ಬೆಂಗಳೂರು:ಓಲಾ, ಉಬರ್, ಅಗ್ರಿಗೇಟರ್‌ಗಳಿಗೆ ಸೆಡ್ಡು ಹೊಡೆಯಲು ಆಟೋ ಚಾಲಕರೇ ಸೇರಿ ಆರಂಭಿಸುತ್ತಿರುವ ‘ನಮ್ಮ ಯಾತ್ರಿ’ ಆ್ಯಪ್‌ಗೆ ದಿನದಿಂದ ದಿನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ರಾಜ್ಯೋತ್ಸವದ ದಿನದಂದು ನಮ್ಮ ಯಾತ್ರಿ ಆ್ಯಪ್ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದ್ದು, ಓಲಾ, ಉಬರ್ ಮುಂತಾದ ಅಗ್ರಿಗೇಟರ್‌ಗಳಂತೆ ಸ್ಥಿರ ದರದ ಬದಲಾಗಿ ಗ್ರಾಹಕರಿಗೆ ಅನುಕೂಲವಾಗುವಂತೆ ಆ್ಯಪ್ ಗ್ರಾಹಕ ಸ್ನೇಹಿಯಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಈಗಾಗಲೇ ಆಟೋ ಚಾಲಕರ ಯೂನಿಯನ್ ಆರು ತಿಂಗಳ ಹಿಂದೆ ಆರಂಭಿಸಿರುವ ನಮ್ಮ ಯಾತ್ರಿ ಆ್ಯಪ್, ಹೊಸ ರೈಡಿಂಗ್ ಅಪ್ಲಿಕೇಷನ್ ಹೊಂದಿದ್ದು, ಓಲಾ ಮತ್ತು ಉಬರ್‌ನ ಅಗ್ರಿಗೇಟರ್ ಅಪ್ಲಿಕೇಷನ್ ಬದಲಾಗಿ ಓಪನ್ ನೆಟ್‌ವರ್ಕ್ ಡಿಜಿಟಲ್ ಅಪ್ಲಿಕೇಶನ್ ಆಗಿದೆ. ಬೆಕ್ ಫೌಂಡೇಷನ್‌ನಿಂದ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದೆ.
ನಮ್ಮ ಯಾತ್ರಿ ಆ್ಯಪ್ ಬಗ್ಗೆ ಮಾಹಿತಿ ಮಧ್ಯವರ್ತಿಗಳಿಲ್ಲ: ಪ್ರಯಾಣಿಕರು ಹಾಗೂ ಚಾಲಕರಿಗಾಗಿ ಸಿದ್ಧಪಡಿಸಿದ ಒಂದು ವೇದಿಕೆ ನಮ್ಮ ಯಾತ್ರಿ ಆ್ಯಪ್. ಇದರಲ್ಲಿ ಯಾವುದೇ ರೀತಿಯ ಕಮಿಷನ್ ವ್ಯವಹಾರ ಇರುವುದಿಲ್ಲ. ಮಧ್ಯವರ್ತಿಗಳು ಇಲ್ಲದ ಕಾರಣ ನೇರವಾಗಿ ಪ್ರಯಾಣಿಕರು ಚಾಲಕರಿಗೆ ಪ್ರಯಾಣ ದರ ನೀಡುತ್ತಾರೆ. ಪ್ರಯಾಣಿಕರು ಹಾಗೂ ಚಾಲಕರನ್ನು ಒಂದೇ ವೇದಿಕೆಗೆ ತರುವುದು ಇದರ ಮುಖ್ಯ ಉದ್ದೇಶ. ಪ್ರಸ್ತುತ ಪ್ರಾಯೋಗಿಕ ಸಂಚಾರ ನಡೆಯುತ್ತಿದ್ದು, ನವೆಂಬರ್ 1 ರಿಂದ ಅಧಿಕೃತವಾಗಿ ಚಾಲನೆ ಮಾಡಲಾಗುವುದು ಎಂದು ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಡಿ ರುದ್ರಮೂರ್ತಿ ಹೇಳಿದ್ದಾರೆ.
ನಮ್ಮ ಯಾತ್ರಿ ಆ್ಯಪ್ ಬಗ್ಗೆ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಡಿ ರುದ್ರಮೂರ್ತಿ ಮಾತನಾಡಿದರು 10 ಸಾವಿರ ಪ್ರಯಾಣಿಕರು, 10 ಸಾವಿರ ಚಾಲಕರಿಂದ ಬಳಕೆ: ಓಲಾ, ಉಬರ್ ಆ್ಯಪ್‌ಗಳಲ್ಲಿ ಆಟೋ ಬುಕ್ ಮಾಡುವುದರಿಂದ ಹೆಚ್ಚು ದರ ಪಾವತಿಸಬೇಕು ಎಂಬ ಕಾರಣಕ್ಕೆೆ ಈಗಾಗಲೇ 10 ಸಾವಿರ ಪ್ರಯಾಣಿಕರು ಹಾಗೂ 10 ಸಾವಿರ ಚಾಲಕರು ನಮ್ಮ ಯಾತ್ರಿ ತಂತ್ರಾಂಶ ಬಳಸಲು ಪ್ರಾರಂಭಿಸಿದ್ದಾರೆ. ಅಗ್ರಿಗೇಟರ್‌ಗಳು ಪ್ರಯಾಣಿಕರಿಂದ ಹೆಚ್ಚು ದರ ವಸೂಲಿ ಮಾಡಿ ಚಾಲಕರಿಗೆ ಅತಿ ಕಡಿಮೆ ನೀಡುತ್ತಿದ್ದವು. ಇದರಿಂದಾಗಿ ಆಟೋ ಚಾಲಕರು ಈಗ ನಮ್ಮ ಯಾತ್ರಿ ಆ್ಯಪ್ ಕಡೆ ಮುಖ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
10 ರೂಪಾಯಿ ಪಿಕ್ ಅಪ್ ಶುಲ್ಕ ವಸೂಲಿ: ನಮ್ಮ ಯಾತ್ರಿ ದರಗಳು ಸರ್ಕಾರ ನಿಗದಿಪಡಿಸಿದ ದರಗಳಷ್ಟೇ ಇರುತ್ತವೆ. ಕನಿಷ್ಠ ದರ (2 ಕಿ.ಮೀಗೆ) 30 ರೂಪಾಯಿ ಹಾಗೂ ನಂತರದಲ್ಲಿ ಪ್ರತಿ ಕಿಲೋಮೀಟರ್‌ಗೆ 15 ರೂಪಾಯಿ ನಿಗದಿಪಡಿಸಲಾಗುತ್ತದೆ. ಇದರ ಜತೆಗೆ 10 ರೂಪಾಯಿ ಪಿಕ್‌ಅಪ್ ಶುಲ್ಕ ಪಡೆಯಲಾಗುತ್ತದೆ. ಉಳಿದಂತೆ ಯಾವುದೇ ಹಿಡನ್ ದರಗಳು ಇದರಲ್ಲಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚಾಲಕ ಸ್ನೇಹಿ ಆ್ಯಪ್: ನಮ್ಮ ಯಾತ್ರಿಯಲ್ಲಿ ಖಾತೆ ತೆರೆಯುವುದು ಸುಲಭ. ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಇದ್ದರೆ ಸಾಕು. ಇನ್ನು ಉಬರ್, ಓಲಾ, ವ್ಯಾಲೆಟ್ ವ್ಯವಸ್ಥೆ ಇದರಲ್ಲಿಲ್ಲ. ಪ್ರಯಾಣದ ಬಳಿಕ ಚಾಲಕರಿಗೆ ಯುಪಿಐ ಐಡಿ ಅಥವಾ ಕ್ಯಾಶ್ ಮೂಲಕ ಹಣ ಪಾವತಿಸಬೇಕು. ಮಧ್ಯವರ್ತಿಗಳಿಲ್ಲದ ಕಾರಣ ನಮ್ಮ ಯಾತ್ರಿ ಆ್ಯಪ್‌ನಲ್ಲಿ ಪ್ರಯಾಣ ದರ ನೇರವಾಗಿ ಚಾಲಕರಿಗೆ ದೊರೆಯುತ್ತಿದೆ. ಇದರಿಂದ ಕಡಿಮೆ ಮೊತ್ತ ಎಂಬ ಸಮಸ್ಯೆಯೂ ಇರುವುದಿಲ್ಲ. ಆಯಾ ಪ್ರಯಾಣದ ಹಣ ಆ ಕ್ಷಣವೇ ಚಾಲಕರಿಗೆ ದೊರೆಯುತ್ತದೆ. ಇದೊಂದು ಓಪನ್ ನೆಟ್‌ವರ್ಕ್ ಸೇವೆಯಾಗಿದ್ದು, ಎಲ್ಲರಿಗೂ, ಎಲ್ಲ ಸಂದರ್ಭದಲ್ಲೂ ದೊರೆಯಲಿದೆ ಎಂದಿದ್ದಾರೆ.
ಬುಕ್ಕಿಂಗ್ ಸುಲಭ:ನಮ್ಮ ಯಾತ್ರಿಯಲ್ಲಿ ಪ್ರಯಾಣಿಕರಿಗೆ ಅತ್ಯಂತ ಸುಲಭವಾಗಿ ಆಟೋ ದೊರೆಯಲಿದ್ದು, ನಮ್ಮ ಸ್ಥಳ ಹಾಗೂ ಹೋಗಬೇಕಾದ ಸ್ಥಳದ ಮಾಹಿತಿ ನೀಡಿದರೆ ಒಂದೇ ಬಾರಿಗೆ ಆ ಭಾಗದಲ್ಲಿ 3 ರಿಂದ 4 ಆಟೋಗಳು ದೊರೆಯುತ್ತವೆ. ಆಯಾ ಆಟೋ ಚಾಲಕರು ಅವರವರ ದರಗಳನ್ನು ಬಿಡ್ ಮಾಡುತ್ತಾರೆ. ಇದರಿಂದ ಪ್ರಯಾಣಿಕರಿಗೆ ಅವರಿಗೆ ಬೇಕಾದ ದರ ನಮೂದಿಸಿರುವ ಆಟೋ ಆಯ್ಕೆ ಮಾಡುವ ಅವಕಾಶವೂ ದೊರೆಯುತ್ತದೆ ಎಂದು ಹೇಳಿದ್ದಾರೆ.
ಮೆಟ್ರೋ ನಿಲ್ದಾಣಗಳಲ್ಲಿ ಸೇವೆ: ಈ ಹಿಂದಿನ ಯೋಜನೆಯಂತೆ ಮೆಟ್ರೋ ನಿಲ್ದಾಣಗಳಲ್ಲಿ ಆಟೋಗಳಿಗೆ ಕಾಯುವವರಿಗಾಗಿ ಆಟೋ ಸೇವೆ ನೀಡುವ ಉದ್ದೇಶವನ್ನು ನಮ್ಮ ಯಾತ್ರಿ ಆ್ಯಪ್ ಹೊಂದಿದ್ದು, ಮೆಟ್ರೊ ನಿಲ್ದಾಣದಿಂದ 2 ಕಿ. ಮೀ ದೂರದ ವ್ಯಾಪ್ತಿಯಲ್ಲಿ 40 ರೂಪಾಯಿಯಂತೆ ಸೇವೆ ನೀಡಲು ನಿರ್ಧರಿಸಲಾಗಿದೆ. ಯಾವುದೇ ಮೆಟ್ರೋ ನಿಲ್ದಾಣಗಳಲ್ಲಿಯೂ ನಮ್ಮ ಯಾತ್ರಿ ಸೇವೆ ದೊರೆಯಲಿದೆ ಎಂದು ರುದ್ರಮೂರ್ತಿ ಮಾಹಿತಿ ನೀಡಿದ್ದಾರೆ.
ಓದಿ:ಓಲಾ, ಉಬರ್ ಆಟೋ ರಿಕ್ಷಾ ಸೇವೆ: ಬಲವಂತದ ಕ್ರಮ ಬೇಡ, ಪ್ರಯಾಣ ಶುಲ್ಕ ನಿಗದಿಗೆ ಹೈಕೋರ್ಟ್ ಸೂಚನೆ