ಕರ್ನಾಟಕದಲ್ಲಿ ಸದ್ಯ ನಂದಿನಿ-ಅಮುಲ್ ಮಧ್ಯೆ ಪೈಪೋಟಿ ನಡೆಯುತ್ತಿದೆ. ರಾಜ್ಯದಲ್ಲಿ ಅಮುಲ್ ಹಾಲು ಮಾರಾಟ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ, ಅದರಲ್ಲೂ ಮುಖ್ಯವಾಗಿ ರಾಜಕೀಯವಾಗಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಚುನಾವಣೆಯ ಹೊಸ್ತಿಲಲ್ಲಿ ಈ ಜಟಾಪಟಿ ಇನ್ನೂ ತಾರಕಕ್ಕೇರಿದೆ. ಅಷ್ಟಕ್ಕೂ ರಾಜ್ಯದ ಹೆಮ್ಮೆಯ ನಂದಿನಿ ಬ್ರಾಂಡ್ ಬುನಾದಿ, ಅಮುಲ್ ಮಾರುಕಟ್ಟೆ, ಸಹಕಾರ ತತ್ವ ಏನಿದೆ ಎಂಬ ಸಮಗ್ರ ವರದಿ ಇಲ್ಲಿದೆ.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ದೇಶದ 2ನೇ ಅತೀ ದೊಡ್ಡ ಸಹಕಾರ ಹಾಲು ಮಹಾಮಂಡಳ ಸಂಸ್ಥೆ. ಗುಜರಾತ್ ಮೂಲದ ಅಮುಲ್ ದೇಶದ ಅಗ್ರಗಣ್ಯ ಸಹಕಾರ ಹಾಲು ಮಹಾಮಂಡಳ. ಸದ್ಯ ಈ ಎರಡೂ ಬ್ರಾಂಡ್ಗಳ ಹಾಲಿನ ವಿಚಾರ ರಾಜ್ಯದಲ್ಲಿ ಸಂಘರ್ಷ ಉಂಟು ಮಾಡಿದೆ. ಚುನಾವಣೆ ಹೊಸ್ತಿಲಲ್ಲಿ ಹಾಲಿನ ಹೋರಾಟಕ್ಕೆ ರಾಜಕೀಯ ಹುಳಿಯೂ ಬೆರೆತಿದೆ. ಗುಜರಾತ್ ಮೂಲದ ಅಮುಲ್ ರಾಜ್ಯದಲ್ಲಿ ಹಾಲು ಮಾರಾಟ ಮಾಡುತ್ತಿರುವುದೇ ಈಗ ಕನ್ನಡಿಗರ ಆಕ್ರೋಶಕ್ಕೆ ಕಾರಣ.
ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್ ಅಮುಲ್ ಅಭಿಯಾನ ಆರಂಭವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ವಿವಾದವನ್ನು ರಾಜಕೀಯ ದಾಳವಾಗಿ ಬಳಸಲು ಆರಂಭಿಸಿವೆ. ಕನ್ನಡದ ಹೆಮ್ಮೆಯ ನಂದಿನಿಯನ್ನು ಮುಚ್ಚುವ ಪ್ರಯತ್ನ ಎಂಬುದು ಆರೋಪ. ಈ ವಿಚಾರ ಇದೀಗ ಪ್ರತಿಪಕ್ಷ ಹಾಗೂ ಆಡಳಿತಾರೂಢ ಬಿಜೆಪಿ ಮಧ್ಯೆ ತೀವ್ರ ಗಲಾಟೆಗೆ ಕಾರಣವಾಗಿದೆ.
ರಾಜ್ಯದಲ್ಲಿ 26 ಲಕ್ಷ ಗ್ರಾಮೀಣ ರೈತರಿಂದ ದಿನಂಪ್ರತಿ ಸರಾಸರಿ 85 ಲಕ್ಷ ಲೀಟರ್ ಹಾಲು ಸಂಗ್ರಹಿಸಿ, ಸುಮಾರು 150ಕ್ಕೂ ಹೆಚ್ಚು ವಿವಿಧ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ರಾಜ್ಯದ ಜನತೆಗೆ ಕಳೆದ 4 ದಶಕಗಳಿಂದ ಒದಗಿಸಲಾಗುತ್ತಿದೆ. ಕಳೆದ 5 ವರ್ಷಗಳ ಅವಧಿಯಲ್ಲಿ ಹಾಲಿನ ಸರಾಸರಿ ಶೇಖರಣೆ ಶೇ.6 ರಿಂದ 7ರಷ್ಟು ಪ್ರಗತಿಯಾಗಿದೆ.
ನಂದಿನಿ ಬ್ರಾಂಡ್ ವಹಿವಾಟು ಏನು?:ಕೆಎಂಎಫ್ ಹಾಗೂ ಸಹಕಾರ ಸಂಘಗಳು ಒಟ್ಟು ವಾರ್ಷಿಕವಾಗಿ 22,000 ಕೋಟಿ ರೂ ಮೌಲ್ಯದ ನಂದಿನಿ ಹಾಲು ಉತ್ಪನ್ನಗಳ ಮೂಲಕ ವಹಿವಾಟು ನಡೆಸುತ್ತಿದೆ. ರಾಜ್ಯದಲ್ಲಿ ಈಗಾಗಲೇ 18 ಖಾಸಗಿ ಹಾಲಿನ ಬ್ರಾಂಡ್ಗಳು ವಹಿವಾಟು ನಡೆಸುತ್ತಿವೆ. ಈ ಮಧ್ಯೆ ನಂದಿನಿ ಹಾಲು ಮೊಸರು ಮಾರುಕಟ್ಟೆ ಪಾಲು ಶೇ.84ರಷ್ಟು ಎಂದು ಎಂಡಿ ಬಿ.ಸಿ.ಸತೀಶ್ ತಿಳಿಸಿದ್ದಾರೆ. ಕೆಎಂಎಫ್ ಆನ್ಲೈನ್ ಮೂಲಕ ಬೆಂಗಳೂರಲ್ಲಿ ಹಾಲಿನ ಮಾರಾಟ ಮಾಡುತ್ತಿದೆ. ಆ ಮೂಲಕ ಪ್ರತಿನಿತ್ಯ 2.5 ಲಕ್ಷ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಲ್ಲಿ ಒಟ್ಟು 33 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಈ ಪೈಕಿ ಕೆಎಂಎಫ್ ನ ನಂದಿನಿ ಹಾಲಿನ ಮಾರಾಟ 26 ಲಕ್ಷ ಲೀಟರ್ ಆಗಿದೆ ಎಂದು ಕೆಎಂಎಫ್ ತಿಳಿಸಿದೆ.
ಪ್ರತಿ ತಿಂಗಳು ಕೆಎಂಎಫ್ ದೇಶ ಕಾಯುವ ಸೈನಿಕರಿಗೆ ಒಂದು ಕೋಟಿ ಲೀಟರ್ ಹಾಲು ಸರಬರಾಜು ಮಾಡುತ್ತಿದೆ. ದೇಶದ ಅನೇಕ ನಗರಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಲಭ್ಯವಿದೆ. ಮಹಾರಾಷ್ಟ್ರದ ಮುಂಬೈ, ಪುಣೆ, ಸೊಲ್ಲಾಪುರ, ವಿದರ್ಭ ಪ್ರಾಂತ್ಯ (ನಾಗಪುರ), ಹೈದರಾಬಾದ್, ಚೆನ್ನೈ, ಕೇರಳ ಮತ್ತು ಗೋವಾದಲ್ಲಿ ನಂದಿನಿ ತನ್ನ ಮಾರುಕಟ್ಟೆ ವಿಸ್ತರಿಸಿದೆ. ಪ್ರತಿ ನಿತ್ಯ 7 ಲಕ್ಷಕ್ಕೂ ಅಧಿಕ ಲೀಟರ್ ಹಾಲು ಮತ್ತು ಮೊಸರನ್ನು ಸ್ಥಳೀಯವಾಗಿ ಅಲ್ಲಿನ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ ಎಂದು KMF ತಿಳಿಸಿದೆ.