ಬೆಂಗಳೂರು:ರಾಜ್ಯ ಸರ್ಕಾರವು ನಗರ ಪ್ರದೇಶದ ಬಡ ಜನರ ಆರೋಗ್ಯ ಸಂಜೀವಿನಿಯಾಗಿ ಕಾರ್ಯನಿರ್ವಹಿಸುವ 438 ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸುತ್ತಿದೆ. ಮೊದಲ ಹಂತವಾಗಿ ಡಿಸೆಂಬರ್ 14 ರಂದು ಬೆಳಗ್ಗೆ 11 ಗಂಟೆಗೆ 114 'ನಮ್ಮ ಕ್ಲಿನಿಕ್'ಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಏಕಕಾಲಕ್ಕೆ ಲೋಕಾರ್ಪಣೆಯಾಗಲಿದೆ. ಇಲ್ಲಿ ಸಂಪೂರ್ಣ ಉಚಿತವಾಗಿ ಸಮಾಲೋಚನೆ, ಚಿಕಿತ್ಸೆ ಹಾಗು ಔಷಧ ಲಭ್ಯವಿರಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಆರೋಗ್ಯ ಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ 'ನಮ್ಮ ಕ್ಲಿನಿಕ್'ಗಳನ್ನು ಉದ್ಘಾಟಿಸಲಿದ್ದಾರೆ. ಆರಂಭದಲ್ಲಿ 114 ಕ್ಲಿನಿಕ್‌ಗಳು ಲೋಕಾರ್ಪಣೆಯಾಗಲಿದ್ದು, ಏಕ ಕಾಲಕ್ಕೆ ಇಷ್ಟು ಕ್ಲಿನಿಕ್ ಆರಂಭ ಸಾರ್ವಕಾಲಿಕ ದಾಖಲೆಯಾಗಲಿದೆ ಎಂದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 243 ಕ್ಲಿನಿಕ್‌ಗಳು ಕಾರ್ಯಾಚರಣೆ ಮಾಡಲಿವೆ. ಜನವರಿ ಎರಡನೇ ವಾರದೊಳಗೆ ಇವುಗಳು ಜನ ಸೇವೆಗೆ ಲಭ್ಯವಾಗುವಂತೆ ಕೆಲಸ ನಡೆಯುತ್ತಿವೆ ಎಂದು ಹೇಳಿದರು. ಜನರ ಸೇವೆಗೆ ಲಭ್ಯವಿರುವುದು ಕನಿಷ್ಠ 150 ಕ್ಲಿನಿಕ್‌ಗಳಿಂದ ದುರ್ಬಲ ವರ್ಗದವರಿಗೆ, ಶ್ರಮಕರಿಗೆ, ಕೂಲಿ ಕಾರ್ಮಿಕರಿಗೆ ಸೇರಿದಂತೆ ಹಲವರಿಗೆ ಆರೋಗ್ಯ ಸೇವೆ ಸಿಗಲಿದೆ. 10 ರಿಂದ 20 ಸಾವಿರ ಜನಸಂಖ್ಯೆಗೆ ಒಂದರಂತೆ ನಮ್ಮ ಕ್ಲಿನಿಕ್‌ಗಳು ಆರಂಭವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಒಟ್ಟು 150 ಕೋಟಿ ರೂಪಾಯಿ ಮೊತ್ತದ ಯೋಜನೆ ಇದಾಗಿದ್ದು ಬಹುತೇಕ ಕ್ಲಿನಿಕ್‌ಗಳು ಸರ್ಕಾರಿ ಕಟ್ಟಡಗಳಲ್ಲೇ ಕಾರ್ಯಾರಂಭಿಸಲಿವೆ. ಈಗಾಗಲೇ 300 ವೈದ್ಯರ ನೇಮಕವಾಗಿದೆ. ಕೆಲವೆಡೆ ವೈದ್ಯರ ಕೊರತೆ ಇದೆ. ಅಂತಹ ಕಡೆ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು ಕಡ್ಡಾಯ ಗ್ರಾಮೀಣ ಸೇವೆಯಲ್ಲಿರುವ 80-100 ವೈದ್ಯರನ್ನು ಅಲ್ಲಿಗೆ ನೇಮಿಸಲಾಗಿದೆ. 14 ಪ್ರಯೋಗ ಶಾಲಾ ಪರೀಕ್ಷೆಗಳು ಇಲ್ಲಿ ಲಭ್ಯವಿದ್ದು ಟೆಲಿ ಕನ್ಸಲ್ಟೇಷನ್ ಸರ್ವೀಸಸ್, ಕ್ಷೇಮ ಚಟುವಟಿಕೆಗಳು ಕೂಡ ಉಚಿತವಾಗಿವೆ. ಸೋಮವಾರದಿಂದ ಶನಿವಾರ ತನಕ ಬೆಳಗ್ಗೆ 9 ರಿಂದ ಸಂಜೆ 4.30ರ ತನಕ ಈ ಸೇವೆ ಲಭ್ಯವಿದ್ದು ಭಾನುವಾರ ರಜೆ ಇರಲಿದೆ.