ಬೆಂಗಳೂರು:ಸರ್ಕಾರ ಯಾವುದೇ ಇದ್ದರೂ, ದುರ್ಘಟನೆಗಳನ್ನು ತಪ್ಪಿಸಲಾಗದು. ಸರ್ಕಾರ ಏನು ಕ್ರಮ ಕೈಗೊಳ್ಳಬಹುದೊ ಅದೆಲ್ಲವನ್ನೂ ಕೈಗೊಂಡಿದೆ. ಹೇಗಾದರೂ ಸರಿ ರಾಜಕೀಯ ಮಾಡಬೇಕು ಎಂದು ಹೊರಟಿರುವವರು ಶಾಸಕರ ಮನೆಗೆ ದಾಳಿ ಮಾಡಿದ ಸಮಯದಾಯವನ್ನು ಬಿಟ್ಟು ಸರ್ಕಾರವನ್ನು ದಲಿತ ವಿರೋಧಿ ಎಂದು ಬಿಂಬಿಸಲು ಹೊರಟಿರುವುದು ರಾಜಕೀಯ ಲಾಭಕ್ಕೆ ಎಂಬುದು ನಗ್ನ ಸತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದಾರೆ.
ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾಗೂ ಕಾವಲ್ಭೈರ್ಸಂದ್ರ ಗಲಾಟೆಯಲ್ಲಿ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಆದರೂ ದಲಿತ ವಿರೋಧಿ ಎಂದು ಆರೋಪಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರೆ ಕಂಬಾಲಪಲ್ಲಿ ನರಮೇಧ ನೆನಪಿದೆಯೆ? ಅದು ನಡೆದಾಗ ಕಾಂಗ್ರೆಸ್ ಸರ್ಕಾರ ಇತ್ತಲ್ಲವೆ? ಹಾಗಾದರೆ ನೀವೂ ದಲಿತ ವಿರೋಧಿ ಪಕ್ಷದಲ್ಲೇ ಇದ್ದೀರಿ ಎಂದು ಹೇಳಬಹುದೆ? ನನಗೆ ಸಿದ್ದರಾಮಯ್ಯನವರಷ್ಟು ರಾಜಕೀಯ ಜ್ಞಾನವಿಲ್ಲ. ಆದರೂ ನನ್ನ ನೆನಪಿನ ಪ್ರಕಾರ ಕಂಬಾಲಪಲ್ಲಿಯಲ್ಲಿ ದಲಿತರ ಹತ್ಯಾಕಾಂಡ ನಡೆದಾಗ ರಾಜ್ಯದ ಗೃಹ ಸಚಿವರಾಗಿದ್ದವರು ಕಾಂಗ್ರೆಸ್ ಪರಮೋಚ್ಛ ದಲಿತ ನಾಯಕರಾಗಿರುವ ಖರ್ಗೆಯವರು. ಹಾಗಾದರೆ ಅವರೂ ದಲಿತ ವಿರೋಧಿಯೆ.? ಇಂತಹ ಕೀಳು ಮಟ್ಟದ ರಾಜಕಾರಣ ನಿಮಗೆ ಶೋಭೆಯೇ.? ಎಂದು ಕಟೀಲ್ ಪ್ರಶ್ನಿಸಿದ್ದಾರೆ.
ತಮ್ಮ ಪಕ್ಷಕ್ಕೆ ರಾಜಕೀಯ ಲಾಭಕ್ಕಾಗಿ ರೋಹಿತ್ ವೆಮುಲನಂತಹ ಮತಾಂತರಗೊಂಡವನ ಆತ್ಮಹತ್ಯೆಯನ್ನು ಕೊಲೆ ಎಂದು ಅಪ ಪ್ರಚಾರ ಮಾಡುವ ಕಾಂಗ್ರೆಸ್ಸಿಗರು ತಮ್ಮ ದಲಿತ ಶಾಸಕನ ಪರ ಮಾತಾಡದೇ, ಅವರನ್ನೂ ಮಾತಾಡಲು ಬಿಡದೆ ಹೇಡಿತನ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು. ದಲಿತರ ಬಗ್ಗೆ ಸಿದ್ದರಾಮಯ್ಯ ಅವರಿಗೆ ಅಪಾರ ಕಾಳಜಿ ಇದೆ ನಿಜ. ಅಷ್ಟೇ ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಇದೆ. ಬೆಂಗಳೂರು ಘಟನೆಯಲ್ಲಿ ಕಿಡಿಗೇಡಿಗಳ ಕೃತ್ಯ ಖಂಡಿಸುವ ಬದಲು ಅವರು ಬಿಜೆಪಿಯ ಮೇಲೆ ಆರೋಪ ಮಾಡುತ್ತಿದ್ದಾರೆ. ದುರ್ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ, ಅದರಲ್ಲೂ ಲಾಭ ಮಾಡುವ ದುರ್ಬುದ್ಧಿಯಲ್ಲವೆ ಎಂದು ಪ್ರಶ್ನಿಸಿದ್ದಾರೆ.