ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ದೇಶದ ವಿದ್ಯಾರ್ಥಿಗಳೊಂದಿಗೆ ಇಂದು ನಡೆಸಿದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ನೇರಪ್ರಸಾರವನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಗರದ ಕೆಎಲ್ಇ ಇಂಟರ್ನ್ಯಾಷನಲ್ ಕಾಲೇಜಿನಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ವೀಕ್ಷಿಸಿದರು.
ಮೋದಿ ಬರೆದ ಎಕ್ಸಾಂ ವಾರಿಯರ್ಸ್ ಪುಸ್ತಕವನ್ನು ಶಾಲೆಗಳಿಗೆ ಹಂಚಲು ಶಿಕ್ಷಣ ಸಚಿವರ ಚಿಂತನೆ ನೇರಪ್ರಸಾರದ ಬಳಿಕ ಮಾತನಾಡಿದ ಅವರು, ಪ್ರಧಾನಿ ಮೋದಿ ಬರೆದಿರುವ 'ಎಕ್ಸಾಂ ವಾರಿಯರ್ಸ್' ಪುಸ್ತಕವನ್ನು ಈಗಾಗಲೇ ಕನ್ನಡಕ್ಕೆ ಭಾಷಾಂತರ ಮಾಡಲಾಗಿದೆ. ಇದನ್ನು ರಾಜ್ಯದ 53,000 ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಹೇಗೆ ತಲುಪಿಸಬೇಕು ಎಂಬುದರ ಕುರಿತು ಚಿಂತನೆ ಮಾಡುತ್ತೇವೆ ಎಂದರು.
ದೆಹಲಿಯ ತಲಕಟೋರಾ ಮೈದಾನದಲ್ಲಿ ಬೆಳಗ್ಗೆ 11 ಗಂಟೆಯಿಂದ ಒಂದು ಗಂಟೆಯವರೆಗೆ ನಡೆದ ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ 2 ಸಾವಿರ ವಿದ್ಯಾರ್ಥಿಗಳು ನೇರವಾಗಿ ಭಾಗವಹಿಸಿದ್ದರು. ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಹೇಗೆ ಆತ್ಮವಿಶ್ವಾಸದಿಂದ ಎದುರಿಸಬೇಕು, ವಿಫಲತೆಯಲ್ಲೂ ಹೇಗೆ ಪ್ರಯತ್ನ ಮುಂದುವರಿಸಿ ಗೆಲುವು ಸಾಧಿಸಬೇಕು ಎಂಬುದನ್ನು ಪ್ರಧಾನಿ ಸಲಹೆ ನೀಡಿದ್ರು. ಇದನ್ನ ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳು ವಿಡಿಯೋ ಸ್ಟ್ರೀಮಿಂಗ್ ಮೂಲಕ ವೀಕ್ಷಿಸಿದರು.
ಸತತ ಮೂರನೇ ಬಾರಿಗೆ ಪ್ರಧಾನಿ ಮೋದಿ ವಿದ್ಯಾರ್ಥಿಗಳೊಂದಿಗೆ ಈ ಚರ್ಚೆ ನಡೆಸಿದರು. ಇದೇ ಮೈದಾನದಲ್ಲಿ 2018 ರ ಫೆಬ್ರುವರಿ 16 ರಂದು ಮೊದಲ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆದಿತ್ತು. ಪರೀಕ್ಷೆಯ ಸವಾಲುಗಳನ್ನು ಹೇಗೆ ನಿಭಾಯಿಸುವುದು, ಒತ್ತಡ ನಿಯಂತ್ರಣ, ಪೋಷಕರು ಶಿಕ್ಷಕರಿಂದ ಸಹಕಾರ, ಜೀವನದ ಗುರಿ ಉದ್ದೇಶದ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ರು. ಈ ಬಾರಿ ಕರ್ನಾಟಕದಿಂದ 42 ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷ.
ಇನ್ನು, ನೇರಪ್ರಸಾರದ ಬಳಿಕ ಮಾತನಾಡಿದ ಸಚಿವ ಸುರೇಶ್ ಕುಮಾರ್ ಅವರು, ಕನ್ನಡದಲ್ಲಿ ಮೋದಿ ಭಾಷಣದ ಸಾರಾಂಶ ಹೇಳಿದರು. ಪರೀಕ್ಷೆಗೆ 66 ದಿನಗಳಿದ್ದು, ಆತ್ಮವಿಶ್ವಾಸದಿಂದ ತಯಾರಿ ನಡೆಸಿ, ಆತಂಕ ಬೇಡ, ಆರೋಗ್ಯವನ್ನು ಕಾಪಾಡಿಕೊಂಡು ಪರೀಕ್ಷೆ ಬರೆಯಿರಿ. ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಿ ಎಂದು ಕಿವಿಮಾತು ಹೇಳಿದರು.