ಕರ್ನಾಟಕ

karnataka

ETV Bharat / state

ಬೆಂಗಳೂರಿನ 243 ವಾರ್ಡ್‍ಗಳ ಜನತೆಗೆ ಗುಡ್​ ನ್ಯೂಸ್​.. ಶೀಘ್ರದಲ್ಲೇ ‘ನಮ್ಮ ಕ್ಲಿನಿಕ್’ ಸೇವೆ - ಬೆಂಗಳೂರಿನ 243 ವಾರ್ಡ್‍ಗಳಲ್ಲಿ ನಮ್ಮ ಕ್ಲೀನಿಕ್ ಸೇವೆ ಪ್ರಾರಂಭ

ನಮ್ಮ ಕ್ಲಿನಿಕ್​​ ಬಡಜನರಿಗೆ ತಮ್ಮ ವಾರ್ಡ್‍ನಲ್ಲಿಯೇ ಇದರ ಮೂಲಕ ಆರೋಗ್ಯ ಸೌಲಭ್ಯ ನೀಡುವ ಉತ್ತಮ ಯೋಜನೆ ಇದಾಗಿದೆ ಎಂದು ಸಿಎಂ ಹೇಳಿದ್ದಾರೆ.

ಸಿಎಂ
ಸಿಎಂ

By

Published : Jul 17, 2022, 5:17 PM IST

Updated : Jul 17, 2022, 5:23 PM IST

ಬೆಂಗಳೂರು: ಮುಂದಿನ ತಿಂಗಳಿನಿಂದ ಬೆಂಗಳೂರಿನ 243 ವಾರ್ಡ್‍ಗಳಲ್ಲಿ ‘ನಮ್ಮ ಕ್ಲಿನಿಕ್’ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಭಾನುವಾರ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಸವಧಾಮ ಉದ್ಯಾನವನ, ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ, ಬಾಲಗಂಗಾಧರನಾಥ ಮಹಾಸ್ವಾಮೀಜಿ ಉದ್ಯಾನವನ ಉದ್ಘಾಟನೆ, ಭೋವಿ ಪಾಳ್ಯದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮನೆಗಳ ಹಕ್ಕುಪತ್ರ ವಿತರಣೆ ಹಾಗೂ ನವ-ನಗರೋತ್ಥಾನ ಯೋಜನೆಯಡಿ ಮಹಾಲಕ್ಷ್ಮೀಲೇಔಟ್ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊರವರ್ತುಲ ರಸ್ತೆಯಿಂದ ಪಶ್ಚಿಮ ಕಾರ್ಡ್ ರಸ್ತೆಗೆ ಮೇಲುಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನಾ ಕಾರ್ಯಕ್ರಮ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಪಣ:ಬಡಜನರಿಗೆ ತಮ್ಮ ವಾರ್ಡ್‍ನಲ್ಲಿಯೇ ನಮ್ಮ ಕ್ಲಿನಿಕ್ ಮೂಲಕ ಆರೋಗ್ಯ ಸೌಲಭ್ಯ ನೀಡುವ ಉತ್ತಮ ಯೋಜನೆಯಾಗಿದೆ. ಬೆಂಗಳೂರಿನಲ್ಲಿ ಆರೋಗ್ಯ, ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದೆ. ಅಮೃತ ಯೋಜನೆಯಲ್ಲಿ 75 ಕೆರೆಗಳ ಅಭಿವೃದ್ಧಿ, 20 ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಪಣ ತೊಡಲಾಗಿದೆ. ತುಮಕೂರು ರಸ್ತೆ ಮತ್ತು ಮೈಸೂರು ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ 11 ಕಿ.ಮೀ. ರಸ್ತೆ ಕಾಮಗಾರಿಯಿಂದ ಹಲವಾರು ಜಂಕ್ಷನ್‍ಗಳಲ್ಲಿ ವಾಹನ ದಟ್ಟಣೆ ಶೇ.40 ರಷ್ಟು ಕಡಿಮೆಯಾಗುತ್ತದೆ. ಇದಕ್ಕಾಗಿ 55 ಕೋಟಿ ರೂ. ನೀಡಲಾಗಿದ್ದು, ಜನಸಾಮಾನ್ಯರ ಉಪಯೋಗಕ್ಕೆ ಈ ಯೋಜನೆ ಆದಷ್ಟು ಬೇಗ ಸಮರ್ಪಣೆಯಾಗಲಿದೆ ಎಂದು ತಿಳಿಸಿದರು.

ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆ

ಇದನ್ನೂ ಓದಿ:ಶಿಶು ಮರಣ ಪ್ರಮಾಣ ಒಂದಂಕಿಗೆ ಇಳಿಸುವುದು ನಮ್ಮ ಗುರಿ: ಬಸವರಾಜ ಬೊಮ್ಮಾಯಿ

ಬೆಂಗಳೂರು ನಗರ ಬೃಹತ್ತಾಗಿ ಬೆಳೆಯುತ್ತಿದೆ. ನೂರಮೂವತ್ತು ಲಕ್ಷ ಜನಸಂಖ್ಯೆ ಇದ್ದು, ಅಷ್ಟೇ ಸಂಖ್ಯೆಯ ವಾಹನಗಳಿವೆ. ದೊಡ್ಡ ಪ್ರಮಾಣದಲ್ಲಿ ಐಟಿಬಿಟಿ, ಔದ್ಯೋಗೀಕರಣ ಅಭಿವೃದ್ಧಿ ಕಂಡಿದೆ. ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿ ಬೆಳೆಯುತ್ತಿದೆ. ನಗರದಲ್ಲಿ ಜನರಿಗೆ ಸೌಲಭ್ಯಗಳನ್ನು ನೀಡುವುದು ಬಹಳ ಮುಖ್ಯ. ಉತ್ತಮ ಮೂಲಭೂತಸೌಕರ್ಯಗಳು ಪ್ರತಿಯೊಬ್ಬ ನಾಗರಿಕರಿಗೆ ದೊರಕಬೇಕಿರುವುದು ಬಹಳ ಮುಖ್ಯ. ನಾನು ಮುಖ್ಯಮಂತ್ರಿಯಾದ ತಕ್ಷಣ, ಬೆಂಗಳೂರಿನ ಅಭಿವೃದ್ಧಿಗಾಗಿ ಅಮೃತ ನಗರೋತ್ಥಾನ ಯೋಜನೆ ಯಡಿ 6000 ಕೋಟಿ ರೂ. ಗಳನ್ನು ಒದಗಿಸಿದೆ. ಮಳೆ ಪರಿಸ್ಥಿತಿಯನ್ನು ನಿಭಾಯಿಸಲು 400 ಕಿ.ಮೀ.ಗಳ ರಾಜಕಾಲುವೆಗಳ ಅಭಿವೃದ್ಧಿಗಾಗಿ 1600 ಕೋಟಿ ರೂ.ಗಳನ್ನು ಒದಗಿಸಿದೆ. ಬೆಂಗಳೂರಿನ ಮೂಲಭೂತಸೌಕರ್ಯಗಳಿಗೆ ಹಣದ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ.

ಬೆಂಗಳೂರಿನ 243 ವಾರ್ಡ್‍ಗಳಲ್ಲಿನ ಜನತೆಗೆ ಗುಡ್​ ನ್ಯೂಸ್​

ಗುಣಮಟ್ಟದ ಕಾಮಗಾರಿಗೆ ಸೂಚನೆ: ದೂರದೃಷ್ಟಿಯ ಹಲವಾರು ಕಾರ್ಯಕ್ರಮಗಳಾದ ಮೆಟ್ರೋ ವಿಸ್ತರಣೆ ಕಾರ್ಯವನ್ನು 2025ರ ಬದಲಾಗಿ 2024ರಲ್ಲೇ ಪೂರ್ಣಗೊಳಿಸಲಾಗುವುದು. ಬೆಂಗಳೂರು ನಗರದ ಹೊರ ವಲಯವನ್ನು ಸಂಪರ್ಕಿಸುವ 3ನೇ ಫೇಸ್ ಮೆಟ್ರೋ ಕಾರ್ಯವನ್ನು ಮುಂದಿನ ವರ್ಷ ಪ್ರಾರಂಭಿಸಲಾಗುವುದು. 15,000 ಕೋಟಿ ರೂ. ವೆಚ್ಚದಲ್ಲಿ ಸಬ್‍ಅರ್ಬನ್ ರೈಲ್ವೆ ಯೋಜನೆಗೆ ಚಾಲನೆ ನೀಡಲಾಗಿದೆ. ಪೆರಿಫೆರಲ್ ರಿಂಗ್ ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರದಿಂದ ಆದ್ಯತೆ ನೀಡಲಾಗಿದ್ದು, ಗುಣಮಟ್ಟದ ಕಾಮಗಾರಿಯನ್ನು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮಾನವೀಯ ಜನಪ್ರತಿನಿಧಿಗಳು: ಈ ಪ್ರದೇಶದ ಜನನಾಯಕರು ಕ್ರಿಯಾಶೀಲ ಸಚಿವರಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿಯೂ ಜನರ ಸಂಕಷ್ಟಗಳಿಗೆ ಸ್ಪಂದಿಸಿದ ಮಾನವೀಯ ನಾಯಕರಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ಅನುಕೂಲ ಕಲ್ಪಿಸಿದ್ದಾರೆ. ಬೆಂಗಳೂರಿನ ಬಿಬಿಎಂಪಿಯಲ್ಲಿ ಪ್ರತಿ ವಾರ್ಡ್‍ನಲ್ಲಿ ಜನ ಪ್ರತಿನಿಧಿಗಳಿರಬೇಕು. ಆಗ ಕೆಲಸಗಳಾಗುತ್ತವೆ. ಬಿಬಿಎಂಪಿ ಚುನಾವಣೆಗೆ ಸಿದ್ಧತೆಗಳನ್ನು ಮಾಡಲಾಗುತ್ತದೆ. ಅಭಿವೃದ್ಧಿ ಪ್ರಕ್ರಿಯೆ ನಿರಂತರವಾಗಿ ನಡೆಯಲು ಜನನಾಯಕರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

Last Updated : Jul 17, 2022, 5:23 PM IST

ABOUT THE AUTHOR

...view details