ಬೆಂಗಳೂರು: ಮನೆ ಮಂದೆ ನಿಲ್ಲಿಸಿದ್ದ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 6.88 ಲಕ್ಷ ರೂ. ಮೌಲ್ಯದ 10 ದ್ವಿಚಕ್ರ ಹಾಗೂ ಒಂದು ತ್ರಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಮೇ 31ರಂದು ರಾತ್ರಿ 11 ಗಂಟೆ ಸುಮಾರಿಗೆ ನಂಜುಂಡೇಶ್ವರನಗರದ ನಾಗರಾಜ್ ಎಂಬುವರ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದರು. ಈ ಬಗ್ಗೆ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮಧ್ಯೆ ಜುಲೈ11ರಂದು ಸಂಜೆ ಅಪರಾಧ ವಿಭಾಗದ ಸಿಬ್ಬಂದಿ ಲಗ್ಗೆರೆಯ ಕೃಷ್ಣಭವನ ಹೋಟೆಲ್ ಬಳಿ ಗಸ್ತಿನಲ್ಲಿದ್ದಾಗ ಮೂವರು ಹೊಂಡಾ ಡಿಯೋ ದ್ವಿಚಕ್ರ ವಾಹನದಲ್ಲಿ ಬರುತ್ತಿರುವುದನ್ನು ಗಮನಿಸಿ ತಡೆದು ದಾಖಲಾತಿಗಳನ್ನು ಪರಿಶೀಲಿಸಿದಾಗ ಯಾವುದೇ ದಾಖಲಾತಿ ಇರಲಿಲ್ಲ. ಈ ವಾಹನವನ್ನು ಕಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದರು.