ಬೆಂಗಳೂರು: ಮೇಕೆದಾಟು ಅಣೆಕಟ್ಟು ಯೋಜನೆ ಕುರಿತಂತೆ ಚೆನ್ನೈ ಭಾಗದ ಪತ್ರಿಕೆಗಳು ಮಾಡಿದ್ದ ವರದಿ ಆಧರಿಸಿ ರಾಜ್ಯದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ತಾನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣವನ್ನು ಕೈಬಿಟ್ಟಿದೆ. ಕರ್ನಾಟಕ ಸರ್ಕಾರ ಸಂಬಂಧಿತ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆ ಪರಿಸರ ಕಾನೂನುಗಳನ್ನು ಉಲ್ಲಂಘಿಸಿ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದೆ ಎಂದು ಆರೋಪಿಸಿ ಚನ್ನೈನಲ್ಲಿ ಪ್ರಸಾರವಾಗುವ ಕೆಲ ಪತ್ರಿಕೆಗಳು ಕಳೆದ ಏಪ್ರಿಲ್ 15ರಂದು ವರದಿ ಮಾಡಿದ್ದವು.
ಈ ಹಿನ್ನೆಲೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2021ರ ಮೇ 21ರಂದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಜತೆಗೆ ರಾಜ್ಯ, ಕೇಂದ್ರ ಸರ್ಕಾರದ ಹಲವು ಇಲಾಖೆಗಳು ಹಾಗೂ ಪ್ರಾಧಿಕಾರಗಳಿಗೆ ನೋಟಿಸ್ ಜಾರಿ ಮಾಡಿತ್ತು. ಜುಲೈ 5ರೊಳಗೆ ನೋಟಿಸ್ಗೆ ಉತ್ತರಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆ ರಾಜ್ಯ ಸರ್ಕಾರ ಎನ್ಜಿಟಿ ಸುಮೊಟೊ ಪ್ರಕರಣ ದಾಖಲಿಸಿಕೊಂಡ ಕ್ರಮವನ್ನು ಮರು ಪರಿಶೀಲಿಸುವಂತೆ ಕೋರಿ ಜೂನ್ 9ರಂದು ಅರ್ಜಿ ಸಲ್ಲಿಸಿತ್ತು.