ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ನಂದಮೂರಿ ಬಾಲಕೃಷ್ಣ ಭೇಟಿ ಬೆಂಗಳೂರು:ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಹೃದಯಾಘಾತ ಚಿಕಿತ್ಸೆ ಪಡೆಯುತ್ತಿರುವ ಯುವನಟ ತಾರಕರತ್ನ ಅವರನ್ನು ಪತ್ನಿ ಅಲೈಕ್ಯಾ ರೆಡ್ಡಿ ಮತ್ತು ನಂದಮೂರಿ ಬಾಲಕೃಷ್ಣ ನೋಡಿ ಉಭಯ ಕುಶಲೋಪರಿ ವಿಚಾರಿಸಿ ಆಸ್ಪತ್ರೆಯಿಂದ ಹೊರ ನಡೆದಿದ್ದಾರೆ ಎಂದು ತಿಳಿದು ಬಂದಿದೆ.
ಇವರು ಆಸ್ಪತ್ರೆಗೆ ಮತ್ತೆ ಬರುವ ಮುನ್ಸೂಚನೆ ಹಿನ್ನೆಲೆ ಹಾಗೂ ನಾರಾಯಣ ಹೆಲ್ತ್ ಸಿಟಿ ಇನ್ನೂ ಹೆಲ್ತ್ ಬುಲೆಟಿನ್ ನೀಡದಿರುವುದರಿಂದ ಸಹಜವಾಗಿ ಆಸ್ಪತ್ರೆ ಹೊರಗಿರುವ ನಂದಮೂರಿ ಕುಟುಂಬದ ಅಭಿಮಾನಿಗಳ ಕಾತರ ದುಪ್ಪಟ್ಟಾಗಿದೆ. ಈವರೆಗೂ ಎನ್ಹೆಚ್ ಕಡೆಯಿಂದ ಸಣ್ಣ ಮಾಹಿತಿಯೂ ಅಧಿಕೃತವಾಗಿ ಹೊರಬಿದ್ದಿಲ್ಲದ. ಹಾಗಾಗಿ ತಾರಕರತ್ನ ಆರೋಗ್ಯದ ಸ್ಥಿತಿ ವೈದ್ಯರ ಕೈಯ್ಯಲ್ಲೇ ಉಳಿದಿದೆ ಎನ್ನಲಾಗಿದೆ.
ತಾರಕರತ್ನಗೆ ಲಘು ಹೃದಯಾಘಾತ:ಆಂಧ್ರಪ್ರದೇಶದ ತೆಲುಗು ದೇಶಂ ಪಾರ್ಟಿಯ ಯುವಘಳಂ ಪ್ರಚಾರದ ಚಟುವಟಿಕೆಗಳಲ್ಲಿ ತಾರಕರತ್ನ ತೊಡಗಿಸಿಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಕುಪ್ಪಂನ ಪ್ರಮುಖ ಬೀದಿಗಳಲ್ಲಿ ಸಾಗಿದ ಯುವಘಳಂ ಪಾದಯಾತ್ರೆಯಲ್ಲಿ ನಾರಾ ಲೋಕೇಶ್ ಅವರೊಂದಿಗೆ ಹೆಜ್ಜೆ ಹಾಕಿದ್ದ ಸಂದರ್ಭದಲ್ಲಿ ನಟ ತಾರಕರತ್ನ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಟಿಡಿಪಿ ಪಕ್ಷದ ಕಾರ್ಯಕರ್ತರು ಕೂಡಲೇ ಅವರನ್ನು ಕುಪ್ಪಂ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಹೆಚ್ಚಿನ ಚಿಕಿತ್ಸೆಗೆ ಕೃಷ್ಣಗಿರಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಕರೆತಂದು ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಗೆ ದಾಖಲಿಸಲಾಗಿದೆ.
ಆಸ್ಪತ್ರೆ ಸುತ್ತ-ಮುತ್ತ ಬಿಗಿ ಭದ್ರತೆ:ಕುಪ್ಪಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ನಟ ತಾರಕರತ್ನ ಆರೋಗ್ಯ ಸ್ಥಿತಿ ಸ್ಥಿರವಾಗಿತ್ತು. ಆದರೆ, ಮುಂಜಾಗ್ರತೆಗಾಗಿ ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಗಾಗಿ ನಾರಾಯಣ ಹೆಲ್ತ್ ಸಿಟಿಗೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದರು. ಹೀಗಾಗಿ ಅವರನ್ನು ಎನ್ಹೆಚ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟೇ ಅಲ್ಲ, ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆಯಾಗದಂತೆ ಹಾಗೂ ಎನ್ ಟಿಆರ್ ಕುಟುಂಬದ ಅಭಿಮಾನಿಗಳ ನೂಕು ನುಗ್ಗಲು ತಡೆಯಲು ಅತ್ತಿಬೆಲೆ, ಸೂರ್ಯಸಿಟಿ, ಹೆಬ್ಬಗೋಡಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ನಟ ನಾರಾಯಣ ಹೆಲ್ತ್ ಸಿಟಿಗೆ ಶಿಫ್ಟ್: ತೆಲುಗಿನ ನಂದಮೂರಿ ಕುಟುಂಬದ ನಟ ತಾರಕರತ್ನ ಅವರನ್ನು ಬೊಮ್ಮಸಂದ್ರ - ಹೆಬ್ಬಗೋಡಿಯ ನಾರಾಯಣ ಹೆಲ್ತ್ ಸಿಟಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆತರಲಾಗಿದೆ. ತಡ ರಾತ್ರಿ 2ಗಂಟೆ ಸುಮಾರಿಗೆ ನಲವತ್ತು ಕಾರುಗಳಲ್ಲಿ ಕುಟುಂಬ ಹಾಗು ಟಿಡಿಪಿ ಪಕ್ಷದ ಕಾರ್ಯಕರ್ತರ ಆಗಮಿಸಿದ್ದರು. ಕುಪ್ಪಂ ಖಾಸಗಿ ಆಸ್ಪತ್ರೆಯಿಂದ 12.50ಕ್ಕೆ ನಿರ್ಗಮಿಸಿದ ತಾರಕರತ್ನ ಇದ್ದ ಆಂಬ್ಯುಲೆನ್ಸ್ ಝೀರೋ ಟ್ರಾಫಿಕ್ ಮೂಲಕ ಸುಮಾರು 148 ಕಿ.ಮೀ ದೂರವನ್ನು ಕೇವಲ 1 ಗಂಟೆ 25 ನಿಮಿಷದಲ್ಲಿ ಕ್ರಮಸಿ ಎನ್ಹೆಚ್ ಆಸ್ಪತ್ರೆಗೆ ದಾಖಲಿಸಲಾಯಿತು.. ಈ ವೇಳೆ ತಮಿಳುನಾಡಿನ ಕೃಷ್ಣಗಿರಿ, ಸೂಳಗಿರಿ, ಹೊಸೂರು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಅತ್ತಿಬೆಲೆ ಗಡಿ ಮೂಲಕ ಚಂದಾಪುರ, ಬೊಮ್ಮಸಂದ್ರ ಮಾರ್ಗವನ್ನು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ತಾರಕರತ್ನ ಆರೋಗ್ಯದ ಬಗ್ಗೆ ಎನ್ಟಿಆರ್ ಕುಟುಂಬ ನಿಗಾ: ವಿಷಯ ತಿಳಿದ ತಕ್ಷಣ ಆಂಧ್ರದ ಹಿಂದೂಪುರಂ ಶಾಸಕ ಹಾಗೂ ಚಿತ್ರ ನಾಯಕ ನಂದಮೂರಿ ಬಾಲಕೃಷ್ಣ ಆಸ್ಪತ್ರೆಗೆ ಭೇಟಿ ನೀಡಿ ಅನಾರೋಗ್ಯಕ್ಕೊಳಗಾದ ತಾರಕರತ್ನ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ತಾರಕರತ್ನ ಅವರ ಆರೋಗ್ಯದ ಬಗ್ಗೆ ಟಿಡಿಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬಾಲಕೃಷ್ಣ ಅವರಿಗೆ ಕರೆ ಮಾಡಿ, ಮಾಹಿತಿ ಪಡೆದಿದ್ದಾರೆ. ಜೂನಿಯರ್ ಎನ್‌ಟಿಆರ್‌ಗೂ ಪರಿಸ್ಥಿತಿ ಬಗ್ಗೆ ವಿವರಿಸಲಾಗಿದೆ.
ಚಂದ್ರಬಾಬು ನಾಯ್ಡು ಭೇಟಿ:ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೂ ಸಹ ನಟ ತಾರಕರತ್ನ ಅವರ ಆರೋಗ್ಯ ವಿಚಾರಿಸಲು ಚಂದ್ರಾಪುರದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಆಗಮಿಸಿದ್ದರು. ಬಳಿಕ ಮಾತನಾಡಿದ ಅವರು, ಪಾದಯಾತ್ರೆ ವೇಳೆ ಘಟನೆ ನಡೆದಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ರಾತ್ರಿ ವೇಳೆ ನಾರಾಯಣ ಹೃದಯಾಲಯಕ್ಕೆ ಕರೆದುಕೊಂಡು ಬರಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಚೇತರಿಸಿಕೊಳ್ಳಲು ಕೆಲ ಸಮಯ ಬೇಕಾಗುತ್ತದೆ. ವೈದ್ಯರು ಎಲ್ಲಾ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ತಾರಕ್ ಬೇಗ ಗುಣಮುಖವಾಗಲೆಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು.
ಅಲ್ಲದೆ, ಆಂಧ್ರಪ್ರದೇಶದ ಮಾಜಿ ಸಚಿವರಾದ ದೇವಲೇನಿ ಉಮಾ ಮಹೇಶ್, ಚಿನ್ನರಾಜಪ್ಪ ಅವರೂ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದರು. ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ತಾರಕರತ್ನ ಅವರ ಆರೋಗ್ಯವು ಸ್ಥಿರವಾಗಿದೆ, ಯಾವುದೇ ತೊಂದರೆ ಇಲ್ಲ ಅಂತಾ ಈಗಾಗಲೇ ವೈದ್ಯರು ಹೇಳಿದ್ದಾರೆ. ಆಸ್ಪತ್ರೆಗೆ ಬೇರೆ ಬೇರೆ ರಾಜ್ಯದಿಂದಲೂ ವೈದ್ಯರ ತಂಡ ಬರುತ್ತಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣದಿಂದ ಆಪ್ತರು ಕುಟುಂಬದವರು ಆಸ್ಪತ್ರೆ ಬರುತ್ತಿದ್ದಾರೆ. ಆದರೆ, ನೇರವಾಗಿ ನೋಡಲು ಅವಕಾಶ ಇಲ್ಲ ವೈದ್ಯರು ಹೇಳಿದ್ದಾರೆ.
ಜೊತೆಗೆ, ಮಾಜಿ ಕೇಂದ್ರ ಸಚಿವೆ ಹಾಗೂ ತಾರಕ್ ಅವರ ಅತ್ತೆ ಪುರಂದೇಶ್ವರಿ, ಜೂನಿಯರ್ ಎನ್.ಟಿ ಆರ್ ಸಹೋದರಿ ಸುಹಾಸಿನಿ ಕೂಡ ಆಸ್ಪತ್ರೆಗೆ ಭೇಟಿ ನೀಡಿ ತೆರಳಿದ್ದಾರೆ.
ಇದನ್ನೂ ಓದಿ:ತೆಲುಗು ಯುವನಟ ತಾರಕರತ್ನಗೆ ಲಘು ಹೃದಯಾಘಾತ.. ಬೊಮ್ಮಸಂದ್ರದಲ್ಲಿ ಮುಂದುವರಿದ ಚಿಕಿತ್ಸೆ