ಬೆಂಗಳೂರು: ಸಿಬ್ಬಂದಿಗೆ ವಿಮಾ ಯೋಜನೆ, ಅತ್ಯುತ್ತಮ ಸಾರಿಗೆ ಉಪಕ್ರಮಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದೀಗ ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸ ಸಹಾಯಕ್ಕಾಗಿ ಜಾರಿ ಮಾಡಿರುವ ವಿದ್ಯಾಚೇತನ ಆನ್ಲೈನ್ ಉಪಕ್ರಮಕ್ಕಾಗಿ, ಡಿಜಿಟಲ್ ಅಕ್ಸೆಸಿಬಿಲಿಟಿ ಅಂಡ್ ಇನ್ಕ್ಲೂಷನ್ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ.
ನವದೆಹಲಿಯ ಏರೋ ಸಿಟಿಯಲ್ಲಿ ಗವರ್ನೆನ್ಸ್ ನೌ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಉತ್ತರ ಪ್ರದೇಶ ನಿವೃತ್ತ ಡಿಜಿಪಿ ಡಾ.ವಿಕ್ರಮ್ ಸಿಂಗ್, ಚಾರು ಪ್ರಜ್ಞಾ, ಅಧಿಕಾರಿ ಎಂಟರ್ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕ ಕೈಲಾಸನಾಥ, ಕೆಎಸ್ಆರ್ಟಿಸಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯ ಕಾಮಗಾರಿ ಅಭಿಯಂತರ ಶಿವಕುಮಾರ್, ಚಾಮರಾಜನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್ ನಿಗಮದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಸಮಾರಂಭದಲ್ಲಿ ರಾಜ್ಯದ ಸರ್ಕಾರಿ ಸಂಸ್ಥೆಗಳ ಪೈಕಿ ಅತಿ ಹೆಚ್ಚು ಸಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹಣಾ ಮಾಡಿರುವ ಸಂಸ್ಥೆಯ ಪ್ರಶಸ್ತಿಯು ಕೆಎಸ್ಆರ್ಟಿಸಿಗೆ ಲಭಿಸಿದೆ. ನಿಗಮವು ಸತತ 9ನೇ ಬಾರಿಗೆ ರೋಲಿಂಗ್ ಶೀಲ್ಡ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಲೆಫ್ಟಿನೆಂಟ್ ಜನರಲ್ ಬಿ.ಕೆ.ರಪ್ಸವಾಲ್ ಅವರು, ಕೆಎಸ್ಆರ್ಟಿಸಿಯ ಸಿಬ್ಬಂದಿ ಮತ್ತು ಜಾಗೃತ ವಿಭಾಗದ ನಿರ್ದೇಶಕಿ ಡಾ.ನಂದಿನಿ ದೇವಿ ಕೆ. ಅವರಿಗೆ ಪ್ರದಾನ ಮಾಡಿದರು. ಸಮಾರಂಭದಲ್ಲಿ ಲೆಫ್ಟಿನೆಂಟ್ ಜನರಲ್ ವೆಂಕಟೇಶ ರೆಡ್ಡಿ ಜಿ.ಎ. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಿರ್ದೇಶಕ ಬ್ರಿಗೇಡಿಯರ್ ಎಂ.ಬಿ.ಶಶಿಧರ್, ಏರ್ ಕಮಾಂಡರ್ ಬಿ.ಎಸ್.ಕನ್ವಾರ್ ಹಾಗೂ ಬ್ರಿಗೇಡಿಯರ್ ಎಂಆರ್ಕೆ ರಾಜೇಶ್ ಪಣೀಕರ್ ಉಪಸ್ಥಿತರಿದ್ದರು.
ಕೆಎಸ್ಆರ್ಟಿಸಿಗೆ ಪ್ರಶಸ್ತಿ: ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್ ಸ್ಥಾಪಿಸಿರುವ ಹೆಲ್ತಿ ವರ್ಕ್ ಪ್ಲೇಸ್ ಪ್ರಶಸ್ತಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅನುಷ್ಠಾನಗೊಳಿಸಿರುವ ಅತ್ಯುತ್ತಮ ಕಾರ್ಮಿಕ ಕಲ್ಯಾಣ ಉಪಕ್ರಮಕ್ಕಾಗಿ ಲಭಿಸಿದೆ. ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸಮಾರಂಭದಲ್ಲಿ ಕೆಎಸ್ಆರ್ಟಿಸಿ ಪ್ರಶಸ್ತಿ ಪಡೆದುಕೊಂಡಿತು.