ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಂಪುಟದಲ್ಲಿ ದಲಿತ ಸಮುದಾಯಕ್ಕೆ ನೀಡಿರುವ ಹೆಚ್ಚಿನ ಅವಕಾಶ ಕಂಡು ಕಾಂಗ್ರೆಸ್ ನಾಯಕರು ವಿಚಲಿತಗೊಂಡಿದ್ದಾರೆ. ದಲಿತರ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಟೀಕಿಸಿ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಹಾಗು ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಕ್ಕೆ ಈ ಬಾರಿ 4 ಸಚಿವ ಸ್ಥಾನ ಲಭಿಸಿವೆ. ಅದರಲ್ಲಿ ನಾರಾಯಣಸ್ವಾಮಿ ಅವರಿಗೆ ಸಾಮಾಜಿಕ ನ್ಯಾಯದ ಸಚಿವ ಸ್ಥಾನವನ್ನು ನೀಡುವ ಮೂಲಕ ಮೋದಿ ಇಡೀ ದೇಶಕ್ಕೆ ಸಾಮಾಜಿಕ ನ್ಯಾಯ ನೀಡಿದ್ದಾರೆ. 8 ಜನ ಎಸ್‍ಟಿ ಮತ್ತು 12 ಜನರನ್ನು ಎಸ್‍ಸಿ ಸಮುದಾಯದಿಂದ ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ. ದಲಿತ ಸಮುದಾಯಕ್ಕೆ ಇದುವರೆಗೆ ಯಾವುದೇ ಕೇಂದ್ರ ಸರ್ಕಾರಗಳು ಕೊಡದಷ್ಟು ಪ್ರಾತಿನಿಧ್ಯವನ್ನು ಕೊಟ್ಟಿದ್ದಾರೆ. ಇದು ಸಾಮಾಜಿಕ ಸಾಮರಸ್ಯ ಕಾಪಾಡುವಂತಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ಮಾತಿನಂತೆ ಅವರು ನಡೆದುಕೊಂಡಿದ್ದಾರೆ ಎಂದರು.
ಜನರ ದಾರಿ ತಪ್ಪಿಸುತ್ತಿದ್ದಾರೆ: ಕಾಂಗ್ರೆಸ್‍ನ ದೊಡ್ಡ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ದಲಿತರಿಗೆ ಇಷ್ಟೊಂದು ಸ್ಥಾನ ಕೊಟ್ಟಿರುವುದು ದಾರಿ ತಪ್ಪಿಸುವ ಕೆಲಸ ಎಂದು ಹೇಳಿಕೆ ನೀಡಿದ್ದಾರೆ. ಇದು ನಮಗ್ಯಾರಿಗೂ ಅರ್ಥವಾಗಿಲ್ಲ. ಕಾಂಗ್ರೆಸ್ಸಿಗರು ದಲಿತರನ್ನು ದಾರಿ ತಪ್ಪಿಸಿದ್ದು ನೆನಪಾಗಿ ಅವರು ಹೀಗೆ ಹೇಳಿರಬಹುದೆಂದು ನನಗನಿಸುತ್ತಿದೆ. ದಲಿತರಿಗೆ ಹೆಚ್ಚು ಸ್ಥಾನ ನೀಡಿದ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದರೆ ಅದು ಸಾಂದರ್ಭಿಕವಾಗಿ ಸರಿ ಇರುತ್ತಿತ್ತು. ಆದರೆ, ಅದರ ಬದಲು ಕಾಂಗ್ರೆಸ್‍ನವರು ಈಗ ವಿಚಲಿತರಾಗಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.
ಒಟ್ಟು ಸಚಿವ ಸ್ಥಾನಗಳ ಪೈಕಿ 27 ಜನ ಒಬಿಸಿ, ಎಸ್‍ಸಿ 12, ಎಸ್ಟಿ 8, ಅಲ್ಪಸಂಖ್ಯಾತರ ಸಮುದಾಯಕ್ಕೆ 5 ಸೇರಿ 52 ಸ್ಥಾನಗಳನ್ನು ನೀಡಿ ಸಾಮಾಜಿಕ ನ್ಯಾಯ ಮೆರೆದಿದ್ದಾರೆ. ಆದರೂ, ಮೇಲ್ವರ್ಗಕ್ಕೆ ಅರ್ಧಕ್ಕಿಂತ ಹೆಚ್ಚು ಸ್ಥಾನ ಕೊಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಜಾತಿಗೆ ಮಣೆ ಹಾಕುವುದು ಕಾಂಗ್ರೆಸ್‍ನ ಕಾರ್ಯ. ಜಾತಿ ನೋಡಿ ಮಣೆ ಹಾಕುವ ಕಾರ್ಯ ಬಿಜೆಪಿಯಲ್ಲಿ ಇಲ್ಲ. ಆದರೆ, ಸಾಮಾಜಿಕ ನ್ಯಾಯದ ನೆಲೆಯಲ್ಲಿ ಎಲ್ಲರನ್ನೂ ಗುರುತಿಸುವ ಕಾರ್ಯವನ್ನು ಪಕ್ಷ ಮಾಡಿದೆ ಎಂದರು.
ಪ್ರಧಾನಿ ಈಗ ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತಿತರ ಕೆಲವು ರಾಜಕಾರಣಿಗಳು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ ಎಂದು ಕೇಳುತ್ತಿದ್ದರು. 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿದ ರಾಜ್ಯಕ್ಕೆ ಪ್ರಧಾನಿ ಈಗ ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ ಎಂದು ಹೆಮ್ಮೆಯಿಂದ ನಾವು ಹೇಳುತ್ತೇವೆ ಎಂದರು.