ಕರ್ನಾಟಕ

karnataka

ETV Bharat / state

ನಾರಾಯಣಗುರುಗಳು ಜಾತಿ ಧರ್ಮಕ್ಕೆ ಸಿಕ್ಕಿಕೊಳ್ಳದೆ ವಿಶ್ವ ಮಾನವರಾದರು: ಸಿಎಂ ಸಿದ್ದರಾಮಯ್ಯ - ವಸು ದೈವ ಕುಟುಂಬಕಂ

ಜಾತಿ, ಧರ್ಮಗಳ ನಡುವೆ ಸಂಘರ್ಷ ಸೃಷ್ಠಿಸುವ ಶಕ್ತಿಗಳು ನಾರಾಯಣಗುರುಗಳ ಅವಧಿಯಲ್ಲೂ ಇದ್ದವು, ಈಗಲೂ ಇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Aug 31, 2023, 11:03 PM IST

Updated : Sep 6, 2023, 5:01 PM IST

ಬೆಂಗಳೂರು : ನಾರಾಯಣಗುರುಗಳು ಒಂದು ಜಾತಿ, ಧರ್ಮಕ್ಕೆ ಸೇರಿದವರಲ್ಲ. ಅವರು ಜಾತಿ ಧರ್ಮದ ತಾರತಮ್ಯಗಳನ್ನು ಮೀರಿದ ವಿಶ್ವಮಾನವರಾದವರು. ಹೀಗಾಗಿ ವಿಶ್ವ ಮಾನವ ನಾರಾಯಣಗುರುಗಳ ಜಯಂತಿಯನ್ನು ಸರ್ಕಾರವೇ ಆಚರಿಸಬೇಕು ಎಂದು ಆದೇಶ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.

ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುವ ಶಕ್ತಿಗಳು ನಾರಾಯಣಗುರುಗಳ ಅವಧಿಯಲ್ಲೂ ಇದ್ದವು. ಈಗಲೂ ಇವೆ. ನಾರಾಯಣಗುರುಗಳು ಸಂಘರ್ಷಕ್ಕೆ ಕಾರಣ ಆಗದಂತೆ ಸಮಾಜದಲ್ಲಿ ವ್ಯಾಪಕ ಬದಲಾವಣೆ ತಂದರು. ದೇವರನ್ನು ಮುಂದಿಟ್ಟು ಜಾತಿ - ಧರ್ಮದ ಸಂಘರ್ಷ ಸೃಷ್ಟಿಸುವುದು ದೇವರಿಗೆ ಮಾಡುವ ಅವಮಾನ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ನುಡಿದರು.‌

ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ. ದೇವರನ್ನು ಮುಂದಿಟ್ಟುಕೊಂಡು ತಾರತಮ್ಯ ಆಚರಿಸುವುದು ದೇವರಿಗೆ ಮಾಡುವ ಅವಮಾನ. ದೇವರನ್ನೇ ಮುಂದಿಟ್ಟುಕೊಂಡು ಜಾತಿ, ಧರ್ಮ, ಸಂಘರ್ಷ ಸೃಷ್ಟಿಸುವ ವಿಕೃತಿಯನ್ನು ಈಗಲೂ ಆಚರಿಸಲಾಗುತ್ತಿದೆ.‌ ಈ ತಾರತಮ್ಯಕ್ಕೆ ನಾರಾಯಣಗುರುಗಳು ಭಿನ್ನವಾದ ಆಚರಣೆ ಕಂಡುಕೊಂಡರು. ನಿಮಗೆ ಪ್ರವೇಶವಿಲ್ಲದ ದೇವಸ್ಥಾನಗಳಿಗೆ ಹೋಗಲೇಬೇಡಿ. ನೀವೇ ನಿಮ್ಮ ದೇವರುಗಳಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡಿ ಎಂದರು.

ಈ ಸಮಾಜ ಸುಧಾರಣೆಯ ಕ್ರಾಂತಿಕಾರಕ ಧಾರ್ಮಿಕ‌ ಚಳವಳಿ ಪರಿಣಾಮವಾಗಿ ಕೇರಳದಲ್ಲಿ 60 ದೇವಸ್ಥಾನಗಳನ್ನು ನಿರ್ಮಿಸಿದರು. ಉಳಿದ ದೇವಸ್ಥಾನಗಳಿಗೆ ಪ್ರವೇಶ ಇಲ್ಲದ ಶೂದ್ರ ಮತ್ತು ದಲಿತ ಸಮುದಾಯವನ್ನು ತಾವೇ ಕಟ್ಟಿಸಿದ ದೇವಸ್ಥಾನಗಳಿಗೆ ಪ್ರವೇಶಿಸುವಂತೆ ಕ್ರಾಂತಿ ಮಾಡಿದರು ಎಂದು ಹಲವು ನಿದರ್ಶನಗಳನ್ನು ಉದಾಹರಿಸಿದರು.

ವಿದ್ಯೆ ಕಲಿತು ಸ್ವತಂತ್ರರಾಗಿ, ಸಂಘಟಿತರಾಗಿ, ಬಲಯುತರಾಗಿ ಎನ್ನುವುದು ನಾರಾಯಣಗುರುಗಳು ಶೂದ್ರ-ದಲಿತ ಸಮುದಾಯಕ್ಕೆ ನೀಡಿದ ಅತ್ಯುನ್ನತ ಧ್ಯೇಯ ಎಂದರು.

ಈಡಿಗ ಅಭಿವೃದ್ಧಿ ನಿಗಮ, ಭವನಕ್ಕೆ ಅನುದಾನ:ಆರ್ಯ ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಮತ್ತು ನಾರಾಯಣಗುರು ಭವನ ನಿರ್ಮಿಸಬೇಕು ಎನ್ನುವ ಸಮುದಾಯದ ಬೇಡಿಕೆಗೆ ಒಪ್ಪಿದ ಮುಖ್ಯಮಂತ್ರಿಗಳು ವೇದಿಕೆಯಲ್ಲೇ ಎರಡು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.

ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಸಚಿವ ಮಧು ಬಂಗಾರಪ್ಪ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಹೆಚ್. ಆರ್ ಗವಿಯಪ್ಪ, ಆರ್ಯ ಈಡಿಗ ಸಮಾಜದ ಅಧ್ಯಕ್ಷ ಡಾ. ಎಂ ತಿಮ್ಮೇಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೇಷ್ಠ ವ್ಯಕ್ತಿ ಬ್ರಹ್ಮಶ್ರೀ ನಾರಾಯಣ ಗುರುಗಳು : ದೇಶ ಸೇವೆಯೇ ಈಶನ ಸೇವೆ ಎಂದು ನಂಬಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಶ್ರೇಷ್ಠ ವ್ಯಕ್ತಿ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪನವರು ತಿಳಿಸಿದರು.

ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಸಮಿತಿ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳ 169 ನೇ ಜನ್ಮ ದಿನೋತ್ಸವ ಇಂದು ಐತಿಹಾಸಿಕ ಕಾರ್ಯಕ್ರಮವಾಗಿದೆ.

ದೇವರ ಹೆಸರಿನಲ್ಲಿ ಪ್ರಾಣಿಹತ್ಯೆ: ಇದಕ್ಕೆ ಕಾರಣ ಅಂದು ಬಂಧನದಲ್ಲಿದ್ದ ಸಾಮಾಜಿಕ ವ್ಯವಸ್ಥೆಯನ್ನ ಬಿಡಿಸುವಲ್ಲಿ ನಾರಾಯಣ ಗುರುಗಳ ಸ್ಥಾನ ಪ್ರಮುಖವಾದದ್ದು. 1854ರಲ್ಲಿ ದಕ್ಷಿಣ ಭಾರತದ ಕೇರಳದ ತಿರುವನಂತಪುರದಿಂದ 12 ಕಿಲೋಮೀಟರ್ ದೂರದಲ್ಲಿರುವ ಒಂದು ಹಳ್ಳಿಯಲ್ಲಿ ಕೃಷಿಕ ಸಮಾಜದಲ್ಲಿ ನಾರಾಯಣ ಗುರುಗಳು ಜನಿಸಿದರು. ತಂದೆ ಪಾಡನ್ ಹಾಸನ್, ತಾಯಿ ಕುಟ್ಟಿಯಮ್ಮ. ತಂದೆ ಪುರಾಣ, ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುವುದರಲ್ಲಿ ನಿಪುಣರಾಗಿದ್ದು, ಸಂಸ್ಕೃತದಲ್ಲಿ ಪಾಂಡಿತ್ಯವನ್ನು ಪಡೆದುಕೊಂಡಿದ್ದರು. ಆ ಕಾಲದಲ್ಲಿಯೇ ಕೇರಳದಲ್ಲಿ ಜಾತಿ ವ್ಯವಸ್ಥೆ ತುಂಬಿ ತುಳುಕುತ್ತಿತ್ತು. ಅಸ್ಪೃಶ್ಯರು ಹಿಂದುಳಿದವರು ದೇವಸ್ಥಾನಕ್ಕೆ ಪ್ರವೇಶಿಸುವಂತಿರಲಿಲ್ಲ. ದೇವರ ಹೆಸರಿನಲ್ಲಿ ಪ್ರಾಣಿಹತ್ಯೆ ನಡೆಯುತ್ತಿತ್ತು. ಇದನ್ನು ನಾರಾಯಣ ಗುರುಗಳು ತೀವ್ರವಾಗಿ ಖಂಡಿಸುತ್ತಿದ್ದರು ಎಂದು ತಿಳಿಸಿದರು.

ಹಿಂದೆ ಕೇರಳದಲ್ಲಿ ಮಹಿಳೆಯರು ರಸ್ತೆಯಲ್ಲಿ ಸಂಚರಿಸುವಾಗ ಅವರ ಪರಿಸ್ಥಿತಿ ಹೀನಾಯವಾಗಿತ್ತು. ಇಂತಹ ಪರಿಸ್ಥಿತಿಯನ್ನು ಕಂಡ ನಾರಾಯಣ ಗುರುಗಳು ತುಳಿತಕ್ಕೊಳಗಾದವರ ಪರ ಧನಿಯೆತ್ತುತ್ತಿದ್ದರು. ಜೊತೆಗೆ ಅಂದಿಗೆ 60 ದೇವಸ್ಥಾನಗಳನ್ನು ಕಟ್ಟಿದರು. ತಮಿಳಿನಲ್ಲಿ ಹಲವಾರು ಪುಸ್ತಕಗಳನ್ನು ಬರೆದರು. ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯಬೇಕು. ಆರ್ಥಿಕವಾಗಿ ಎಲ್ಲರೂ ಸಬಲರಾಗಬೇಕು. ಇದನ್ನೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡ ವಾದಿಸಿದ್ದು. ಶಿಕ್ಷಣ, ಸಂಘಟನೆ, ಹೋರಾಟ ನಮ್ಮನ್ನು ಬಲಗೊಳಿಸುವುದಕ್ಕೆ ಪ್ರೇರಣಾ ಶಕ್ತಿಗಳಾಗಿವೆ ಎಂದು ತಿಳಿಸಿದರು.

ಸಮ ಸಮಾಜದ ನಿರ್ಮಾಣ : ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ವಿವಿಧ ಜನಾಂಗದವರನ್ನು ಸಂಘಟಿಸಿ ಶೋಷಿತರ, ಮಹಿಳೆಯರ ಪರ ಜ್ಯೋತಿ ಭಾಪುಲೆ, ಪೆರಿಯಾರ್, ಬಸವಣ್ಣನಂತೆ ನಾರಾಯಣ ಗುರುಗಳು ಶ್ರಮಿಸಿದರು. ಸಮ ಸಮಾಜದ ನಿರ್ಮಾಣಕ್ಕೆ ಹಾಗೂ ಮಹಿಳೆಯರ ಘನತೆಯನ್ನು ಕಾಪಾಡುವಲ್ಲಿ ಇವರುಗಳು ಸಮಾಜದ ಸುಧಾರಕರಾಗಿ ಉಳಿದುಕೊಂಡರು. ಕೇವಲ ದೀಪ ಬೆಳಗಿಸುವುದಕ್ಕೆ ಮಾತ್ರ ಕಾರ್ಯಕ್ರಮಗಳನ್ನು ಸೀಮಿತವಾಗಿರಿಸದೆ, ನಮ್ಮ ಜವಾಬ್ದಾರಿಯನ್ನು ಅರಿತು ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ, ಕಾರ್ಯೋನ್ಮುಖರಾಗಬೇಕು. ಸಮ ಸಮಾಜದ ನಿರ್ಮಾಣಕ್ಕೆ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಕರೆ ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್ ಅವರು ಮಾತನಾಡಿ, ಕೇರಳದಲ್ಲಿ ಮಹಿಳೆಯರ ಪರಿಸ್ಥಿತಿ ಕೆಳಮಟ್ಟದಲ್ಲಿದ್ದಾಗ, ಕೆಳವರ್ಗದ ಜನರು ದೇವತೆಗಳನ್ನು ಪೂಜಿಸಲು ಸಹ ಅವಕಾಶವಿಲ್ಲದೆ ಮಾರಿ ಮಸಣಿಯರನ್ನು ಪೂಜಿಸಬೇಕಾದ ಸಂದರ್ಭದಲ್ಲಿ ಶೋಷಿತರ ಪರವಾಗಿ ಧ್ವನಿಯೆತ್ತಿ, ಸಮಾಜದ ಸುಧಾರಣೆಗೆ ಶ್ರಮಿಸಿದವರಲ್ಲಿ ನಾರಾಯಣ ಗುರುಗಳು ಪ್ರಮುಖರು ಎಂದರು.

ಅಂದಿಗೆ ಕೇರಳದಲ್ಲಿ ನಾರಾಯಣ ಗುರುಗಳನ್ನು ಬಸವಣ್ಣ ಎನ್ನುತ್ತಿದ್ದರು. ಒಂದೇ ಜಾತಿ ಎಂದು ನಂಬಿದ್ದ ಅವರು 'ವಸು ದೈವ ಕುಟುಂಬಕಂ' ಎಂಬ ಆಶಯವನ್ನು ಹೊಂದಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿಯವರು ನಾರಾಯಣ ಗುರುಗಳನ್ನು ಭೇಟಿ ಮಾಡಿದಾಗ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಸ್ವಾತಂತ್ರ್ಯ ದೊರೆಯದಿದ್ದರೆ ದೇಶ ಸುರಕ್ಷಿತವಾಗಿ ಇರುವುದಿಲ್ಲ ಎಂದು ಹೇಳಿದ್ದರು. ಹಿಂದುಳಿದ ವರ್ಗವನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪಾತ್ರ ಮಹತ್ವದ್ದು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಮಮತೇಶ್ ಕಡೂರ್ ಅವರು ಮಾತನಾಡಿ, ನಾಡಿನಾದ್ಯಂತ ನಾರಾಯಣ ಗುರುಗಳ ಜಯಂತಿ ಆಚರಣೆಗೆ ಪ್ರಸ್ತುತ ಸರ್ಕಾರ ಕಾರಣ. ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ನಾರಾಯಣ ಗುರುಗಳ ವಿಚಾರಧಾರೆಗಳು ತಲುಪಬೇಕು. ಈಗಾಗಲೇ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು 19 ಕೃತಿಗಳು ಬಿಡುಗಡೆಯಾಗಿವೆ. ಸುಖ ಲೌಕಿಕ ಭೋಗದ ಜೀವನವನ್ನು ಬದಿಗಿಟ್ಟು ಕೇರಳದಲ್ಲಿ ಇದ್ದ ಅಂದಿನ ಅಮಾನವೀಯ ಪರಿಸ್ಥಿತಿಯನ್ನ ಬದಲಿಸಲು ಶ್ರಮಿಸಿದ ನಾರಾಯಣ ಗುರುಗಳ ಕೆಲವು ಆಶಯಗಳನ್ನು ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಡಾ. ಜಿ ರೂಪ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನಸ್ವಾಮಿ ಸಹಾಯಕ ನಿರ್ದೇಶಕರಾದ ಡಾ. ಎಂ ಡಿ ಸುದರ್ಶನ್, ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಸಂಘಟನೆಯ ಅಧ್ಯಕ್ಷರಾದ ಪೋತರಾಜು, ಮಹಿಳಾ ಸಂಘಟನೆಯ ಸರೋಜಮ್ಮ ಪಾಪೇಗೌಡ, ಯುವ ವೇದಿಕೆಯ ಅಧ್ಯಕ್ಷ ಸೋಮಶೇಖರ್ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸಮಾಜದ ಮುಖಂಡ ಹಾಗೂ ರಂಗ ಕರ್ಮಿ ರಾಜಶೇಖರ ಕದಂಬ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ :ಬಜೆಟ್ ಬೆನ್ನಲ್ಲೇ ಈಡಿಗ, ನಾರಾಯಣಗುರು ನಿಗಮ ಸ್ಥಾಪನೆ : ಸರ್ಕಾರದ ಆದೇಶ

Last Updated : Sep 6, 2023, 5:01 PM IST

ABOUT THE AUTHOR

...view details