ಕರ್ನಾಟಕ

karnataka

ETV Bharat / state

'ನಮ್ಮ ಕ್ಲಿನಿಕ್' ಕೇಂದ್ರಗಳ ಲೋಕಾರ್ಪಣೆ ಕ್ರಾಂತಿಕಾರಿ ಹೆಜ್ಜೆ: ಸಿಎಂ ಬೊಮ್ಮಾಯಿ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

15-20 ಸಾವಿರ ಜನಸಂಖ್ಯೆಗೆ ಒಂದರಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದು 108 ನಮ್ಮ ಕ್ಲಿನಿಕ್​ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದರು.

CM Basavaraja Bommai
ಸಿಎಂ ಬಸವರಾಜ ಬೊಮ್ಮಾಯಿ

By

Published : Feb 7, 2023, 8:40 PM IST

ಬೆಂಗಳೂರು: ನಮ್ಮ ಕ್ಲಿನಿಕ್ ಕೇಂದ್ರಗಳ ಲೋಕಾರ್ಪಣೆ ಒಂದು ಕ್ರಾಂತಿಕಾರಿ ಹೆಜ್ಜೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಬಣ್ಣಿಸಿದರು. ಮಹಾಲಕ್ಷ್ಮೀ ಲೇಔಟ್​ನ ರಾಣಿ ಅಬ್ಬಕ್ಕದೇವಿ ಆಟದ ಮೈದಾನದಲ್ಲಿಂದು ಪಾಲಿಕೆ ವ್ಯಾಪ್ತಿಯ 108 ನಮ್ಮ ಕ್ಲಿನಿಕ್‍ಗಳ ಲೋಕಾರ್ಪಣೆ ಬಳಿಕ ಅವರು ಮಾತನಾಡಿದರು.

ಬೆಂಗಳೂರು ನಗರದಲ್ಲಿ ಆರೋಗ್ಯ ಸೇವೆ, ಶಿಕ್ಷಣ, ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಜನಸಾಮಾನ್ಯರಿಗೆ ಇತ್ತೀಚೆಗೆ ದುರ್ಲಭವೆನಿಸುತ್ತಿರುವ ವೈದ್ಯಕೀಯ ಸಲಹೆಯ ಕೊರತೆಯನ್ನು ಇಂದು ಉದ್ಘಾಟಿಸಲಾಗಿರುವ ನಮ್ಮ ಕ್ಲಿನಿಕ್ ಕೇಂದ್ರಗಳು ನೀಗಲಿವೆ. ಇಲ್ಲಿ ಆರೋಗ್ಯ ತಪಾಸಣೆ, ಔಷಧಿ ಸೇವೆಗಳು ಲಭ್ಯವಾಗಲಿವೆ. ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯ ನೀಡುವ ಸಲುವಾಗಿ ಸ್ಪಂದನಾಶೀಲವಾಗಿರುವ ನಮ್ಮ ಸರ್ಕಾರ 108 ನಮ್ಮ ಕ್ಲಿನಿಕ್​ಗಳನ್ನು ಆರಂಭಿಸಿದೆ.

ಬರುವ ದಿನಗಳಲ್ಲಿ ನಮ್ಮ ಕ್ಲಿನಿಕ್​ಗಳ ಸಂಖ್ಯೆಗಳನ್ನು ಹೆಚ್ಚಿಸಲಿದ್ದು, ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ ಎಂಬುದು ನಮ್ಮ ಸರ್ಕಾರದ ಸಂಕಲ್ಪವಾಗಿದೆ. ಇಂದು ನೆರವೇರಿಸಿದ್ದು ಶಾಲೆಗಳಿಗೆ, ಆಸ್ಪತ್ರೆಗಳಿಗೆ ಅಡಿಗಲ್ಲು ಹಾಕುವ ಕಾರ್ಯಕ್ರಮಗಳನ್ನಲ್ಲ, ಬದಲಾಗಿ ಅವುಗಳ ಉದ್ಘಾಟನೆಯಾಗಿದೆ. ಒಂದೂವರೆ ವರ್ಷದ ಹಿಂದೆ ನಮ್ಮ ಸರ್ಕಾರ ಕೈಗೊಂಡ ಅಭಿವೃದ್ಧಿ ಯೋಜನೆಗಳು ಜನಸೇವೆಗೆ ಸಿದ್ಧವಾಗಿವೆ. ಇದು ಸರ್ಕಾರದ ಕಠಿಣ ಶ್ರಮದ ಫಲ. ಅಮೃತ ನಗರೋತ್ಥಾನ ಯೋಜನೆಯ ಅನುದಾನವನ್ನು ಸದ್ಬಳಕೆ ಮಾಡಿಕೊಂಡದ್ದರ ಫಲ ಎಂದು ಹೇಳಿದರು.

ಟೆಲಿಮೆಡಿಸಿನ್ ವ್ಯವಸ್ಥೆ:ನಮ್ಮ ಕ್ಲಿನಿಕ್​ಗಳಲ್ಲಿ ಟೆಲಿಮೆಡಿಸಿನ್ ವ್ಯವಸ್ಥೆಯೂ ಇದ್ದು, ಹೆಚ್ಚಿನ ಸಮಸ್ಯೆ ಇದ್ದರೆ, ಪರಿಣಿತರ ಜೊತೆಗೆ ಟೆಲಿಸಂವಾದ ಮಾಡಿ ಅಗತ್ಯ ಉಪಚಾರಗಳನ್ನು ನೀಡಲಾಗುವುದು. ಇದು ಸಾಮಾನ್ಯ ನಾಗರಿಕರ ಆರೋಗ್ಯ ಸೇವೆಯನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ಕಳೆದ ಬಾರಿ ಬಜೆಟ್​ನಲ್ಲಿ ಹೇಳಿದ್ದು, ಈಗ ಸ್ಥಾಪನೆಯಾಗಿದೆ ಎಂದರು.

ಆರೋಗ್ಯ ಇಲಾಖೆಯಲ್ಲಿ ಕಳೆದ ವರ್ಷವೇ ಬಹಳಷ್ಟು ಕಾರ್ಯಕ್ರಮಗಳಾಗಿವೆ. ನಮ್ಮದು ಸೂಕ್ಮಾತಿಸೂಕ್ಮ ಸರ್ಕಾರ. ಡಯಾಲಿಸಿಸ್ ಸೈಕಲ್ ದಿನಕ್ಕೆ 30 ಸಾವಿರ ಇದ್ದುದನ್ನು 60 ಸಾವಿರಕ್ಕೆ ಏರಿಸಲಾಗಿದೆ. ಕೀಮೋಥೆರಪಿಯ ಸೈಕಲ್​ಗಳನ್ನು 30 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಿಸಿ 12 ಹೊಸ ಕೇಂದ್ರಗಳನ್ನು ತೆರೆಯಲಾಗಿದೆ. ಹುಟ್ಟು ಕಿವುಡರಿಗೆ ಸುಮಾರು 500 ಕೋಟಿ ರೂ.ಗಳ ವೆಚ್ಚದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸಲಾಗುತ್ತಿದೆ.

60 ವರ್ಷ ಮೇಲ್ಪಟ್ಟವರ ಕಣ್ಣುಗಳ ತಪಾಸಣೆ ಮಾಡಿ ಕನ್ನಡಕ ನೀಡುವ ಯೋಜನೆ ಅನುಷ್ಠಾನಗೊಳಿಸಿದೆ. ಆ್ಯಸಿಡ್ ದಾಳಿಗೊಳಗಾದವರಿಗೆ ಸಹಾಯಧನವನ್ನು ಮೂರರಿಂದ ಹತ್ತು ಸಾವಿರಕ್ಕೆ ಹೆಚ್ಚಳ, ಮಾನಸಿಕ ರೋಗವಿದ್ದವರಿಗೆ ಇಡೀ ರಾಜ್ಯದಲ್ಲಿ ನಿಮ್ಹಾನ್ಸ್ ಮೂಲಕ ವಿಶೇಷ ಚಿಕಿತ್ಸೆಗೆ ಕ್ರಮ, ನಮ್ಮ ಕ್ಲಿನಿಕ್, ನೂರು ಪಿ.ಹೆಚ್‍ಸಿ ಕೇಂದ್ರಗಳನ್ನು ಸಿಹೆಚ್‍ಸಿ ಕೇಂದ್ರಗಳನ್ನಾಗಿ ಉನ್ನತೀಕರಣ, ಅಂಗಾಂಗ ಕಸಿಗಾಗಿಯೂ ಒತ್ತು ನೀಡಲಾಗಿದೆ. ಮಹಿಳೆಯರಿಗಾಗಿ ಆಯುಷ್ಮತಿ ವಿಶೇಷ ಕ್ಲಿನಿಕ್ ಸ್ಥಾಪಿಸಲಾಗಿದೆ. ಆರೋಗ್ಯದ ಯಾವುದೇ ಕ್ಷೇತ್ರವನ್ನೂ ಬಿಡದೆ ಅಭಿವೃದ್ಧಿಗೊಳಿಸಲಾಗಿದೆ. ಸೂಕ್ಷ್ಮ ವಿಚಾರಗಳಿಗೆ ಕೂಡಲೇ ಸ್ಪಂದಿಸುವ ಕೆಲಸ, ದೀರ್ಘವಾಗಿ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ ಕೆಲಸ ಮಾಡಲಾಗುತ್ತಿದೆ ಎಂದು ಸಿಎಂ ಹೇಳಿದರು.

ಶಿಕ್ಷಣ, ಆರೋಗ್ಯಕ್ಕೆ ಒತ್ತು:ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಉದ್ಘಾಟಿಸಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು. ಬೆಂಗಳೂರಿಗೆ ನಗರೋತ್ಥಾನ ಹಾಗೂ ಅಮೃತ ನಗರೋತ್ಥಾನ ಯೋಜನೆಗಳ ನಂತರ ಎಲ್ಲ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳ ಜೊತೆಗೆ ಶಿಕ್ಷಣ ಮತ್ತು ಆರೋಗ್ಯ, ರಸ್ತೆ ನಿರ್ಮಾಣ, ಚರಂಡಿಗಳ ನಿರ್ಮಾಣವಾಗುತ್ತಿದೆ. ಆದರೆ ಪ್ರಥಮ ಬಾರಿಗೆ ನಮ್ಮ ಸಚಿವರು ಹಾಗೂ ಶಾಸಕರು ಶಿಕ್ಷಣಕ್ಕೆ ಬಹಳ ಒತ್ತು ನೀಡಿದ್ದಾರೆ. ಆರೋಗ್ಯಕ್ಕೂ ಒತ್ತು ನೀಡಿದ್ದಾರೆ. ಖಾಸಗಿ ವಲಯಕ್ಕಿಂತಲೂ ಉತ್ತಮವಾದ ಶಾಲೆಗಳನ್ನು ನಿರ್ಮಿಸಲಾಗಿದೆ. ನಮ್ಮ ಮಕ್ಕಳು ಒಳ್ಳೆಯ ಪರಿಸರದಲ್ಲಿ ಕಲಿಯುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಹಳೆಯ ಶಾಲೆಗಳನ್ನು ಕೆಡವಿ ಆಧುನಿಕವಾಗಿ ಮಾದರಿ ಶಾಲೆಗಳನ್ನು ನಿರ್ಮಿಸುವ ಕೆಲಸವಾಗುತ್ತಿದೆ ಎಂದರು.

15 ಸಾವಿರ ಶಿಕ್ಷಕರ ನೇಮಕ:ಕಳೆದ ವಾರ ಗೋವಿಂದರಾಜನಗರ ಕ್ಷೇತ್ರದಲ್ಲೂ ಶಾಲೆ ಮತ್ತು ಕಾಲೇಜಿನ ಉದ್ಘಾಟನೆ ಮಾಡಿದ್ದೆ. ಇಂದು ಮಹಾಲಕ್ಷ್ಮಿ ಲೇಔಟ್ ನಲ್ಲಿ ಮಾದರಿ ಶಾಲೆಯನ್ನು ಉದ್ಘಾಟನೆ ಮಾಡಲಾಗಿದೆ. ಬಹುತೇಕವಾಗಿ ಖಾಸಗಿ ವಲಯಕ್ಕಿಂತ ಹೆಚ್ಚು ಆಧುನಿಕವಾದ ಪ್ರಯೋಗಾಲಯಗಳನ್ನು ಹೊಂದಿದೆ. ಸುಮಾರು 6 ಸಾವಿರ ಮಕ್ಕಳು ವಿದ್ಯಾಭ್ಯಾಸ ಮಾಡುವ 4 ಶಾಲೆಗಳನ್ನು ಆಧುನೀಕರಣ ಮಾಡಲಾಗಿದೆ. ಈಗಾಗಲೇ 15 ಸಾವಿರ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

ಬರುವ ವರ್ಷದಲ್ಲಿ ಶಿಕ್ಷಕರ ಕೊರತೆ ನೀಗಿಸುವ ಸಲುವಾಗಿ ಇನ್ನೂ 15 ಸಾವಿರ ಶಿಕ್ಷಕರನ್ನು ನೇಮಿಸಲಾಗುವುದು. ಸಚಿವ ಕೆ. ಗೋಪಾಯ್ಯ ತಮ್ಮ ಟ್ರಸ್ಟ್​ನಿಂದ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ನೇಮಿಸಿ, ವೇತನವನ್ನೂ ನೀಡುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳ ಸಹಕಾರವನ್ನೂ ಪಡೆದುಕೊಳ್ಳಬೇಕು. ಸರ್ಕಾರವೂ ಇದಕ್ಕೆ ಸಹಾಯ ಮಾಡುತ್ತದೆ. ಒಂದು ರೀತಿಯಲ್ಲಿ ನಗರದ ಕೊಳಗೇರಿಗಳಲ್ಲಿರುವ, ಶಿಕ್ಷಣದಿಂದ ವಂಚಿತರಾದವರಿಗೆ ಇದರಿಂದ ಒಳ್ಳೆಯ ಅವಕಾಶ ದೊರೆತಿದೆ ಎಂದರು.

ಕನ್ನಡಿಗರ ರಕ್ಷಣೆಗೆ ಸಹಾಯವಾಣಿ:ಟರ್ಕಿ ಭೂಕಂಪದ ವಿಚಾರವಾಗಿಈಗಾಗಲೇ ವಿದೇಶಾಂಗ ಇಲಾಖೆಯವರ ಸಂಪರ್ಕದಲ್ಲಿದ್ದು, ವಿಶೇಷ ಸಹಾಯವಾಣಿ ಸ್ಥಾಪಿಸುತ್ತಿದ್ದಾರೆ. ಅಲ್ಲಿರುವ ಕನ್ನಡಿಗರ ಬಗ್ಗೆ ಸರ್ಕಾರ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದು, ಟರ್ಕಿ ಎಂಬೆಸಿಯಿಂದಲೂ ಪಡೆದುಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ ಸರ್ಕಾರ ಸಹಾಯವಾಣಿ ಸ್ಥಾಪಿಸುತ್ತಿದೆ. ಯಾರು ಅಲ್ಲಿ ನೆಲೆಸಿದ್ದರು ಎಂದು ಮಾಹಿತಿ ನೀಡಿದರೆ ಅವರನ್ನು ಸಂಪರ್ಕಿಸಿ, ಸಹಾಯ, ಹಿಂದಿರುಗಲು ನೆರವು ಒದಗಿಸಲಾಗುವುದು ಎಂದರು.

ಇದನ್ನೂ ಓದಿ:ಟರ್ಕಿ ಭೂಕಂಪದಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆಗೆ ಎಲ್ಲ ಕ್ರಮ ಕೈಗೊಳ್ಳುತೇವೆ: ಸಿಎಂ ಬೊಮ್ಮಾಯಿ

ABOUT THE AUTHOR

...view details