ಕರ್ನಾಟಕ

karnataka

ETV Bharat / state

ಕೆಎಸ್​ಆರ್​ಟಿಸಿ ಚೊಚ್ಚಲ 'ಇವಿ ಪವರ್ ಪ್ಲಸ್' ಬಸ್​ಗೆ ರಾಷ್ಟ್ರೀಯ ಪ್ರಶಸ್ತಿ

EV Power Plus bus got national award: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಇವಿ ಪವರ್ ಪ್ಲಸ್ ಬಸ್​ಗೆ 10ನೇ ಆವೃತ್ತಿಯ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಪ್ರಶಸ್ತಿ ನೀಡಲಾಗಿದೆ.

ರಾಷ್ಟ್ರೀಯ ಪ್ರಶಸ್ತಿ
ರಾಷ್ಟ್ರೀಯ ಪ್ರಶಸ್ತಿ

By ETV Bharat Karnataka Team

Published : Sep 15, 2023, 7:01 AM IST

ಬೆಂಗಳೂರು:ಕೆಎಸ್​ಆರ್​ಟಿಸಿ ಚೊಚ್ಚಲ ವಿದ್ಯುತ್ ಚಾಲಿತ ಬಸ್ ಸೇವೆಯಾದ ಇವಿ ಪವರ್ ಪ್ಲಸ್​​ಗೆ ವಿಶ್ವ ತಯಾರಿಕೆದಾರರ ಕಾಂಗ್ರೆಸ್ ಸ್ಥಾಪಿಸಿರುವ 10ನೇ ಆವೃತ್ತಿಯ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಪ್ರಶಸ್ತಿ ಲಭಿಸಿದೆ.

ನಗರದ ತಾಜ್ ಹೋಟೆಲ್​ನಲ್ಲಿ ವಿಶ್ವ ತಯಾರಿಕೆದಾರರ ಕಾಂಗ್ರೆಸ್​ (World Manufacturing Congress) ಸ್ಥಾಪಿಸಿರುವ 10ನೇ ಆವೃತ್ತಿಯ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಕೆಎಸ್​ಆರ್​ಟಿಸಿ ಪರಿಚಯಿಸಿರುವ ಅಂತರ್​​ನಗರ ಎಲೆಕ್ಟ್ರಿಕ್ ಬಸ್ ಉಪಕ್ರಮಕ್ಕಾಗಿ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಪ್ರಶಸ್ತಿಯನ್ನು ಪಡೆದುಕೊಂಡಿದೆ.

'ಇವಿ ಪವರ್ ಪ್ಲಸ್' ಗೆ ರಾಷ್ಟ್ರೀಯ ಪ್ರಶಸ್ತಿ

ಗುರ್ಗಾಂವ್​ನ ಅಡ್ವಾಂಟೇಜ್ ಕ್ಲಬ್​ನ ಸಿಇಒ ಹಾಗೂ ಸಹ ಸಂಸ್ಥಾಪಕಿ ಸ್ಮಿತಿ ಭಟ್​ ದಿಯೋರ 10ನೇ ಆವೃತ್ತಿಯ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಉತ್ತಮ ವರ್ಷದ ಅಂತರನಗರ ಎಲೆಕ್ಟ್ರಿಕ್​ ಬಸ್​ - ಇವಿ ಪವರ್​ ಪ್ಲಸ್ ಬಸ್​ಗೆ ಪ್ರಶಸ್ತಿ ಪ್ರದಾನ ಮಾಡಿದರು. ನಿಗಮದ ಅಧಿಕಾರಿಗಳಾದ ಎನ್.ಕೆ. ಬಸವರಾಜು, ಜಿ. ಅಂತೋಣಿ ಜಾರ್ಜ್ ಹಾಗೂ ಶಿವಕುಮಾರ್ ಜಂಟಿಯಾಗಿ ಪ್ರಶಸ್ತಿಯನ್ನು ನಿಗಮದ ಪರವಾಗಿ ಸ್ವೀಕರಿಸಿದರು.

ಏಷ್ಯಾದ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ ಪ್ರಶಸ್ತಿ:ಏಷ್ಯಾ ಫೆಸಿಫಿಕ್ ಮಾನವ ಸಂಪನ್ಮೂಲ ಕಾಂಗ್ರೆಸ್ ( Asia Pacific HRM Congress) ಸ್ಥಾಪಿಸಿರುವ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ ಅನುಷ್ಠಾನಗೊಳಿಸಿದ ಸಂಸ್ಥೆಯ ಪ್ರಶಸ್ತಿಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಲಭಿಸಿದೆ. ಬೆಂಗಳೂರಿನ ತಾಜ್ ಹೋಟೆಲ್​ನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಓಡಿಶಾ ಸರ್ಕಾರದ ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ನಿರ್ದೇಶಕರು ಹಾಗೂ ಹೆಚ್ಚುವರಿ ಕಾರ್ಯದರ್ಶಿ ಡಾ. ಪಾರ್ಥ ಸಾರಧಿ ಮಿಶ್ರ, ಏಷ್ಯಾದ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಗಳನ್ನು ಅನುಷ್ಠಾನಗೊಳಿಸಿದ ಉನ್ನತ ಸಂಸ್ಥೆಯ ಪ್ರಶಸ್ತಿಯನ್ನು ಪ್ರದಾನಿಸಿದರು‌. ನಿಗಮದ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಜಿ.ಎನ್. ಲಿಂಗರಾಜು, ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿ ಶಿವನಂದ ಕವಳಿಕಾಯಿ ಮತ್ತು ಮುಖ್ಯ ಸಂಚಾರ ವ್ಯವಸ್ಥಾಪಕ (ವಾಣಿಜ್ಯ) ಎಸ್. ರಾಜೇಶ್ ನಿಗಮದ ಪರವಾಗಿ ಪ್ರಶಸ್ತಿ ಸ್ವೀಕಾರ ಮಾಡಿದರು.

'ಇವಿ ಪವರ್ ಪ್ಲಸ್' ಗೆ ರಾಷ್ಟ್ರೀಯ ಪ್ರಶಸ್ತಿ

ಇದನ್ನೂ ಓದಿ:ಕೆಎಸ್‌ಆರ್‌ಟಿಸಿಗೆ ಮನಸೋತ ಯುಪಿ: ಅಧ್ಯಯನಕ್ಕೆ ಸಲಹೆಗಾರರ ನಿಯೋಗ ಕಳಿಸಿದ ಸಿಎಂ ಯೋಗಿ

ಕೆಂಗೇರಿ ಉಪನಗರದ ಬಸ್ ನಿಲ್ದಾಣ ಜನವರಿಯಲ್ಲಿ ಲೋಕಾರ್ಪಣೆ:ಕೆಂಗೇರಿ ಉಪನಗರದ ಬಸ್ ನಿಲ್ದಾಣವನ್ನು ಜನವರಿ ತಿಂಗಳಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ. ಶಾಸಕ ಎಸ್.ಟಿ. ಸೋಮಶೇಖರ್ ಅವರ ಕೋರಿಕೆ ಮೇರೆಗೆ ಕೆಂಗೇರಿ ಉಪನಗರದಲ್ಲಿರುವ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆ ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಳೆದ ಬಾರಿ ಸಾರಿಗೆ ಸಚಿವರಾಗಿದ್ದ ಸಂದರ್ಭದಲ್ಲಿ ಕೆಂಗೇರಿ ಉಪನಗರದ ಬಸ್ ನಿಲ್ದಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಲಾಗಿತ್ತು. ಕೋವಿಡ್ ಹಿನ್ನಲೆಯಲ್ಲಿ ಈ ಬಸ್ ನಿಲ್ದಾಣವನ್ನು ಲೋಕಾರ್ಪಣೆ ಮಾಡಲು ಸಾಧ್ಯವಾಗಿರಲಿಲ್ಲ. ಜನವರಿ ತಿಂಗಳ ಅಂತ್ಯದ ವೇಳೆಗೆ ಬಸ್ ನಿಲ್ದಾಣವನ್ನು ಲೋಕಾರ್ಪಣೆ ಗೊಳಿಸಲಾಗುವುದು. ಬಸ್ ನಿಲ್ದಾಣದಲ್ಲಿರುವ ಖಾಲಿ ಮಳಿಗೆಗಳನ್ನು ಅತಿ ಶೀಘ್ರವಾಗಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ನಂತರ ಮಾತನಾಡಿದ ಶಾಸಕ ಎಸ್. ಟಿ. ಸೋಮಶೇಖರ್, ಕೆಂಗೇರಿ ಉಪನಗರದ ನಾಗರೀಕರ ಬಹುದಿನಗಳ ಬೇಡಿಕೆಯಾದ ಬಸ್ ನಿಲ್ದಾಣ ಲೋಕಾರ್ಪಣೆ, ಮಳಿಗೆಗಳ ಹಂಚುವಿಕೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತರಲಾಗಿದೆ. ಸಾರ್ವಜನಿಕರ ಹಾಗೂ ನಮ್ಮ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಸಂಚಾರ ದಟ್ಟಣೆ ಇರುವ ನಿಲ್ದಾಣವನ್ನು ಹೊಸ ಬಸ್ ನಿಲ್ದಾಣಕ್ಕೆ ಸ್ಥಳಾಂತರ ಮಾಡುವುದು, ಬಸ್ ನಿಲ್ದಾಣದ ಬಳಿ ಇರುವ ಮರಗಳ ಸ್ಥಳಾಂತರ, ವಿದ್ಯುತ್ ಕಂಬಗಳ ಬದಲಾವಣೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸಿ ಇನ್ನು ಮೂರು ತಿಂಗಳ ಒಳಗಾಗಿ ಸಾರ್ವಜನಿಕರಿಗೆ ಮುಕ್ತಗೊಳಿಸಲು ಸಾರಿಗೆ ಸಚಿವರು ಅಧಿಕಾರಿಗಳಿಗೆ ಅದೇಶ ನೀಡಿದರು.

ABOUT THE AUTHOR

...view details