ಬೆಂಗಳೂರು:ಮಹಿಳೆಯರಿಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನಗಳಿದ್ದರೂ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಏರುತ್ತಲೇ ಇವೆ. ಆದರೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ಬಿಡುಗಡೆ ಮಾಡಿರುವ ವರದಿಯತ್ತ ಕಣ್ಣಾಡಿಸಿದರೆ ಮಹಿಳೆಯರಿಗೆ ಸಮಾಜದಲ್ಲಿ ರಕ್ಷಣೆ ಸರಿಯಾಗಿ ದೊರೆಯುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತದೆ.
ಮಹಿಳೆಯರ ಸುರಕ್ಷತೆಗೆ ಕಠಿಣ ಕಾನೂನುಗಳಿದ್ದರೂ ಕೈಕಟ್ಟಿ ಕೂತಿವೆ ಎಂದು ಮಹಿಳಾ ಹೋರಾಟಗಾರ್ತಿಯರು ಆಕ್ರೋಶ ಹೊರಹಾಕಿದ್ದಾರೆ. ದಲಿತ ಹೆಣ್ಣು ಮಕ್ಕಳ ಮೇಲೆ 2018ರಲ್ಲಿ 13ರಷ್ಟಿದ್ದ ಅತ್ಯಾಚಾರ ಪ್ರಕರಣದ ಶೇಕಡಾವಾರು ಪ್ರಮಾಣ ಒಂದು ವರ್ಷದಲ್ಲಿ 61.5ಕ್ಕೆ ಏರಿಕೆ ಕಂಡಿದೆ.
ದೇಶದಲ್ಲಿ ದಿನಕ್ಕೆ 87ಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ ಎಂದು ಎನ್ಸಿಆರ್ಬಿ ತಿಳಿಸಿದೆ. ದೇಶದ ವರದಿ ವರ್ಷವಾರು ನೋಡುವುದಾದರೆ 2017ರಲ್ಲಿ 32,559, 2018ರಲ್ಲಿ 33,356, 2019ರಲ್ಲಿ 35,423 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ 2018ರಲ್ಲಿ 1,219, 2019ರಲ್ಲಿ 1,187 ಹಾಗೂ 2020ರಲ್ಲಿ 899 ಪ್ರಕರಣಗಳು (ಆಗಸ್ಟ್ 31ರವರೆಗೆ) ದಾಖಲಾಗಿವೆ. 2108ರ ಜನವರಿಯಿಂದ 2020ರ ಆಗಸ್ಟ್ 31ರವರೆಗೆ ರಾಜ್ಯದಲ್ಲಿ ದಲಿತ ಮಹಿಳೆಯರ ಮೇಲೆ 428 ಅತ್ಯಾಚಾರ ಮತ್ತು 263 ಕೊಲೆ ಪ್ರಕರಣಗಳು ದಾಖಲಾಗಿದೆ.
ಹೆಚ್ಚಾಗಿ ಪತ್ನಿಯ ಪತಿ ಅಥವಾ ಸಂಬಂಧಿಕರ ಕ್ರೌರ್ಯದಿಂದ ಈ ರೀತಿಯ ಪ್ರಕರಣಗಳು ನಡೆಯುತ್ತಿವೆ. ಸಂಬಂಧಿಕರ ಕ್ರೌರ್ಯ ಶೇ. 30.9, ಮಹಿಳೆಯರ ಮೇಲಿನ ಆಕ್ರೋಶದಿಂದ ಶೇ.21.8, ಅಪಹರಣ ಶೇ.17.9ರಷ್ಟು ನಡೆದಿದೆ.
ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಲು ದೇಶದಲ್ಲಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸದಿರುವುದೇ ಕಾರಣ ಎಂದು ಮಹಿಳಾ ಸಂಘಟನೆಗಳು ಸರ್ಕಾರಗಳ ವಿರುದ್ಧ ಕಿಡಿಕಾರಿದ್ದಾರೆ. ಶಿಕ್ಷಣದ ಕೊರತೆ, ವರದಕ್ಷಿಣೆ ಹಾಗೂ ಸಾಂಪ್ರದಾಯಿಕ, ಧಾರ್ಮಿಕ ಸಮಸ್ಯೆ, ಪುರುಷ ಪ್ರಧಾನ ಸಮಾಜ, ಧೈರ್ಯದ ಕೊರತೆ ಹೀಗೆ ಅನೇಕ ಕಾರಣಗಳಿಂದ ದೌರ್ಜನ್ಯಗಳು ನಡೆಯುತ್ತಿವೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತೆ ಹೆಚ್.ಜಿ.ಶೋಭಾ ಮಾತನಾಡಿ, ಎನ್ಸಿಆರ್ಬಿ ಸಮೀಕ್ಷೆ ನೋಡಿದರೆ ದೇಶ ಎತ್ತ ಸಾಗುತ್ತಿದೆ ಎಂಬ ಆತಂಕ ಉಂಟಾಗಿದೆ. ಇಂತಹ ವಿಚಾರಗಳನ್ನು ಕೇಳುವಾಗ ಮನಸ್ಸಿಗೆ ಬಹಳ ನೋವಾಗುತ್ತದೆ. ನಿಜವಾಗಲು ಮಹಿಳೆಯರಿಗೆ ಸುರಕ್ಷತೆ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ ಎಂದರು.
ಸಾಮಾಜಿಕ ಕಾರ್ಯಕರ್ತೆ ಹೆಚ್.ಜಿ.ಶೋಭಾ ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಆದರೆ ಕಾನೂನು ಗಟ್ಟಿಯಾಗಿದ್ದರೂ ಅದನ್ನಾಳುವ ಅಧಿಕಾರಿ ವರ್ಗ ಕಳಪೆಯಾಗಿದೆ. ಸಾಕ್ಷಿ ಕೊರತೆಯಿಂದ ಎಷ್ಟೋ ಪ್ರಕರಣಗಳು ಮುಚ್ಚಿ ಹೋಗಿವೆ. ಹೀಗಾಗಿ ಎಲ್ಲರೂ ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ದನಿ ಎತ್ತಬೇಕಿದೆ ಎಂದು ಮನವಿ ಮಾಡಿದರು.