ಬೆಂಗಳೂರು: ನಿನ್ನೆ ನಡೆದ ಬೆಂಗಳೂರು ಶಿಕ್ಷಕರ ವಿಧಾನ ಪರಿಷತ್ ಚುನಾವಣೆ ಸಂದರ್ಭ ಹಲವು ಮತದಾರರ ಹೆಸರು ಮತದಾರ ಪಟ್ಟಿಯಿಂದ ಕಾಣೆಯಾಗಿದ್ದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾದ ಘಟನೆ ನಡೆಯಿತು.
ಒಟ್ಟು 22,000 ಮತದಾರರನ್ನು ಒಳಗೊಂಡಿರುವ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಕ್ಷೇತ್ರಗಳಲ್ಲಿ ಒಟ್ಟು 69 ಬೂತ್ಗಳನ್ನು ತೆರೆಯಲಾಗಿತ್ತು. ಹಲವು ಬೂತ್ಗಳಲ್ಲಿ ಶಿಕ್ಷಕ ಮತದಾರರು ತಮ್ಮ ಹೆಸರು ಡಿಲಿಟ್ ಆಗಿರುವುದಕ್ಕೆ ಆತಂಕ ವ್ಯಕ್ತಪಡಿಸಿದರು. ಎಲ್ಲಾ ವಿಧದ ದಾಖಲಾತಿ ಒದಗಿಸಿದ್ದರೂ ತಮ್ಮ ಹೆಸರನ್ನು ತೆಗೆದುಹಾಕಲಾಗಿದೆ ಅಂದಮೇಲೆ ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇದೆ. ಉದ್ದೇಶಪೂರ್ವಕವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಕಾರ್ಯ ನಡೆದಿದೆ. ದೈಹಿಕ ಶಿಕ್ಷಕರನ್ನು ಗುರಿಯಾಗಿಸಿಕೊಂಡು ಹೆಸರು ಕಿತ್ತು ಹಾಕಲಾಗಿದೆ. ಹಲವು ವರ್ಷಗಳಿಂದ ಮತದಾನ ಮಾಡಿಕೊಂಡು ಬಂದ ನಮಗೆ ಈ ಸಾರಿ ಅವಕಾಶ ಸಿಗದಿರುವುದು ಬೇಸರ ತಂದಿದೆ ಎಂದು ಕೆಲವರು ನೋವು ತೋಡಿಕೊಂಡರು.