ಬೆಂಗಳೂರು: ಆಂಧ್ರದ ತಿರುಪತಿ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಗೆ ಸರಬರಾಜು ಮಾಡುತ್ತಿದ್ದ ಕರ್ನಾಟಕದ ನಂದಿನಿ ತುಪ್ಪವನ್ನು ಸ್ಥಗಿತಗೊಳಿಸಲಾಗಿದೆ. ಇದು ಈಗ ರಾಜ್ಯದಲ್ಲಿ ಭಾರಿ ಚರ್ಚೆಯ ವಿಷಯವಾಗಿದೆ. ಲಡ್ಡು ತಯಾರಿಕೆಗೆ ಸರಬರಾಜು ಮಾಡುತ್ತಿದ್ದ ತುಪ್ಪವನ್ನು ನಿಲ್ಲಿಸಿರುವುದರಿಂದ ಕೆಎಂಎಫ್ಗೆ ಲಾಭವೋ ಅಥವಾ ನಷ್ಟವೋ? ಎಂಬೆಲ್ಲಾ ಚರ್ಚೆಗಳು ಸಹ ನಡೆಯುತ್ತಿವೆ.
ತಿರುಪತಿಯಲ್ಲಿ ಲಡ್ಡು ಪ್ರಸಾದದ ಸ್ವಾದಿಷ್ಟ ರುಚಿಗೆ ನಂದಿನಿ ತುಪ್ಪವನ್ನೇ ಬಳಸಲಾಗುತ್ತಿತ್ತು. ಇನ್ನು ಮುಂದೆ ಲಡ್ಡು ಪ್ರಸಾದದಲ್ಲಿ ನಂದಿನಿ ತುಪ್ಪ ಇರುವುದಿಲ್ಲ. ಕಳೆದ ಇಪ್ಪತ್ತು ವರ್ಷಗಳಿಂದ ತಿರುಪತಿಗೆ ಕೆಎಂಎಫ್ ನಂದಿನಿ ತುಪ್ಪ ಪೂರೈಕೆ ಆಗುತ್ತಿತ್ತು. ತಿರುಪತಿಗೆ 6 ತಿಂಗಳಿಗೆ 14 ಲಕ್ಷ ಕೆಜಿಯಷ್ಟು ತುಪ್ಪವನ್ನು ಸರಬರಾಜು ಮಾಡಬೇಕು. ಇಷ್ಟು ದಿನ ದೇವಸ್ಥಾನಕ್ಕೆಂದು ತುಪ್ಪ ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಕಡಿಮೆ ಬೆಲೆಗೆ ತುಪ್ಪ ಕೊಡಲು ಸಾಧ್ಯವಿಲ್ಲವೆಂದು ಕೆಎಂಎಫ್ ಹೇಳಿದೆ.
ಕರ್ನಾಟಕದಲ್ಲಿ ಸದ್ಯ ಹಾಲಿನ ಕೊರತೆ ಹೆಚ್ಚಾಗುತ್ತಲೇ ಇದೆ. ಹಾಲಿನ ಕೊರತೆಯಿಂದ ಉಪ ಉತ್ಪನ್ನಗಳ ದರ ಏರಿಕೆ ಅನಿವಾರ್ಯವಾಗಿದೆ. ಇದರಿಂದಾಗಿ ನಂದಿನಿ ತುಪ್ಪದ ದರವೂ ಹೆಚ್ಚಳವಾಗಿದೆ. ಈ ಪರಿಸ್ಥಿತಿಯಲ್ಲಿ ಕಡಿಮೆ ಬೆಲೆಗೆ ತುಪ್ಪ ಪೂರೈಸಿದ್ರೆ ನಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ನಂದಿನಿ ತುಪ್ಪ ಮಾರಾಟ ಮಾಡದಿರಲು ಕೆಎಂಎಫ್ ನಿರ್ಧಾರ ಮಾಡಿದೆ.
ಟಿಟಿಡಿ ಆಡಳಿತ ಮಂಡಳಿಯು ಲಡ್ಡು ತಯಾರಿಕೆಗೆ ಬೇಕಾಗಿರುವ ತುಪ್ಪ ಖರೀದಿಸಲು ಪ್ರತಿ 6 ತಿಂಗಳಿಗೊಮ್ಮೆ ಟೆಂಡರ್ ನಡೆಸುತ್ತದೆ. ಕೆಎಂಎಫ್ ಹಲವು ವರ್ಷಗಳಿಂದ ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಟಿಟಿಡಿಗೆ ತುಪ್ಪ ಪೂರೈಸುತಿತ್ತು. ಆದರೆ, ಕಳೆದ ಬಾರಿ 2022-23 ನೇ ಸಾಲಿನ ಟೆಂಡರ್ ನಲ್ಲಿ ಕೆಎಂಎಫ್ ತುಪ್ಪಕ್ಕೆ ಹೆಚ್ಚಿನ ದರದ ಬೇಡಿಕೆ ಇಟ್ಟಿತ್ತು. ಹಾಗಾಗಿ, ಟಿಟಿಡಿ ಆಡಳಿತ ಮಂಡಳಿಯು ಬೇರೆ ಮೂಲದಿಂದ ತುಪ್ಪ ಖರೀದಿಸಲು ತೀರ್ಮಾನಿಸಿತು. ನಂದಿನಿ ತುಪ್ಪದ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ. ಹೀಗಾಗಿ, ಟಿಟಿಡಿಯ 2022-23 ಸಾಲಿನ ಟೆಂಡರ್ ನಲ್ಲಿ ಪ್ರತಿ ಕೆ.ಜಿ. ತುಪ್ಪಕ್ಕೆ ಸುಮಾರು 450 ರೂ.ಗೆ ಕೆಎಂಎಫ್ ಬಿಡ್ ಮಾಡಿತ್ತು. ಟೆಂಡರ್ ನಲ್ಲಿ ಬೇರೆ ಏಜೆನ್ಸಿಗಳು ಕೆಎಂಎಫ್ ಗಿಂತಲೂ ಕಡಿಮೆ ದರದ ಬಿಡ್ ಮಾಡಿದ್ದವು. ಹೀಗಾಗಿ, ಟಿಟಿಡಿ ಕಳೆದ ವರ್ಷವೇ ಕೆಎಂಎಫ್ ನಿಂದ ನಂದಿನಿ ತುಪ್ಪದ ಖರೀದಿ ಸ್ಥಗಿತಗೊಳಿಸಿತ್ತು. ಕೆಎಂಎಫ್ ಬದಲಿಗೆ ಕಡಿಮೆ ಬಿಡ್ ಮಾಡಿದ್ದ ಏಜೆನ್ಸಿಗಳಿಂದ ಟಿಟಿಡಿ ತುಪ್ಪ ಖರೀದಿಸಿತ್ತು.
ಕಳೆದ 20 ವರ್ಷಗಳಿಂದ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಗೆ ಕರ್ನಾಟಕ ಹಾಲು ಒಕ್ಕೂಟದ ಬಳ್ಳಾರಿ ವಿಭಾಗದಿಂದ ನಂದಿನಿ ತುಪ್ಪವನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಅತ್ಯಂತ ಕಡಿಮೆ ಬೆಲೆಗೆ ತುಪ್ಪ ಕೇಳುತ್ತಿರುವ ಹಿನ್ನೆಲೆಯಲ್ಲಿ ತುಪ್ಪ ಸರಬರಾಜು ಮಾಡುವುದನ್ನು ಕೆಎಂಎಫ್ ವಾಪಸ್ ಪಡೆದುಕೊಂಡಿದೆ ಎಂದು ಕರ್ನಾಟಕ ಹಾಲು ಮಹಾಮಂಡಲ ಅಧ್ಯಕ್ಷ ಎಸ್. ಭೀಮಾನಾಯ್ಕ ತಿಳಿಸಿದ್ದಾರೆ.
ರಾಜ್ಯದಲ್ಲಿ ಹಾಲು ಮತ್ತು ತುಪ್ಪದ ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ತುಪ್ಪಕ್ಕೆ ಹೆಚ್ಚಿನ ಬೆಲೆ ನೀಡುವಂತೆ ಟಿಟಿಡಿ ಅವರನ್ನು ಕೇಳಲಾಗಿತ್ತು. ಆದರೆ, ಟಿಟಿಡಿ ತುಪ್ಪ ಖರೀದಿಗೆ ಇ-ಪ್ರೊಕ್ಯೂರ್ ಮೆಂಟ್ ಮೂಲಕ ಕಡಿಮೆ ಬೆಲೆ ನಮೂದಿಸಿದ ಕಂಪನಿಯನ್ನು ಆಯ್ಕೆ ಮಾಡಿಕೊಂಡಿದೆ. ನಷ್ಟ ಮಾಡಿಕೊಂಡು ಟಿಟಿಡಿಗೆ ತುಪ್ಪ ಪೂರೈಸಲು ಆಗುವುದಿಲ್ಲ. ಗುಣಮಟ್ಟದ ನಂದಿನಿ ತುಪ್ಪಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಬೇಡಿಕೆಯ ಶೇ.60 ರಷ್ಟು ಮಾತ್ರ ಪೂರೈಕೆ ಮಾಡಲು ಸಾಧ್ಯವಾಗಿದೆ. ಹಾಗಾಗಿಯೇ ಹಾಲು ಉತ್ಪಾದನೆ ಹೆಚ್ಚಳಕ್ಕೆ ರೈತರಿಗೆ ಹೆಚ್ಚುವರಿಯಾಗಿ 3 ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.