ಬೆಂಗಳೂರು: ನಿನ್ನೆ ರಾತ್ರಿ ಖ್ಯಾತ ನೇತ್ರ ತಜ್ಞ, ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ಕೆ ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನರಾಗಿದ್ದರು. ಇಂದು ಅವರ ಅಂತ್ಯಕ್ರಿಯೆ ನಗರದ ಹರಿಶ್ಚಂದ್ರ ಘಾಟ್ನಲ್ಲಿ ನೆರವೇರಿತು. ಶುಕ್ರವಾರ ರೋಗಿಗಳನ್ನು ನೋಡಿ ಸಂಜೆ ಮನೆಗೆ ತೆರಳಿದ್ದ ಅವರಿಗೆ ತೀವ್ರ ಹೃದಯಾಘಾತ ಉಂಟಾಗಿತ್ತು. ತಕ್ಷಣ ಅವರನ್ನು ಯಶವಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರಾಜಾಜಿನಗರದಲ್ಲಿನ ಇಸ್ಕಾನ್ ಬಳಿಯಿರುವ ನಾರಾಯಣ ನೇತ್ರಾಲಯದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.
ನೇತ್ರದಾನದ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದ ಡಾಕ್ಟರ್ ಭುಜಂಗ ಶೆಟ್ಟಿ ಅವರ ಪಾರ್ಥಿವ ಶರೀರಕ್ಕೆ ಸಿಬ್ಬಂದಿ, ಅಭಿಮಾನಿಗಳು ಕುಟುಂಬಸ್ಥರು ಅಂತಿಮ ನಮನವನ್ನು ಅವರ ಕನಸಿನ ಕೂಸಾದ ನಾರಾಯಣ ನೇತ್ರಾಲಯದಲ್ಲಿ ಸಲ್ಲಿಸಿದರು. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಕರ್ನಾಟಕ ರಕ್ಷಣಾ ವೇದಿಕೆಯ ಮುಖ್ಯಸ್ಥ ಪ್ರವೀಣ್ ಶೆಟ್ಟಿ, ಚಿತ್ರನಟ ದೊಡ್ಡಣ್ಣ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು. ನಂತರ ಮಧ್ಯಾಹ್ನ 3.30ರ ಸುಮಾರಿಗೆ ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯಕ್ರಿಯೆ ಸಕಲ ವಿಧಿ ವಿಧಾನದೊಂದಿಗೆ ನೆರೆವೇರಿತು.
1978 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದಿದ ಅವರು 1982ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಮಿಂಟೋ ಆಪ್ತಾಲ್ಮೀಕ್ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರದ ರೆಸಿಡೆನ್ಸಿ ಮಾಡಿದರು. 80 ರ ದಶಕದಲ್ಲಿ ಸಣ್ಣ ಕ್ಲಿನಿಕ್ ಪ್ರಾರಂಭಿಸಿ ತದ ನಂತರ ಕರ್ನಾಟಕದ ಅತಿದೊಡ್ಡ ನಾರಾಯಣ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸ್ಥಾಪಿಸಿದರು. ಅವರು ತಜ್ಞ ಕಣ್ಣಿನ ಪೊರೆ ಮತ್ತು ಫಾಕೋ ಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸಕರಾಗಿ ಸೇವೆ ಸಲ್ಲಿಸಿದ್ದರು. ಪವರ್ ಆಫ್ ಲವ್ ಎನ್ನುವ ಜನಪ್ರಿಯ ಪುಸ್ತಕ ಕೂಡ ಹೊರ ತಂದಿದ್ದರು.