ಬೆಂಗಳೂರು : ಪ್ರತಿ ಗ್ರಾಮ ಪಂಚಾಯಿತಿಗೆ 1.50 ಕೋಟಿ ರೂ ಅನುದಾನವನ್ನು ಹಾಗೂ ನರೇಗಾ ಯೋಜನೆಯನ್ನು ನೇರವಾಗಿ ನೀಡಲಾಗುವುದು ಎಂದು ಆಮಿಷ ಒಡ್ಡಿರುವ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಅವರಿಗೆ ಚುನಾವಣೆ ಘೋಷಣೆಯಾಗಿರುವ ಬಗ್ಗೆ ಕನಿಷ್ಠ ಜ್ಞಾನವಿಲ್ಲವೇ?, ಈ ಕೂಡಲೇ ಈ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಆಮ್ ಆದ್ಮಿ ಪಕ್ಷದ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಆಗ್ರಹಿಸಿದ್ದಾರೆ.
ನಗರದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಇಷ್ಟು ದಿನ ಗ್ರಾಮಗಳ ಬಗ್ಗೆ ಮಾತನ್ನೇ ಆಡದ ನೀವು ಈಗ "ಗ್ರಾಮ ಸ್ವರಾಜ್ಯ" ಎನ್ನುವ ಮೂಲಕ ಮಹಾತ್ಮ ಗಾಂಧೀಜಿಯವರ ಆಶಯಗಳಿಗೆ ಮಸಿ ಬಳಿಯುತ್ತಿದ್ದೀರಿ. ಚುನಾವಣೆ ಹೊತ್ತಿನಲ್ಲೇ ನಿಮಗೆ ಗ್ರಾಮಗಳ ನೆನಪಾದವೇ?, ಇಷ್ಟು ದಿನ ನಾಪತ್ತೆಯಾಗಿದ್ದ ನೀವು ದಿಢೀರ್ ಎಂದು ಪ್ರತ್ಯಕ್ಷವಾಗಿ ಸುಮ್ಮನೆ ಬಡಬಡಾಯಿಸುವುದನ್ನು ನಿಲ್ಲಿಸಿ ಎಂದರು.