ಚಿಕ್ಕಬಳ್ಳಾಪುರ: ಅಧಿಕ ಮಳೆಯಿಂದ ಜಗತ್ಪ್ರಸಿದ್ಧ ನಂದಿಗಿರಿಧಾಮದ ರಸ್ತೆ ಕುಸಿದ ಪರಿಣಾಮ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಇದರಿಂದ ನಂದಿಗಿರಿಧಾಮದ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈಗ ರಸ್ತೆ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು, ನಾಳೆಯಿಂದಲೇ(ಬುಧವಾರ) ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಪ್ರವೇಶ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ನಾಳೆಯಿಂದ ವಿಶ್ವ ವಿಖ್ಯಾತ ನಂದಿ ಹಿಲ್ಸ್ ಪ್ರವಾಸಿಗರಿಗೆ ಮುಕ್ತ - ಚಿಕ್ಕಬಳ್ಳಾಪುರ ಪ್ರವಾಸಿ ತಾಣಗಳು
ಪ್ರಸಿದ್ಧ ನಂದಿಗಿರಿಧಾಮದ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ನಾಳೆಯಿಂದಲೇ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಪ್ರವೇಶ ದೊರೆಯಲಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್. ಲತಾ ತಿಳಿಸಿದರು.
ಹೆಚ್ಚಿನ ಮಳೆಯಿಂದಾಗಿ ಆಗಸ್ಟ್ ತಿಂಗಳಲ್ಲಿ ನಂದಿ ಗಿರಿಧಾಮದ ರಸ್ತೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಗಿರಿಧಾಮಕ್ಕೆ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಸದ್ಯ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ನಾಳೆಯಿಂದಲೇ ನಂದಿಗಿರಿಧಾಮ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾಗಲಿದೆ. ಆದರೆ, ವಾರಾಂತ್ಯದ ಶನಿವಾರ ಮತ್ತು ಭಾನುವಾರದ ದಿನಗಳಂದು ಮಾತ್ರ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಗಿರಿಧಾಮದ ಹೋಟೆಲ್ ಮತ್ತು ವಸತಿ ಗೃಹಗಳಲ್ಲಿ ಮುಂಗಡವಾಗಿ ಕೊಠಡಿಗಳನ್ನು ಕಾಯ್ದಿರಿಸಿದವರಿಗೆ ಅಷ್ಟೇ ವಾರಾಂತ್ಯದ ದಿನಗಳಂದು ಪ್ರವೇಶವಿರುತ್ತದೆ.
ಪ್ರಕೃತಿ ರಮಣೀಯತೆ ಮತ್ತು ಸಸ್ಯಗಳು ಹಾಗೂ ಜೀವವೈವಿಧ್ಯತೆಯ ಕಾರಣದಿಂದ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದು ವಿಶಿಷ್ಟವಾಗಿ ಗುರುತಿಸಿಕೊಂಡಿರುವ ನಂದಿಗಿರಿಧಾಮ ಜಿಲ್ಲೆಯ ಅಮೂಲ್ಯವಾದ ಆಸ್ತಿ ಮತ್ತು ಹೆಮ್ಮೆಯಾಗಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ಸ್ವಚ್ಛತೆ ಕಾಪಾಡುವ ಮೂಲಕ ಗಿರಿಧಾಮದ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಜಿಲ್ಲಾಡಳಿತ ಈಗಾಗಲೇ ನಂದಿಗಿರಿಧಾಮದಲ್ಲಿ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಅನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು, ಗಿರಿಧಾಮಕ್ಕೆ ಬರುವವರು ಸುರಕ್ಷತೆ, ಸ್ವಚ್ಛತೆ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಹಕರಿಸಬೇಕು ಜೊತೆಗೆ ಕೋವಿಡ್ -19 ರ ನಿಯಂತ್ರಣದ ಸರ್ಕಾರದ ಮಾರ್ಗಸೂಚಿ ಕ್ರಮಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಮನವಿ ಮಾಡಿದ್ದಾರೆ.