ಬೆಂಗಳೂರು :ಕೇಂದ್ರ ಲೋಕಸೇವಾ ಆಯೋಗದ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಮೇ 28ರಂದು ನಡೆಯಲಿದ್ದು, ಅಭ್ಯರ್ಥಿಗಳ ಅನುಕೂಲಕ್ಕಾಗಿ ಅಂದು ನಮ್ಮ ಮೆಟ್ರೊ ರೈಲುಗಳ ಸಂಚಾರ ಬೆಳಗ್ಗೆ 6ರಿಂದಲೇ ಆರಂಭವಾಗಲಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಮಾನ್ಯವಾಗಿ ಭಾನುವಾರ ಬೆಳಗ್ಗೆ 7 ಗಂಟೆಯಿಂದ ನಮ್ಮ ಮೆಟ್ರೋ ಸಂಚಾರ ಆರಂಭವಾಗುತ್ತಿತ್ತು. ಆದರೆ, ದೂರದ ಊರುಗಳಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ಗಂಟೆ ಮುಂಚಿತವಾಗಿ ರೈಲುಗಳ ಸಂಚಾರ ಆರಂಭಿಸಲಾಗುತ್ತಿದೆ ಎಂದು ಹೇಳಿದೆ.
ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ, ಬೈಯಪ್ಪನಹಳ್ಳಿ, ಕೆ ಆರ್ ಪುರ ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳಿಂದ ಮೊದಲ ರೈಲುಗಳು ಬೆಳಿಗ್ಗೆ 6 ಗಂಟೆಗೆ ಹೊರಡಲಿವೆ ಎಂದು ನಮ್ಮ ಮೆಟ್ರೋ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಯುಪಿಎಸ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಮಹಿಳೆಯರೇ ಟಾಪರ್: 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ (ಮೇ 23-2023)ರಂದು ಪ್ರಕಟಗೊಂಡಿತ್ತು. ಈ ಬಾರಿ ಇಶಿತಾ ಕಿಶೋರ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಗರಿಮಾ ಲೋಹಿಯಾ ಹಾಗೂ ಉಮಾ ಹರಿತಿ ಎನ್ ಕ್ರಮವಾಗಿ ದ್ವಿತೀಯ ಮತ್ತು ಮೂರನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ನಾಗರಿಕ ಸೇವಾ ಪರೀಕ್ಷೆಯಲ್ಲಿ 933 ಅಭ್ಯರ್ಥಿಗಳು ಈ ಬಾರಿ ಅರ್ಹತೆ ಪಡೆದಿದ್ದರು. ನಾಗರಿಕ ಸೇವೆಗಳ ಪರೀಕ್ಷೆಯನ್ನು ಒಟ್ಟು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ - ಪರೀಕ್ಷೆಯನ್ನು ಪೂರ್ವಭಾವಿ, ಮುಖ್ಯ ಮತ್ತು ಸಂದರ್ಶನದ ರೂಪದಲ್ಲಿ ನಡೆಸಲಾಗುತ್ತದೆ. ನಂತರ ಭಾರತೀಯ ಆಡಳಿತ ಸೇವೆ (IAS), ಭಾರತೀಯ ವಿದೇಶಾಂಗ ಸೇವೆ (IFS) ಮತ್ತು ಭಾರತೀಯ ಪೊಲೀಸ್ ಸೇವೆ (IPS) ಸೇರಿ ಇತರ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಕಳೆದ ವರ್ಷದಲ್ಲಿ ಶ್ರುತಿ ಶರ್ಮಾ ಅವರು ಯುಪಿಎಸ್‌ಸಿ ಸಿಎಸ್ಸಿ 2021 ಪರೀಕ್ಷೆಯಲ್ಲಿ ಅಖಿಲ ಭಾರತ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ್ದರು. ಈ ಬಾರಿ ಎಲ್ಲಾ ಮೊದಲ ಮೂರು ರ್ಯಾಂಕ್ಗಳನ್ನು ಮಹಿಳೆಯರೇ ಪಡೆದುಕೊಂಡಿರುವ ಗಮನಾರ್ಹವಾಗಿದೆ.
ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ : ವೈಯಕ್ತಿಕ ಸಂದರ್ಶನದ ನಂತರ ಪ್ರಕಟಿಸಲಾದ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ upsc.gov.in. UPSC CSE ಯಲ್ಲಿ ಪರಿಶೀಲನೆ ಮಾಡಬಹುದು ಎಂದು ಇಲಾಖೆ ತಿಳಿಸಿತ್ತು. ಜೂನ್ 5, 2022 ರಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. ಜೂನ್ 22 ರಂದು ಫಲಿತಾಂಶ ಬಿಡುಗಡೆ ಮಾಡಲಾಗಿತ್ತು. ಮುಖ್ಯ ಪರೀಕ್ಷೆಯನ್ನು ಸೆಪ್ಟೆಂಬರ್ 16 ರಿಂದ 25 ರವರೆಗೆ ನಡೆಸಲಾಗಿತ್ತು. ಡಿಸೆಂಬರ್ 6 ರಂದು ಫಲಿತಾಂಶವನ್ನು ಘೋಷಿಸಲಾಗಿತ್ತು. ಮೇ 18 ರಂದು ಸಂದರ್ಶನಗಳು ಮುಕ್ತಾಯಗೊಂಡಿದ್ದವು.
ಪ್ರಕಟಿತ ಫಲಿತಾಂಶದಲ್ಲಿ 345 ಸಾಮಾನ್ಯ ವರ್ಗ 99 ಆರ್ಥಿಕವಾಗಿ ಹಿಂದುಳಿದ ಇಡಬ್ಲ್ಯೂಎಸ್, 263 ಒಬಿಸಿ, 154 ಎಸ್ಸಿ ಮತ್ತು 72 ಎಸ್ಟಿ ಅಭ್ಯರ್ಥಿಗಳು ಈ ಬಾರಿ ಪಾಸ್ ಆಗಿದ್ದಾರೆ ಎಂದು ಕೇಂದ್ರ ಲೋಕಸೇವಾ ಆಯೋಗ ಮಾಹಿತಿ ನೀಡಿದೆ. ಕಳೆದ ಬಾರಿಯೂ ಮೊದಲ ಮೂರು ಸ್ಥಾನಗಳಲ್ಲಿ ಮಹಿಳೆಯರೇ ಕಾಣಿಸಿಕೊಂಡಿದ್ದರು. ಈ ಬಾರಿಯೂ ಅದು ಪುನರಾವರ್ತನೆ ಆಗಿದೆ.
ಇದನ್ನೂ ಓದಿ:ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ..ಇಶಿತಾ ಕಿಶೋರ್ ಈ ವರ್ಷದ ಟಾಪರ್