ್ಣು ಮತ್ತು ತರಕಾರಿಗಳ ಬೀಜಗಳಿಗೆ ರೈತರಿಂದ ಭಾರೀ ಬೇಡಿಕೆ ಇರುವುದು ಕಂಡುಬಂತು. ಈ ಬಾರಿಯ ಮೇಳಕ್ಕೆ ಬೆಂಗಳೂರು ಹೊರತುಪಡಿಸಿ, ದೂರ ದೂರದ ಊರುಗಳಿಂದಲೂ ಸ್ತ್ರೀಶಕ್ತಿ ಗುಂಪು, ಸ್ವಸಹಾಯ ಸಂಘಗಳು, ರೈತರ ಆಸಕ್ತ ಗುಂಪುಗಳು ತಂಡೋಪ ತಂಡವಾಗಿ ಆಗಮಿಸಿದ್ದವು. ಆಸಕ್ತರು, ತೋಟಗಾರಿಕೆಯನ್ನು ಉದ್ಯಮವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುವುದರ ಕುರಿತು ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು, ತಂತ್ರಜ್ಞರಿಂದ ಅಗತ್ಯ ಮಾಹಿತಿ ಪಡೆದರು.