ಕರ್ನಾಟಕ

karnataka

ETV Bharat / state

"ನಮ್ಮ ಕ್ಲಿನಿಕ್"ನಲ್ಲಿ 12 ಆರೋಗ್ಯ ಸೇವೆಗಳ ಪ್ಯಾಕೇಜ್ ಲಭ್ಯ; ರಾಜ್ಯಾದ್ಯಂತ ಒಟ್ಟು 438 "ನಮ್ಮ ಕ್ಲಿನಿಕ್‌" ಓಪನ್​ - ನಮ್ಮ ಕ್ಲಿನಿಕ್​

15 ನೇ ಹಣಕಾಸು ಆಯೋಗದ ಅನುದಾನದಡಿ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ‘ನಮ್ಮ ಕ್ಲಿನಿಕ್​’ಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

namma clinic
ನಿನ್ನೆ ಸಿ ಎಂ ಬೊಮ್ಮಾಯಿಯವರಿಂದ ಉದ್ಘಾಟನೆಗೊಂಡ ನಮ್ಮ ಕ್ಲಿನಿಕ್​

By

Published : Feb 9, 2023, 11:19 AM IST

ಬೆಂಗಳೂರು: ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ಪ್ರತಿ 50,000 ಜನಸಂಖ್ಯೆಗೆ ಒಂದರಂತೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ 15 ನೇ ಹಣಕಾಸು ಆಯೋಗದ ಅನುದಾನದಡಿ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ‘ನಮ್ಮ ಕ್ಲಿನಿಕ್​’ಗಳನ್ನು ತೆರೆಯಲಾಗಿದ್ದು ಕುರಿತು ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ಡಾಕ್ಟರ್​ ಸೌಮ್ಯ ‘ನಮ್ಮ ಕ್ಲಿನಿಕ್‌’ಗಳಲ್ಲಿ ತಲಾ ಒಬ್ಬರು ವೈದ್ಯಾಧಿಕಾರಿ, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಡಿ-ದರ್ಜೆ ನೌಕರರು ಇರಲಿದ್ದಾರೆ. ಒಟ್ಟು 12 ಆರೋಗ್ಯ ಸೇವೆಗಳ ಪ್ಯಾಕೇಜ್ ಲಭ್ಯವಿದ್ದು, ಬಡವರು, ಕೂಲಿ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ಇದು ಸಂಜೀವಿನಿಯಾಗಲಿದೆ. ನಿನ್ನೆ 243 ಬಿಬಿಎಂಪಿ ವಾರ್ಡ್‌ಗಳ ಪೈಕಿ 108 ವಾರ್ಡ್‌ಗಳಲ್ಲಿ ‘ನಮ್ಮ ಕ್ಲಿನಿಕ್‌’ಗಳನ್ನು ಸಿ.ಎಂ ಬೊಮ್ಮಾಯಿ ಉದ್ಘಾಟಿಸಿದ್ದಾರೆ. ಮುಂದಿನ ಹಂತಗಳಲ್ಲಿ ಉಳಿದ 135 ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗುತ್ತಿದೆ. ವಿವಿಧ ಜಿಲ್ಲೆಗಳ ನಗರ ಪ್ರದೇಶದಲ್ಲಿ 195 ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲಾಗುತ್ತಿದೆ. ರಾಜ್ಯಾದ್ಯಂತ ಒಟ್ಟು 438 ನಮ್ಮ ಕ್ಲಿನಿಕ್‌ಗಳು ಶೀಘ್ರದಲ್ಲಿ ಬಾಗಿಲು ತೆರೆಯಲಿವೆ ಎಂದು ತಿಳಿಸಿದ್ದಾರೆ.

ಬೆಳಗಿನಿಂದ ಸಂಜೆಯವರೆಗೆ ಕಾರ್ಯನಿರ್ವಣೆ:ಇನ್ನುಈ ಕ್ಲಿನಿಕ್‌ಗಳು ಬೆಳಗ್ಗೆ 9 ರಿಂದ ಸಂಜೆ 4.30 ರವರೆಗೆ ಪ್ರತಿ ಸೋಮವಾರದಿಂದ ಶನಿವಾರದವರೆಗೆ ಕಾರ್ಯನಿರ್ವಹಿಸಲಿವೆ. 1,000 ಚದರ ಅಡಿ ವಿಸ್ತೀರ್ಣದಲ್ಲಿ ನಿರೀಕ್ಷಣಾ ಸ್ಥಳ, ಹೊರ ರೋಗಿಗಳ ತಪಾಸಣೆ ಕೊಠಡಿ, ಚುಚ್ಚು ಮದ್ದು ನೀಡುವ ಕೊಠಡಿ, ಪ್ರಯೋಗಶಾಲೆ, ಯೋಗ, ಔಷಧಿ ದಾಸ್ತಾನು ಮತ್ತು ವಿತರಣಾ ಕೊಠಡಿ, ಅಡಳಿತ ಕಚೇರಿ, ಹೀಗೆ ಪ್ರತ್ಯೇಕ ಕೊಠಡಿಗಳಿವೆ. ಆಸ್ಪತ್ರೆ ಸಿಬ್ಬಂದಿ, ಮಹಿಳಾ ಮತ್ತು ಪುರುಷ ರೋಗಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡಾಕ್ಟರ್ ಹೇಳಿದ್ದಾರೆ.

ಬಡ ದುರ್ಬಲ ವರ್ಗದ ಜನರಿಗೆ ಸಮಗ್ರ ಚಿಕತ್ಸೆ: ‘ನಮ್ಮ ಕ್ಲಿನಿಕ್‌’ಗಳು ನಗರ ಪ್ರದೇಶದ ಬಡ, ದುರ್ಬಲ ವರ್ಗದ ಜನರಿಗೆ ಗುಣಮಟ್ಟದ ಮತ್ತು ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒಳಗೊಂಡಿದೆ. ಉಚಿತ ರೆಫರಲ್ ಸೇವೆಗಳನ್ನು ಒದಗಿಸುವ ಮುಖಾಂತರ ದ್ವಿತೀಯ ಮತ್ತು ತೃತೀಯ ಹಂತದ ಆಸ್ಪತ್ರೆಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಆರೋಗ್ಯ ಸೇವೆಗಳನ್ನು ಪಡೆಯಲು ತಗುಲುವ ವೆಚ್ಚ ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದು ಸಾರ್ವಜನಿಕರಾದ ಮಹಾಲಕ್ಷ್ಮಿ ಲೇಔಟ್ ನಿವಾಸಿ ರೂಪೇಶ್ ತಿಳಿಸಿದ್ದಾರೆ.

"ನಮ್ಮ ಕ್ಲಿನಿಕ್" ಕ್ರಾಂತಿಕಾರಿ ಹೆಜ್ಜೆ: ‘ನಮ್ಮ ಕ್ಲಿನಿಕ್’ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಈ ಮೊದಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೇವಲ ಸಮಾಲೋಚನೆ ನೀಡುವ ವೈದ್ಯರಿದ್ದರು. ಈಗ ಪ್ರಾಥಮಿಕ ಚಿಕಿತ್ಸೆ ಪಡೆದು ಗುಣಮುಖರಾಗುವ ಅವಕಾಶ ದೊರೆಯುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿನ್ನೆ ಉದ್ಘಾಟನೆಯ ವೇಳೆ ಅಭಿಪ್ರಾಯಪಟ್ಟರು.

ಆರೋಗ್ಯ ಸೇವೆ ವಂಚಿತ ಜನಕ್ಕೆ ಸಂಜೀವಿನಿ:ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಸೇವೆಗಳಿಂದ ವಂಚಿತರಾದ ಜನಕ್ಕೆ ಈ ವ್ಯವಸ್ಥೆ ಪ್ರಾರಂಭಿಸಲಾಗಿದೆ. ಖಾಸಗಿ ವಲಯದ ದವಾಖಾನೆಗಳನ್ನು ಸರ್ಕಾರವೇ ಕೈಗೆತ್ತಿಕೊಂಡು ಪ್ರಥಮ ಹಂತದಲ್ಲಿ 438 ಹಾಗೂ 108 ಬಿಬಿಎಂಪಿ ವ್ಯಾಪ್ತಿಯಲ್ಲಿ ನಮ್ಮ ಕ್ಲಿನಿಕ್ ಸ್ಥಾಪಿಸಲಾಗಿದೆ. ಸಾಮಾನ್ಯವಾಗಿರುವ ನೆಗಡಿ, ಕೆಮ್ಮಿನ ಜೊತೆಗೆ ಬಿ.ಪಿ, ಮಧುಮೇಹ ಮುಂತಾದ ಕಾಯಿಲೆಗಳ ತಪಾಸಣೆ ಹಾಗೂ ಪರೀಕ್ಷೆಯೂ ಆಗುತ್ತದೆ. ಔಷಧಿಯನ್ನೂ ಉಚಿತವಾಗಿ ನೀಡಲಾಗುತ್ತದೆ. ಟೆಲಿಮೆಡಿಸಿನ್ ವ್ಯವಸ್ಥೆಯೂ ಇದ್ದು, ಹೆಚ್ಚಿನ ಸಮಸ್ಯೆ ಇದ್ದರೆ, ಪರಿಣಿತರ ಜೊತೆಗೆ ಟೆಲಿ ಸಂವಾದ ಮಾಡಿ ಅಗತ್ಯ ಉಪಚಾರಗಳನ್ನು ನೀಡಲಾಗುವುದು. ಇದು ಸಾಮಾನ್ಯ ನಾಗರಿಕರ ಆರೋಗ್ಯ ಸೇವೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಕಳೆದ ಬಾರಿ ಬಜೆಟ್​ನಲ್ಲಿ ಹೇಳಿದ್ದು, ಈಗ ಸ್ಥಾಪನೆಯಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದರು.

ಇದನ್ನೂ ಓದಿ:ಶಿವಮೊಗ್ಗ ಏರ್​ಪೋರ್ಟ್​ಗೆ ಯಡಿಯೂರಪ್ಪ ಹೆಸರಿಡಲು ಕೇಂದ್ರಕ್ಕೆ ಶಿಫಾರಸು: ಸಿಎಂ ಬೊಮ್ಮಾಯಿ

ABOUT THE AUTHOR

...view details