ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿನವರೆಗೆ 'ನಮ್ಮ ಮೆಟ್ರೋ' ಮಾರ್ಗ ವಿಸ್ತರಿಸುವ ಕಾರ್ಯಸಾಧ್ಯತಾ ವರದಿ ಅಧ್ಯಯನಕ್ಕೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಇದಕ್ಕೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕೇಂದ್ರದ ನಿಲುವನ್ನು ಖಂಡಿಸಿರುವ ಸಂಘಟನೆಗಳು ಹೋರಾಟದ ಎಚ್ಚರಿಕೆಯನ್ನೂ ನೀಡಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಕನ್ನಡಿಗರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನ ಹೊರವಲಯಗಳಿಗೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ಮೆಟ್ರೋ ಮಾರ್ಗ ಸಂಪರ್ಕ ಕಲ್ಪಿಸುವುದನ್ನು ಕಡೆಗಣಿಸಿ ತಮಿಳುನಾಡಿನ ಹೊಸೂರುವರೆಗೆ ಮೆಟ್ರೋ ವಿಸ್ತರಿಸಿದರೆ ಸರ್ಕಾರದ ವಿರುದ್ಧ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರ ಮೆಟ್ರೋ ವಿಸ್ತರಣೆಯ ಅಧ್ಯಯನಕ್ಕೆ ನೀಡಿರುವ ಅನುಮತಿ ವಾಪಸ್ ಪಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಒಪ್ಪಿಗೆ ನೀಡದಂತೆ ಕರವೇ ಆಗ್ರಹ: ಈ ಯೋಜನೆಗೆ ಸಂಬಂಧಿಸಿದಂತೆ ಕನ್ನಡಿಗರ ವಿರೋಧ ನಿರ್ಲಕ್ಷಿಸಿ ಕಾರ್ಯಸಾಧ್ಯತಾ ವರದಿ ಅಧ್ಯಯನಕ್ಕೆ ಕೇಂದ್ರ ಒಪ್ಪಿಗೆ ನೀಡಿರುವುದು ಸರಿಯಲ್ಲ. ಹಿಂದೆಯೇ ನಾವೆಲ್ಲರೂ ಇದನ್ನು ಖಂಡಿಸಿದ್ದೇವೆ. ಬೆಂಗಳೂರಿನಿಂದ ಹೊಸೂರಿಗೆ ಮೆಟ್ರೋ ಸಂಪರ್ಕ ಕಲ್ಪಿಸಿದರೆ ಕನ್ನಡಿಗರಿಗೆ ತೊಂದರೆಯಾಗಲಿದೆ. ತಮಿಳಿಗರ ಸಂಖ್ಯೆ ಹೆಚ್ಚಾಗುತ್ತದೆ. ಮೆಟ್ರೋ ಸಂಪರ್ಕ ಕಲ್ಪಿಸಿದರೆ ಇನ್ನೂ ಸುಲಭವಾಗಿ ಬೆಂಗಳೂರಿಗೆ ಬರುತ್ತಾರೆ. ತಮ್ಮ ಬದುಕು ಕಟ್ಟಿಕೊಳ್ಳುವುದು ಮಾತ್ರವಲ್ಲ, ಕನ್ನಡಿಗರ ಉದ್ಯೋಗ ಕಸಿದುಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ಇದಕ್ಕೆ ಒಪ್ಪಿಗೆ ನೀಡಬಾರದು ಎಂದು ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಆಗ್ರಹಿಸಿದ್ದಾರೆ.