ಬೆಂಗಳೂರು: ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಪಾಲಿಕೆ ವ್ಯಾಪ್ತಿಯ ಪ್ರಮುಖ ಮಾಲ್ಗಳಲ್ಲಿ ರಾಷ್ಟ್ರಧ್ವಜ ಮಾರಾಟ ಮಾಡಲಾಗುವುದು ಎಂದು ಪಾಲಿಕೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ 75ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ನಿಮಿತ್ತ ಆಗಸ್ಟ್ 13 ರಿಂದ 15 ರವರೆಗೆ ಹಮ್ಮಿಕೊಂಡಿರುವ "ಹರ್ ಘರ್ ತಿರಂಗಾ"(ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ) ಅಭಿಯಾನದ ಪ್ರಯುಕ್ತ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತಗಾರ ರಾಕೇಶ್ ಸಿಂಗ್ ಪೂರ್ವ ವಲಯದ ಜಂಟಿ ಆಯುಕ್ತೆ ಶಿಲ್ಪಾ ಅವರಿಗೆ ಹಣವನ್ನು ನೀಡುವ ಮೂಲಕ ಸೋಮವಾರ ಧ್ವಜವನ್ನು ಸ್ವೀಕರಿಸಿ ಅಧಿಕೃತವಾಗಿ ಅಭಿಯಾನಕ್ಕೆ ಚಾಲನೆ ನೀಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಯಲಹಂಕ ವಲಯದ ಜಂಟಿ ಆಯುಕ್ತೆ ಪಿ. ವಿ ಪೂರ್ಣಿಮಾರಿಗೆ ಹಣವನ್ನು ನೀಡಿ ಧ್ವಜ ಸ್ವೀಕರಿಸಿದರು. ಈ ವೇಳೆ, ಪೌರ ಕಾರ್ಮಿಕರು ಹಾಗೂ ಹಿರಿಯ ನಾಗರಿಕರಿಗೆ ರಾಷ್ಟ್ರ ಧ್ವಜ ನೀಡಿ ತಮ್ಮ ತಮ್ಮ ಮನೆಗಳಲ್ಲಿ ಆಗಸ್ಟ್ 13 ರಿಂದ 15 ರವರೆಗೆ ಧ್ವಜಗಳನ್ನು ಹಾರಿಸಲು ಕರೆ ನೀಡಿದರು.
ಮಾಲ್ಗಳಲ್ಲಿ ಧ್ವಜಗಳ ಮಾರಾಟ:ಹರ್ ಘರ್ ತಿರಂಗಾ ಅಭಿಯಾನದ ನಿಮಿತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಯಾ ವಲಯ ಜಂಟಿ ಆಯುಕ್ತರ ಕಚೇರಿ, ವಾರ್ಡ್ ಕಚೇರಿಗಳಿಗೆ ನಾಗರಿಕರಿಗೆ ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲದೇ, ವಲಯದ ಪ್ರಮುಖ ಸ್ಥಳ/ಮಾಲ್ಗಳಲ್ಲಿ ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.