ಬೆಂಗಳೂರು: ರಾಷ್ಟ್ರಾದ್ಯಂತ ಕೋವಿಡ್ 2ನೇ ಅಲೆ ಅಬ್ಬರ ಅತಿರೇಕಕ್ಕೆ ಹೋಗುತ್ತಿರುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಪರಾಧಿಕ ಬೇಜವಾಬ್ದಾರಿತನವೇ ಕಾರಣ. ಇದನ್ನು ರಾಷ್ಟ್ರೀಯ ವಿಪತ್ತು ಎಂದು ತುರ್ತಾಗಿ ಘೋಷಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.
ಕೊರೊನಾ: ರಾಷ್ಟ್ರೀಯ ವಿಪತ್ತು ಘೋಷಣೆಗೆ ಖಂಡ್ರೆ ಆಗ್ರಹ - ಬೆಂಗಳೂರು
ದೇಶದಲ್ಲಿ ಪ್ರಸಕ್ತ ಕೋವಿಡ್ 2ನೇ ಅಲೆ ತೀವ್ರಗತಿಯಲ್ಲಿ ಏರುತ್ತಿದ್ದು, ಸಾವಿರಾರು ಜನರು ಸಾವಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಎಲ್ಲ ಸಂಪನ್ಮೂಲ ಕ್ರೋಡೀಕರಿಸಿ, ಸರ್ಕಾರ ಕೋವಿಡ್ ನಿರ್ವಹಣೆಗೆ ತುರ್ತು ಕ್ರಮ ವಹಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.
![ಕೊರೊನಾ: ರಾಷ್ಟ್ರೀಯ ವಿಪತ್ತು ಘೋಷಣೆಗೆ ಖಂಡ್ರೆ ಆಗ್ರಹ KPCC working president eshwar khandre](https://etvbharatimages.akamaized.net/etvbharat/prod-images/768-512-11454289-thumbnail-3x2-net.jpg)
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ದೇಶದಲ್ಲಿ ಮತ್ತು ರಾಜ್ಯದಲ್ಲಿ ಸೋಂಕು ತೀವ್ರ ಗತಿಯಲ್ಲಿ ಹರಡುತ್ತಿದ್ದು, ಅಗತ್ಯ ಜೀವರಕ್ಷಕ ಚುಚ್ಚುಮದ್ದು ಮತ್ತು ಔಷಧಗಳು ಸಿಗದಂತಾಗಿವೆ. ಆದರೂ ಸರ್ಕಾರ ಕಣ್ಮುಚ್ಚಿ ಕುಳಿತಿದ್ದು, ಸಂಪೂರ್ಣ ನಿಷ್ಕ್ರಿಯವಾಗಿದೆ. ಸರ್ಕಾರಿ ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಸಿಗೆಗಳು ಲಭ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.
ಕೊರೊನಾ ರೋಗಿಗಳಿಗೆ ಜೀವರಕ್ಷಕ ಎಂದೇ ಪರಿಗಣಿಸಲಾಗಿರುವ ರೆಮಿಡಿಸಿವಿರ್ ಚುಚ್ಚುಮದ್ದು ಮತ್ತು ಇತರ ಕೆಲವು ಅಗತ್ಯ ಔಷಧಗಳು ಪರವಾನಗಿ ಪಡೆದ ಖಾಸಗಿ ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ಲಭ್ಯವಾಗುತ್ತಿಲ್ಲ. ಇದಕ್ಕೆ ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ಕಾರಣ. ಸರ್ಕಾರದ ಬೇಜವಾಬ್ದಾರಿತನದಿಂದಾಗಿ ಮುಗ್ಧ ಜನರು ಸಾಯುವಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.