ಕರ್ನಾಟಕ

karnataka

ETV Bharat / state

'ನಮ್ಮ ಮೆಟ್ರೋ' ಯೋಜನೆ ಸ್ಥಿತಿಗತಿ ಹೇಗಿದೆ? ಯಾವ್ಯಾವ ಕಾಮಗಾರಿ ಎಷ್ಟು ಪೂರ್ಣ? ಸಂಪೂರ್ಣ ವರದಿ.. - ನಮ್ಮ ಮೆಟ್ರೋದ ಮುಂದಿನ ಯೋಜನೆಗಳ ಮಾಹಿತಿ

ನಮ್ಮ ಮೆಟ್ರೋ ಹಂತ-2ರ ಯೋಜನೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಇತರ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳುವ ಹಂತಗಳಲ್ಲಿದೆ. ಯಲಚೇನಹಳ್ಳಿಯಿಂದ ರೇಷ್ಮೆ ಸಂಸ್ಥೆವರೆಗಿನ ಹಂತ-2ರ ದಕ್ಷಿಣ ವಿಸ್ತರಣಾ ಮೆಟ್ರೋ ಮಾರ್ಗವನ್ನು ಕಳೆದ ಜನವರಿ 14ರಂದು ಸಾರ್ವಜನಿಕರ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ.

ನಮ್ಮ ಮೆಟ್ರೋ ಯೋಜನೆ
ನಮ್ಮ ಮೆಟ್ರೋ ಯೋಜನೆ

By

Published : Aug 29, 2021, 3:20 PM IST

ಬೆಂಗಳೂರು:ಈಗಿನ ವೇಗದ ಯುಗಕ್ಕೆ ಅನುಗುಣವಾಗಿ ಜನರು ಎಲ್ಲ ವ್ಯವಸ್ಥೆಯೂ ವೇಗವಾಗಿ ಬರಬೇಕೆಂದು ಆಶಿಸುವುದು ಸಹಜ. ಅದಕ್ಕೆ ತಕ್ಕಂತೆ ಬೃಹತ್ ಆಗಿ ಬೆಳೆದು ನಿಂತಿರುವ ಬೆಂಗಳೂರು, ದೇಶ-ವಿದೇಶದಲ್ಲೂ ಸದ್ದು ಮಾಡುತ್ತಿರುವ ನಗರ.‌ ಅಂದಹಾಗೇ, ಇಂತಹ ಐಟಿ-ಬಿಟಿ ಸಿಟಿಗೆ ನಮ್ಮ ಮೆಟ್ರೋ ಖ್ಯಾತಿ ತಂದುಕೊಟ್ಟಿದ್ದು ಸುಳ್ಳಲ್ಲ. ಜನಸಂದಣಿ ಇರುವ ಮಾರ್ಗಗಳಲ್ಲಿ ಮೆಟ್ರೋ ಪಿಲ್ಲರ್ ಹಾಕಲಾಗುತ್ತಿದ್ದು, ಇದೀಗ ಅದು ಮುಂದುವರೆದಿದೆ.‌

ಹಂತ-1ರ ಯೋಜನೆಯಲ್ಲಿ ನೇರಳೆ ಮತ್ತು ಹಸಿರು ಮಾರ್ಗಗಳು ನಾಲ್ಕು ದಿಕ್ಕುಗಳಲ್ಲಿ ಒಟ್ಟು 34.6 ಕಿ.ಮೀ. ಉದ್ದದ ವಿಸ್ತರಣೆಗಳನ್ನು ಹೊಂದಿತ್ತು.‌ ಇದೀಗ ಅದರ ಮುಂದುವರೆದ ಭಾಗವಾಗಿ ಹಂತ-2ರ, 75 ಕಿ.ಮೀ. ಮಾರ್ಗವು 61 ನಿಲ್ದಾಣಗಳನ್ನು ಹೊಂದಿದೆ. ಇತ್ತ ಎರಡು ಹೊಸ ಮಾರ್ಗಗಳಾದ ಗೊಟ್ಟಿಗೆರೆಯಿಂದ ನಾಗವಾರದವರೆಗೆ 21.25 ಕಿ.ಮೀ. ಮತ್ತು ಆರ್.ವಿ.ರಸ್ತೆ ಬೊಮ್ಮಸಂದ್ರದವರೆಗೆ 19.15 ಕಿ.ಮೀ. ಉದ್ದದ ಮಾರ್ಗವನ್ನು ಒಳಗೊಂಡಿದೆ.

ಈ ಯೋಜನೆಯನ್ನು 30,695 ಕೋಟಿ ರೂ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಹಂತ-2ಕ್ಕೆ, ಫ್ರೆಂಚ್ ಅಭಿವೃದ್ಧಿ ಸಂಸ್ಥೆ, ಯುರೋಪಿಯನ್ ಇನ್ಸೆಸ್ಟ್‌ಮೆಂಟ್ ಬ್ಯಾಂಕ್ ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ಗಳಿಂದ ಕ್ರಮವಾಗಿ 1440 ಕೋಟಿ ರೂ, 3973 ಕೋಟಿ ರೂ ಹಾಗೂ 2330 ಕೋಟಿ ರೂ ಗಳನ್ನು ಸಾಲವಾಗಿ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು, ಹಂತ-2ರ ಯೋಜನೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣಗೊಂಡಿದ್ದು, ಇತರ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳುವ ಹಂತಗಳಲ್ಲಿದೆ. ಯಲಚೇನಹಳ್ಳಿಯಿಂದ ರೇಷ್ಮೆ ಸಂಸ್ಥೆವರೆಗಿನ ಹಂತ-2ರ ದಕ್ಷಿಣ ವಿಸ್ತರಣಾ ಮೆಟ್ರೋ ಮಾರ್ಗವನ್ನು ಕಳೆದ ಜನವರಿ 14ರಂದು ಸಾರ್ವಜನಿಕರ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ.

ಇದೀಗ ಹಂತ-2ರ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣಗಳವರೆಗೆ 6 ನಿಲ್ದಾಣಗಳನ್ನು ಒಳಗೊಂಡ 7.5 ಕಿಮೀ ಉದ್ದದ ಪಶ್ಚಿಮ ವಿಸ್ತರಣಾ ಮೆಟ್ರೋ ಮಾರ್ಗವನ್ನು ಇಂದು ಉದ್ಘಾಟಿಸಲಾಗಿದೆ. ಹಂತ -2 ರ ಮೆಟ್ರೋ ಯೋಜನೆಯನ್ನು ಹಂತ ಹಂತವಾಗಿ ಪೂರ್ಣಗೊಳಿಸಿ ಮಾರ್ಚ್ 2025 ಸಂಪೂರ್ಣವಾಗಿ ಕಾರ್ಯಾಚರಣೆಗೆ ತರುವ ವಿಶ್ವಾಸದಲ್ಲಿದೆ.

ಇದನ್ನೂ ಓದಿ : ಕೆಂಗೇರಿವರೆಗಿನ ‘ನಮ್ಮ ಮೆಟ್ರೋ’ ರೈಲು ಸೇವೆಗೆ ಸಿಎಂ ಬೊಮ್ಮಾಯಿ ಹಸಿರು ನಿಶಾನೆ

ಹಂತ- 2ಎ ಸಿವಿಲ್ ಕಾಮಗಾರಿಗೆ ಗುತ್ತಿಗೆ ನೀಡಿದ BMRCL:

ಹಂತ-2ಎ ಮತ್ತು 2ಬಿ ಹೊರವರ್ತುಲ ರಸ್ತೆ- ಏರ್ ಪೋರ್ಟ್ ಮಾರ್ಗ 58 .19 ಕಿ.ಮೀ ಉದ್ದದ ಎರಡು ಕಾರಿಡಾರ್ ಗಳನ್ನು ಒಳಗೊಂಡಿದೆ. ‌ಇದಕ್ಕಾಗಿ ಕೇಂದ್ರ ಸರ್ಕಾರವೂ ಕಳೆದ ಜೂನ್ 7 ರಂದು ಅನುಮೋದನೆ ಕೊಟ್ಟಿದೆ. ಹಂತ -2ಎ ಮತ್ತು 2ಬಿ ಗಳ ಅಂದಾಜು ವೆಚ್ಚ ರೂ 14,788.1 ಕೋಟಿ ಯಷ್ಟಿದೆ. ಹಂತ 2ಎ ಗೆ ಸಿವಿಲ್ ಕಾಮಗಾರಿಗೆ ಶೇ.100 ರಷ್ಟು ಗುತ್ತಿಗೆಯನ್ನು ನೀಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಈ ವಿಭಾಗದಲ್ಲಿ ಪೂರ್ಣಗೊಂಡಿದೆ.

ಹಂತ -2 ಬಿ ಸಿವಿಲ್ ಟೆಂಡರ್‌ಗಳು ಮುಂದುವರಿದ ಹಂತದಲ್ಲಿದ್ದು, ಈ ವರ್ಷದ ಅಕ್ಟೋಬರ್​​ರೊಳಗೆ ನೀಡಲಾಗುತ್ತಿದೆ. ಭೂ ಸ್ವಾಧೀನ ಮತ್ತು ಯುಟಿಲಿಟಿ ಶಿಫ್ಟಿಂಗ್ ಕ್ರಮವಾಗಿ 87% ಮತ್ತು 50% ಪೂರ್ಣಗೊಂಡಿದೆ. ಹಂತ -2A & 2B ಗಾಗಿ, ಜಪಾನ್ ಅಂತರಾಷ್ಟ್ರೀಯ ಸಹಕಾರ ಬ್ಯಾಂಕ್ ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಗಳು ಕ್ರಮವಾಗಿ ರೂ. 2364 ಕೋಟಿ ಮತ್ತು ರೂ, 3781.63 ಕೋಟಿ ಸಾಲ ಒದಗಿಸಿವೆ.

ಹಂತ-2 ಎ : ಕೇಂದ್ರ ರೇಷ್ಮೆ ಮಂಡಳಿಯಿಂದ ಕೆ.ಆರ್.ಪುರಂ (ಹೊರವರ್ತುಲ ರಸ್ತೆ) ಉದ್ದ 19.75 ಕಿ.ಮೀ ಇದ್ದು, 13 ನಿಲ್ದಾಣಗಳನ್ನು ಹೊಂದಿದೆ.

ಹಂತ-2ಬಿ : (ವಿಮಾನ ನಿಲ್ದಾಣದ ಮಾರ್ಗ)ಕೆ.ಆರ್‌. ಪುರಂನಿಂದ ಹೆಬ್ಬಾಳ ಜಂಕ್ಷನ್ ಮೂಲಕ ವಿಮಾನ ನಿಲ್ದಾಣಕ್ಕೆ ಒಟ್ಟು ಉದ್ದ 38.44 ಕಿ.ಮೀ ಇದ್ದು, 17 ಎತ್ತರಿಸಿದ ನಿಲ್ದಾಣಗಳನ್ನು ಒಳಗೊಂಡಿದೆ.

ನಮ್ಮ ಮೆಟ್ರೋ ಮೂರನೇ ಹಂತ ಪಿಪಿಪಿ ಮಾದರಿಯಲ್ಲಿ ನಿರ್ಮಾಣ :

ನಮ್ಮ ಮೆಟ್ರೋ ರೈಲು ಯೋಜನೆಯ ಹಂತ-3 ಮೆಟ್ರೋ ಯೋಜನೆಯನ್ನು ತೆಗೆದುಕೊಳ್ಳಲು ಪ್ರಸ್ತಾಪಿಸಲಾಗಿದೆ. ಇದಕ್ಕಾಗಿ ORR ಪಶ್ಚಿಮ ಮಾರ್ಗ ಕೆಂಪಾಪುರದಿಂದ ಜೆ.ಪಿ ನಗರ 4 ನೇ ಹಂತಕ್ಕೆ 32.16 ಕಿಮೀ ಹಾಗೂ ಮಾಗಡಿ ರಸ್ತೆ ಮಾರ್ಗವು ಹೊಸಹಳ್ಳಿ ಮೆಟ್ರೋ ನಿಲ್ದಾಣದಿಂದ ಕಡಬಗೆರೆ 12.82 ಕಿ.ಮೀನ ಈ ಮಾರ್ಗಗಳನ್ನು PPP ಮಾದರಿಯ ಮೂಲಕ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಪ್ರಸ್ತುತ ಡಿಪಿಆರ್ ತಯಾರಿ ಪ್ರಗತಿಯಲ್ಲಿದೆ.

ABOUT THE AUTHOR

...view details