ಬೆಂಗಳೂರು: ಕನ್ನಡ ರಾಜ್ಯೋತ್ಸವ ಹಿನ್ನೆಲೆ ಪ್ರಯಾಣಿಕರಿಗೆ 'ನಮ್ಮ ಮೆಟ್ರೋ' ಸಿಹಿ ಸುದ್ದಿ ನೀಡಿದೆ. ನಾಳೆಯಿಂದ ಮೊಬೈಲ್ನಲ್ಲೇ ಮೆಟ್ರೋ ಟಿಕೆಟ್ ಖರೀದಿ ಮಾಡಬಹುದು. ಕ್ಯೂಆರ್ ಕೋಡ್ ಮೂಲಕ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಮಂಗಳವಾರದಿಂದ ಪ್ರಯಾಣ ಬೆಳಸಬಹುದಾಗಿದೆ. ಪ್ರಯಾಣಿಕರ ಸಮಯ ಉಳಿತಾಯ, ಚಿಲ್ಲರೆ ಸಮಸ್ಯೆ ದೂರಮಾಡುವ ಉದ್ದೇಶದಿಂದ ಈ ಹೊಸ ಯೋಜನೆಯನ್ನು ಪ್ರಾರಂಭಿಸಿದೆ.
ಕನ್ನಡ ರಾಜ್ಯೋತ್ಸವ ದಿನದಿಂದ ಸ್ಮಾರ್ಟ್ ಫೋನ್ ಹೊಂದಿರುವ ಮೆಟ್ರೋ ಪ್ರಯಾಣಿಕರು ಟೋಕನ್ ಖರೀದಿಸಲು ಟಿಕೆಟ್ ಕೌಂಟರ್‌ಗಳ ಮುಂದೆ ನಿಲ್ಲುವ ಅಗತ್ಯ ವಿರುವುದಿಲ್ಲ. ಕ್ಯೂಆರ್ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಖರೀದಿಸಬಹುದು. ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಲು ಪ್ರಯಾಣಿಕರು ಆಂಡ್ರಾಯ್ಡ್ ಓಎಸ್ ಹೊಂದಿರುವ ಮೊಬೈಲ್ನಿಂದ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ತಮ್ಮನ್ನು ನೋಂದಾಯಿಸಿಕೊಳ್ಳಬಹುದು.
ಅಧಿಕೃತ ಬಿಎಂಆರ್‌ಸಿಎಲ್ ನ WhatsApp ಚಾಟ್‌ಬಾಟ್ ಮೊಬೈಲ್ ನಂ 810 555 66 77 ಅನ್ನು ಮೊಬೈಲ್ ನಲ್ಲಿ ಸೇವ್ ಮಾಡಿ, "ಹಾಯ್" ಎಂಬ ಸಂದೇಶವನ್ನು ಕಳುಹಿಸುವ ಮೂಲಕ QR ಟಿಕೆಟ್‌ಗಳನ್ನು ಖರೀದಿಸಲು ಚಾಟ್‌ಬಾಟ್ ನೊಂದಿಗೆ ಸಂವಹನವನ್ನು ಪ್ರಾರಂಭಿಸಬಹುದು. ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್ ಬಳಕೆದಾರರಿಗೆ ಚಾಟ್‌ಬಾಟ್ (Chatbot) ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿ ಲಭ್ಯವಿದೆ.
ಬಿಎಂಆರ್‌ಸಿಎಲ್ ಗ್ಲೋಬಲ್ ಟ್ರಾನ್ಸಿಟ್ ಸ್ಪೇಸ್‌ನಲ್ಲಿ ವಾಟ್ಸ್ ಆ್ಯಪ್ನಲ್ಲಿ ಎಂಡ್-ಟು-ಎಂಡ್ ಟಿಕೆಟಿಂಗ್ ವ್ಯವಸ್ಥೆಯನ್ನು ಪರಿಚಯಿಸಿದ ಮೊದಲ ಮೆಟ್ರೋ ಇದಾಗಿದೆ.
ವಾಟ್ಸ್ಆ್ಯಪ್ ಚಾಟ್ಬಾಟ್ನಲ್ಲಿ ಲಭ್ಯವಿರುವ ವೈಶಿಷ್ಟ್ಯಗಳು:
- ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಸಂವಾದ ಮಾಡುವ ಆಯ್ಕೆಗಳು.
- QR ಟಿಕೆಟ್‌ಗಳ ಖರೀದಿ.
- ಮೆಟ್ರೋ ಸ್ಮಾರ್ಟ್ ಕಾರ್ಡ್‌ಗಳ ರೀಚಾರ್ಜ್.
- ಪ್ರಸ್ತುತ ಪ್ರಯಾಣಿಕರ ಸ್ಥಳದ ಹತ್ತಿರವಿರುವ ಮೆಟ್ರೋ ನಿಲ್ದಾಣದ ಮಾಹಿತಿ.
- ವಿವಿಧ ನಿಲ್ದಾಣಗಳಲ್ಲಿ ರೈಲು ಹೊರಡುವ ಸಮಯದ ಮಾಹಿತಿ.
- ಯಾವುದೇ ಎರಡು ನಿಲ್ದಾಣಗಳ ನಡುವಿನ ದರದ ಮಾಹಿತಿ.