ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ಶಿಕ್ಷಣ ನೀತಿ-2020: ವಿದ್ಯಾರ್ಥಿಗಳಿಗೇನು ಲಾಭ? ವಿರೋಧವೇಕೆ? ಇಲ್ಲಿದೆ ಮಾಹಿತಿ.. - ರಾಷ್ಟ್ರೀಯ ಶಿಕ್ಷಣ ನೀತಿ

ರಾಜ್ಯ ಸರ್ಕಾರ ದೇಶದಲ್ಲೇ ಮೊದಲಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ಜಾರಿ ಮಾಡಿದೆ. ಈ ಬಗ್ಗೆ ಪರ-ವಿರೋಧ ಅಭಿಪ್ರಾಯಗಳಿವೆ.

what-is-national-education-policy-
ರಾಷ್ಟ್ರೀಯ ಶಿಕ್ಷಣ ನೀತಿ-2020

By

Published : Aug 26, 2021, 11:23 AM IST

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಿದ ಮೊದಲ ರಾಜ್ಯವಾಗಿ ಕರ್ನಾಟಕ ಹೆಸರು ಪಡೆದಿದೆ. ಇದರ ನಡುವೆ ಪರ-ವಿರೋಧದ ಚರ್ಚೆಗಳು ಮುಂದುವರೆದಿವೆ.

ಕೆಲವರು ಶಿಕ್ಷಣ ನೀತಿ ಜಾರಿಯಿಂದಾಗಿ ಹೊಸ ಬದಲಾವಣೆ ಆಗಲಿದೆ ಅಂದರೆ, ಇನ್ನೂ ಕೆಲವರು ಇದು ಶಿಕ್ಷಣ ವಿರೋಧಿ ನೀತಿಯಾಗಿದ್ದು ಕಾರ್ಪೊರೇಟ್ ಪರವಾಗಿದೆ. ಬಡ ವಿದ್ಯಾರ್ಥಿಗಳ ಕಲಿಕೆಗೆ ಪೆಟ್ಟು ಕೊಡುವ ಕೆಲಸ ಅಂತಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನದ ಮಾರ್ಗಸೂಚಿಗಳು- ಶಿಕ್ಷಣದ ಸಂಪೂರ್ಣ ಮಾರಾಟದ ನೀಲಿ ನಕ್ಷೆ ಅಂತ ವಿದ್ಯಾರ್ಥಿ ಸಂಘಟನೆಗಳು ಖಂಡಿಸಿವೆ.

ಈ ಕುರಿತು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್​ನ ರಾಜ್ಯ ಸೆಕ್ರೆಟರಿ ರಾಜೇಶ್ ಭಟ್ ಮಾತನಾಡಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ ಭಾಗವಾಗಿ ನಾಲ್ಕು ವರ್ಷದ ಪದವಿ ಕೋರ್ಸ್ ತರಲು ಸರ್ಕಾರ ಹೊರಟಿದೆ. ಇದನ್ನು ನಾವು ವಿರೋಧಿಸುತ್ತೇವೆ. ಸಾಂಕ್ರಾಮಿಕ ರೋಗ ನೆಪ ಇಟ್ಟು, ಕೇಂದ್ರ ಸರ್ಕಾರ ಯಾವುದೇ ಚರ್ಚೆಗೆ ಕರೆಯದೇ ಏಕಾಏಕಿ ವಿದೇಶಿ ಕಾರ್ಪೊರೇಟ್ ಪರವಾಗಿ ಶಿಕ್ಷಣವನ್ನು ವ್ಯಾಪಾರೀಕರಣದ ಭಾಗವಾಗಿ ಈ ನೀತಿ ತರಲಾಗಿದೆ ಎಂದು ಆರೋಪಿಸಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಪ್ರತಿಕ್ರಿಯೆ

ಜ್ಞಾನಾರ್ಜನೆಯ ಕೇಂದ್ರಗಳಾಗಿದ್ದ ವಿಶ್ವವಿದ್ಯಾಲಯಗಳನ್ನು ಸರ್ಟಿಫಿಕೇಟ್‍ಗಳನ್ನು ಮಾರಾಟ ಮಾಡುವ ವ್ಯಾಪಾರಿ ಕೇಂದ್ರಗಳನ್ನಾಗಿ ಮಾಡುವ ಮೂಲಕ ಕಾರ್ಪೊರೇಟ್ ಮನೆತನಗಳು ಶೈಕ್ಷಣಿಕ ರಂಗದಲ್ಲಿ ವಿಪರೀತ ಲಾಭಗಳಿಸಲು ಸರ್ಕಾರವೇ ಮಣೆಹಾಕಿದೆ. ಕಾಲೇಜುಗಳಲ್ಲಿ ಸೀಟು ಸಿಗುವುದು ಕಷ್ಟವಾಗಲಿದೆ ಎಂದಿದ್ದಾರೆ.

ಉನ್ನತ ಶಿಕ್ಷಣ ಪರಿಷತ್ ಆಗಲಿ ಅಥವಾ ಸರ್ಕಾರವಾಗಲಿ ಶೈಕ್ಷಣಿಕ ವಿಷಯಗಳ ಕುರಿತು ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡುವುದು ತರವಲ್ಲ. ಈ ಮೂಲಕ ಸರ್ಕಾರ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಸ್ವಾಯತ್ತತೆಯ ಹರಣ ಮಾಡಲಿದೆ. ಪದವಿ ಕೋರ್ಸ್​​ಗಳನ್ನು ಕ್ರೆಡಿಟ್‌ಗಳಿಕೆಯ ಗೋಜಲಿಗೆ ತಳ್ಳಲಾಗಿದೆ. ಮೂರು ವಿಷಯಗಳನ್ನು ಓದುವ ಬದಲು ಒಂದು ಅಥವಾ ಎರಡು ವಿಷಯಗಳಿಗೆ ಮಾತ್ರವೇ ಪದವಿ ಕೋರ್ಸನ್ನು ಸೀಮಿತಗೊಳಿಸಲಾಗಿದೆ. ಇದರಿಂದಾಗಿ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರು ದೊಡ್ಡ ಪ್ರಮಾಣದಲ್ಲಿ ಕೆಲಸ ಕಳೆದುಕೊಳ್ಳಲಿದ್ದಾರೆ. ಕನ್ನಡ ಭಾಷೆಯ ಕಲಿಕೆಯನ್ನು ಒಂದು/ಎರಡು ವರ್ಷಕ್ಕೆ ಸೀಮಿತಗೊಳಿಸಿರುವುದರಿಂದ ಭಾಷಾ ಕಲಿಕೆ, ಬೆಳವಣಿಗೆ ಕುಂಠಿತಗೊಳ್ಳಲಿದೆ ಎಂಬ ಆರೋಪ ಕೇಳಿಬಂದಿದೆ.

ಇನ್ನು 4ನೇ ವರ್ಷದ ಹಾನರ್ಸ್ ಪದವಿಯನ್ನು ಎಲ್ಲಾ ವಿಶ್ವವಿದ್ಯಾಲಯಗಳು ನಡೆಸಲೇಬೇಕಂತಿಲ್ಲ. 4ನೇ ವರ್ಷದ ಪದವಿ ಕೋರ್ಸ್​​ ಅನ್ನು ಸೌಲಭ್ಯ ಇದ್ದಲ್ಲಿ ವಿದ್ಯಾರ್ಥಿಗಳು ಪದವಿ ಪಡೆಯಬಹುದಂತೆ. ಅಂದರೆ ಸರ್ಕಾರವೇ ವಿದ್ಯಾರ್ಥಿಗಳನ್ನು ಖಾಸಗಿ ವಿಶ್ವವಿದ್ಯಾಲಯಗಳತ್ತ ತಳ್ಳುತ್ತಿದೆ. ಶೇ.40ರಷ್ಟು ಕ್ರೆಡಿಟ್​​ಗಳನ್ನು ಆನ್​ಲೈನ್ ಮೂಲಕ ಪಡೆದುಕೊಳ್ಳಬಹುದು ಎಂದು ಹೇಳುವ ಮೂಲಕ ಜ್ಞಾನಾರ್ಜನೆಯ ಪ್ರಕ್ರಿಯೆಯನ್ನು ನಾಶಗೊಳಿಸಲಾಗುತ್ತದೆ ಅಂತ ವಿದ್ಯಾರ್ಥಿ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ.

ಆನ್​ಲೈನ್ ಶಿಕ್ಷಣ ಪೂರಕವಲ್ಲ

ಆನ್​​ಲೈನ್ ಶಿಕ್ಷಣ ಜ್ಞಾನಾರ್ಜನೆಗೆ ಪೂರಕವಾಗಿಲ್ಲ ಹಾಗೂ ಬಡ ವಿದ್ಯಾರ್ಥಿ ವಿರೋಧಿ ಎಂಬುದು ಲಾಕ್​ಡೌನ್ ಸಂದರ್ಭದಲ್ಲಿ ಸಾಬೀತಾದರೂ ಶಿಕ್ಷಣ ತಜ್ಞರ, ವಿದ್ಯಾರ್ಥಿ ಸಂಘಟನೆಗಳ ಆತಂಕವನ್ನು ಸಾರಾಸಗಟಾಗಿ ಸರ್ಕಾರ ಆನ್​​ಲೈನ್ ಶಿಕ್ಷಣಕ್ಕೆ ಹಸಿರು ನಿಶಾನೆ ತೋರಿಸಿರುವುದನ್ನು ಖಂಡಿಸಲಾಗ್ತಿದೆ. ಈ ನಡೆಯು ದೇಶದ ವಿಜ್ಞಾನ ಹಾಗೂ ಸಂಶೋಧನಾ ಬೆಳವಣಿಗೆಗೆ ಮಾರಕವಾಗಲಿದೆ ಅನ್ನೋ ಕೂಗು ಕೇಳಿ ಬರುತ್ತಿದೆ.

ಹೊಸ ಶಿಕ್ಷಣ ನೀತಿ ಜಾರಿಗಿಂತ ಅನುಷ್ಠಾನವೇ ದೊಡ್ಡ ಚಾಲೆಂಜ್

ಹೊಸ ಶಿಕ್ಷಣ ನೀತಿ ದೇಶದ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿದ್ದು ಸಮಯೋಚಿತ ನಿರ್ಧಾರವಾಗಿದೆ. ಹೊಸ ಶಿಕ್ಷಣ ನೀತಿ ಜಾರಿಗಿಂತ ಅನುಷ್ಠಾನನವೇ ದೊಡ್ಡ ಚಾಲೆಂಜ್ ಅಂತ ಎಂವಿಜೆ ಕಾಲೇಜಿನ ಕಂಟ್ರೋಲರ್ ಆಫ್ ಎಕ್ಸಾಮಿನೇಷನ್​​ನ ವಾಮನ್ ಬಿ ಗುಡಿ ಅಭಿಪ್ರಾಯ ಪಟ್ಟಿದ್ದಾರೆ. ಹೊಸ ಶಿಕ್ಷಣ ನೀತಿಯ ಪ್ರಥಮ ಹಂತದಲ್ಲಿ ಮಾತೃ ಭಾಷಾ ಕಲಿಕೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ.

ಕೌಶಲ್ಯ ಅಭಿವೃದ್ಧಿ ಹಾಗೂ ಅದನ್ನು ಹೊರತರಲು ಸಾಧ್ಯವಾಗುತ್ತೆ‌. ಹಾಗೇ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಅವರಿಗೆ ಅನುಕೂಲಕ್ಕೆ ತಕ್ಕಂತೆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ವಿಧಾನವಿದೆ. ಇನ್ನು ಈ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಸರ್ಕಾರದ ಪಾತ್ರವಲ್ಲದೇ, ಬದಲಿಗೆ ಉಪನ್ಯಾಸಕರು, ವಿದ್ಯಾರ್ಥಿಗಳು ಎಲ್ಲರ ಸಹಕಾರವೂ ಅಗತ್ಯ. ವಿರೋಧಿಸುವ ಕಾರಣಕ್ಕೆ ವಿನಾಕಾರಣ ವಿರೋಧ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಯಾವಾಗ ಬೇಕಾದರೂ ಪದವಿ ಮುಗಿಸಿ

ಹೊಸ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ಆಗಿದೆ. 5 ವರ್ಷಗಳ ಕಾಲ ಉನ್ನತ ಶಿಕ್ಷಣ ಪಡೆದುಕೊಳ್ಳುವ ವ್ಯವಸ್ಥೆ ಇತ್ತು. ಮೂರು ವರ್ಷ ಪದವಿ ಇನ್ನೆರಡು ವರ್ಷ ಸ್ನಾತಕೋತ್ತರ ಪದವಿ ಇತ್ತು. ಇದೀಗ ಅದರಲ್ಲಿ ಪದವಿ ಶಿಕ್ಷಣದಲ್ಲಿ ಮೂರು ವರ್ಷ ಬದಲಿಗೆ ನಾಲ್ಕು ವರ್ಷ ಮಾಡಲಾಗಿದೆ. ಇದರಲ್ಲಿ ಸಣ್ಣ ಬದಲಾವಣೆ ಆಗಿದ್ದು, ಎಕ್ಸಿಟ್ - ಎಂಟ್ರಿ ಆಯ್ಕೆ ಇರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಅಂತ ಪ್ರಾಧ್ಯಾಪಕರು ಮತ್ತು ನೂತನ ಶಿಕ್ಷಣ ನೀತಿಯ ಪಠ್ಯಕ್ರಮ ಸಮಿತಿಯ ಸದಸ್ಯರೂ ಆಗಿರುವ ಪ್ರೊ.ಡಾ.ಅಶೋಕ್ ಹಂಜಗಿ ತಿಳಿಸಿದರು.

ಮೊದಲನೇ ವರ್ಷ ವಿದ್ಯಾರ್ಥಿಯು ತನಗಿಷ್ಟವಾದ ಕೌಶಲ್ಯಾಧಾರಿತ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು. ಒಂದು ವರ್ಷ ಮುಗಿದ ಬಳಿಕ ಅನಾನುಕೂಲದಿಂದಲೂ ಅಥವಾ ಉದ್ಯೋಗ ಪಡೆದುಕೊಳ್ಳಲು ತೀರ್ಮಾನಿಸಿದರೆ ಕ್ವಿಟ್ ಮಾಡಬಹುದು. ಆಗ ಆತನಿಗೆ ಸರ್ಟಿಫಿಕೇಟ್ ಕೋರ್ಸ್ ಅಂತ ನೀಡಲಾಗುತ್ತೆ. ಇದರೊಂದಿಗೆ ಅವನ ಶಿಕ್ಷಣ ಅಂತ್ಯವಾಗೋಲ್ಲ, ಬದಲಿಗೆ ಮತ್ತೆ ವಾಪಸ್ ಬಂದು ಶಿಕ್ಷಣವನ್ನ ಮುಂದುವರೆಸಬಹುದು. ಇದರಲ್ಲಿ ಯಾವುದೇ ಅನಾನುಕೂಲ ಇಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ರಾಷ್ಟ್ರೀಯ ಶಿಕ್ಷಣ ನೀತಿ 2020: ಮಕ್ಕಳು, ಪೋಷಕರಲ್ಲಿ ಮೂಡಿದ ಪ್ರಶ್ನೆಗಳಿಗೆ ತಜ್ಞರಿಂದ ವಿವರಣಾತ್ಮಕ ಉತ್ತರಗಳು

ABOUT THE AUTHOR

...view details