ಬೆಂಗಳೂರು: ಬೈಯಪ್ಪನಹಳ್ಳಿ- ಕೆ ಆರ್ ಪುರ ಮೆಟ್ರೋ ಜೊತೆಗೆ ಕೆಂಗೇರಿ - ಚಲ್ಲಘಟ್ಟ ನಡುವಿನ ಮೆಟ್ರೋ ಮಾರ್ಗವನ್ನೂ ಏಕಕಾಲಕ್ಕೆ ಪ್ರಯಾಣಿಕರಿಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ. ಸೆಪ್ಟೆಂಬರ್ ಎರಡನೇ ವಾರದೊಳಗೆ ಜನರು ಈ ಮಾರ್ಗಗಳಲ್ಲಿ ಸಂಚರಿಸಲು ಸಾಧ್ಯವಾಗುವ ನಿರೀಕ್ಷೆಯಿದೆ. ಮುಂದುವರೆದು ನಮ್ಮ ಮೆಟ್ರೋ ಸಂಸ್ಥೆ ಹೈ ರೆಸಲ್ಯೂಷನ್ ಕ್ಯಾಮರಾಗಳನ್ನು ಅಳವಡಿಸಿ ಪ್ರಯಾಣಿಕರ ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಮುಂದಾಗಿದೆ.
ಬೈಯಪ್ಪನಹಳ್ಳಿ - ಕೆ.ಆರ್.ಪುರ ಮೆಟ್ರೋ ನಿಲ್ದಾಣಗಳ ಮಧ್ಯದ 2.1ಕಿ.ಮೀ ಹಾಗೂ ಕೆಂಗೇರಿ - ಚಲ್ಲಘಟ್ಟ ನಡುವಿನ 1.9 ಕಿ.ಮೀ ಮೆಟ್ರೋ ಕಾಮಗಾರಿ ಬಾಕಿ ಇದೆ. ಇವೆರಡೂ ಪೂರ್ಣಗೊಂಡಲ್ಲಿ ನೇರಳೆ ಮಾರ್ಗದ 43.5ಕಿ.ಮೀ ಲೈನ್ ಪೂರ್ಣವಾದಂತಾಗಲಿದೆ. ಹೀಗಾಗಿ ಎರಡೂ ಮಾರ್ಗವನ್ನು ಬೇರೆ ಬೇರೆ ಸಂದರ್ಭದಲ್ಲಿ ಜನತೆಗೆ ಮುಕ್ತಗೊಳಿಸುವ ಬದಲು ಒಂದೇ ಸಮಯಕ್ಕೆ ಪ್ರಯಾಣದ ಅವಕಾಶ ಮಾಡಿಕೊಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ ಮೇಲ್ಸೇತುವೆ ತಡೆಗೋಡೆಗೆ ಬೈಕ್ ಡಿಕ್ಕಿ.. ಹಿಂಬದಿ ಸವಾರ ಸಾವು
ಸಿಗ್ನಲಿಂಗ್, ಟ್ರ್ಯಾಕಿಂಗ್ ಸೇರಿ ಇತರೆ ಕಾಮಗಾರಿಗಳು ಇವೆರಡೂ ಮಾರ್ಗದಲ್ಲಿ ಬಾಕಿ ಇವೆ. ಪೂರ್ಣ ಸ್ಟ್ರೆಚ್‌ನ್ನು ಏಕಕಾಲಕ್ಕೆ ಪ್ರಯಾಣಕ್ಕೆ ಮುಕ್ತಗೊಳಿಸಬೇಕಾದ ಕಾರಣ ಸಂಪೂರ್ಣ ಮಾರ್ಗದ ಸಿಗ್ನಲಿಂಗ್ ವ್ಯವಸ್ಥೆಯನ್ನು ಮರು ರೂಪಿಸಿಕೊಳ್ಳಬೇಕಿದೆ. ಈ ಕಾರಣಕ್ಕೆ ಸೋಮವಾರದಿಂದ ರಾತ್ರಿ ಸಿಗ್ನಲಿಂಗ್ ವರ್ಕ್‌ಗಳು ನಡೆಯಲಿವೆ. ಬಳಿಕ ಪ್ರಯೋಗಿಕ ಚಾಲನೆಯೂ ನಡೆಯಲಿದೆ. ಬೆಳಗಿನ ಜಾವ 7ಗಂಟೆಯೊಳಗೆ ಈ ಕೆಲಸ ಮುಗಿಸಲು ಸಾಧ್ಯವಿಲ್ಲದ ಕಾರಣ ಒಂದು ತಿಂಗಳ ಕಾಲ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ.