ಕರ್ನಾಟಕ

karnataka

ETV Bharat / state

ಕರೆಂಟ್ ಬಿಲ್‌ ಕಟ್ಟಬೇಡಿ, ಜನರಿಗೆ ತೊಂದರೆಯಾದರೆ ನಾವು ಜನರ ಪರ ನಿಲ್ಲುತ್ತೇವೆ: ಕಟೀಲ್ ಬೆಂಬಲ - ಈಟಿವಿ ಭಾರತ್​ ಕನ್ನಡ ನ್ಯೂಸ್​

ಚುನಾವಣೆ ಪೂರ್ವದಲ್ಲಿ ಐದು ಉಚಿತ ಭರವಸೆ ಮೂಲಕ ಕಾಂಗ್ರೆಸ್​ ಸರ್ಕಾರ ಬಂದಿದೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

By

Published : May 26, 2023, 3:32 PM IST

Updated : May 26, 2023, 4:27 PM IST

ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್.

ಮಂಗಳೂರು (ದಕ್ಷಿಣ ಕನ್ನಡ) :ಐದು ಉಚಿತಗ್ಯಾರಂಟಿ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ನೀಡಿದ ಭರವಸೆಯನ್ನು ‌ಈಡೇರಿಸಿಲ್ಲ. ಹೀಗಾಗಿ ಜನರು ಕರೆಂಟ್​ ಬಿಲ್ ಕಟ್ಟಬಾರದು ಎಂದು ನಾನು ಕರೆ ಕೊಡುತ್ತೇನೆ.‌ ಬಿಲ್​ ಪಾವತಿ ಕೇಳಲು ಅಧಿಕಾರಿಗಳು ಹೋದಾಗ ಜನ ಆಕ್ರೋಶ ಸಹಜ. ಈ ವೇಳೆ ಜನರಿಗೆ ತೊಂದರೆಯಾದರೆ ನಾವು ಜನರ ಪರವಾಗಿ ನಿಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭರವಸೆ ನೀಡಿದರು.

ಇಂದು ಮಂಗಳೂರಿನಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಐದು ಉಚಿತ ಭರವಸೆ ಮೂಲಕ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಸರ್ಕಾರ ಬಂದು 24 ಗಂಟೆಯಲ್ಲಿ ಗ್ಯಾರಂಟಿ ಕೊಡುತ್ತೇವೆ ಎಂದಿದ್ದರು. ಇವತ್ತು 20 ದಿನ ಕಳೆದರೂ ಯಾವುದೇ ಯೋಜನೆ ಬಗ್ಗೆ ಮಾತುಗಳಿಲ್ಲ. ಆದೇಶ ಮಾಡಿದರೂ ಈವರೆಗೆ ಯಾವಾಗಿಂದ ಜಾರಿಗೆ ಬರುತ್ತದೆ ಎಂದು ಸರಿಯಾಗಿ ಉಲ್ಲೇಖ ಇಲ್ಲ. ಸುಳ್ಳು ಆಶ್ವಾಸನೆ ಕೊಟ್ಟು ಸಿದ್ದರಾಮಯ್ಯ ಸರ್ಕಾರ ಬಂದಿದೆ ಎಂದು ಕಾಂಗ್ರೆಸ್ ವಿರುದ್ದ ನಳೀನ್ ಕುಮಾರ್ ಕಟೀಲ್ ಕಿಡಿಕಾರಿದರು.

ಸಿದ್ದರಾಮಯ್ಯ ತನ್ನನ್ನೂ ಸೇರಿಸಿ ಉಚಿತ ಕರೆಂಟ್ ಅಂತ ಹೇಳಿದ್ದರು. ಮಹಿಳೆಯರಿಗೂ ಎಲ್ಲರಿಗೂ ಹಣ ಬರುತ್ತೆ ಅಂತ ಹೇಳಿದರು. ಯಾವುದೇ ಮಾನದಂಡ ಇಲ್ಲದೇ ಭಾಗ್ಯಗಳು ಸಿಗುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಬಸ್​ನಲ್ಲೂ ಎಲ್ಲಿಗೆ ಬೇಕಾದರೂ ಉಚಿತವಾಗಿ ಮಹಿಳೆಯರು ಹೋಗಬಹುದು ಅಂದಿದ್ದರು. ಆದರೆ, ಇದೀಗ ಇವುಗಳನ್ನ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಮತದಾರರು ಆಶ್ವಾಸನೆ ನಂಬಿ ಮತ ಹಾಕಿ ಆಕ್ರೋಶದಲ್ಲಿ ಇದ್ದಾರೆ. ಕರೆಂಟ್ ಬಿಲ್ ಕಲೆಕ್ಷನ್​ಗೆ ಬಂದ ಸಿಬ್ಬಂದಿ ಮೇಲೆ ಹಲ್ಲೆಗಳಾಗುತ್ತಿವೆ. ಜನ ಸರಿ ಇದ್ದಾರೆ, ಹಾಗಾಗಿ ಬಿಲ್ ಕಟ್ಟಬಾರದು ಎಂದು ನಳೀನ್ ಕುಮಾರ್​ ಕಟೀಲ್​ ಹೇಳಿದರು.

ಕಾಂಗ್ರೆಸ್ ಗೂಂಡಾಗಿರಿ ಹಾಗೂ ದ್ವೇಷದ ರಾಜಕಾರಣ : ಅಶ್ವತ್ಥ ನಾರಾಯಣ್ ಯಾವುದೋ ಸಂದರ್ಭದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣವನ್ನು ರಾಜ್ಯದಲ್ಲಿ ಪ್ರಾರಂಭ ಮಾಡಿದೆ ಎಂದು ಹೇಳಿದ್ದರು. ಅದಕ್ಕೆ ಕ್ಷಮೆ ಕೂಡ ಕೇಳಿದ್ದಾರೆ. ಈಗ ಅವರ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ. ಸಿದ್ದರಾಮಯ್ಯನ ವಿರುದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆ ಇಟ್ಟುಕೊಂಡು ಕೇಸ್ ಮಾಡಿದ್ದಾರೆ.‌ ಬಂಟ್ವಾಳದ ಮಾಣಿಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರ ಬದಲು ಹಲ್ಲೆಗೆ ಒಳಗಾದವರ ಮೇಲೆ ಕೇಸ್ ಹಾಕಿದ್ದಾರೆ.

ಕಾಂಗ್ರೆಸ್ ಗೂಂಡಾಗಿರಿ ಹಾಗೂ ದ್ವೇಷದ ರಾಜಕಾರಣದ ಮೂಲಕ ವಿರೋಧ ಪಕ್ಷವನ್ನು ಮೆಟ್ಟಿ ನಿಲ್ಲಬಹುದು ಅಂದುಕೊಂಡಿದೆ. ಸಿದ್ದರಾಮಯ್ಯರ ತಾತಾ ಮುತ್ತಾತನೂ ಈ ಕೆಲಸ ಮಾಡಿ ಯಶಸ್ವಿಯಾಗಿಲ್ಲ. ಸಂವಿಧಾನಿಕವಾಗಿ ಸರ್ಕಾರ ಕೆಲಸ ಮಾಡಬೇಕು. ಅದನ್ನು ಬಿಟ್ಟು ದ್ವೇಷ ರಾಜಕಾರಣ ಬೇಡ. ಈ ಸರ್ಕಾರ ಹೆಚ್ಚು ದಿನ ಬಾಳಲ್ಲ, ಉಳಿಯೋದಿಲ್ಲ ಎಂದು ನಳೀನ್​ ಕುಮಾರ್​ ಕಟೀಲ್​ ತಿಳಿಸಿದರು.

ಕಾಂಗ್ರೆಸ್ ಪಕ್ಷ ಶೇ 80 ಪರ್ಸೆಂಟ್​ ಸರ್ಕಾರ : ​ ಕಾಂಗ್ರೆಸ್​ ಪಕ್ಷ ಅಧಿಕಾರಿಗಳಿಗೆ ಒತ್ತಡ ಮತ್ತು ಭಯದ ವಾತಾವರಣದ ಮೂಲಕ ನಿಯಂತ್ರಣ ಹೇರುತ್ತಾ ಇದೆ. ಸಿದ್ದರಾಮಯ್ಯ ಸರ್ಕಾರ 20 ಸಾವಿರ ಕೋಟಿ ಟೆಂಡರ್ ವಾಪಾಸ್ ಪಡೆದಿದೆ. ಶೇ 80ರಷ್ಟು ಕಮಿಷನ್​ಗೆ ಡಿಮ್ಯಾಂಡ್ ಇಡಲು ಈ ರೀತಿ ಮಾಡಿದ್ದಾರೆ. ಪರ್ಸೆಂಟೇಜ್​ಗಾಗಿ ಕಾಮಗಾರಿ ಪ್ರಾರಂಭವಾದ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ನಮ್ಮ ಸರ್ಕಾರದ ಯಾವುದೇ ವಿಚಾರ ಬಗ್ಗೆ ಆಗಲಿ ತನಿಖೆ ಮಾಡಿ. ಅದರ ಜೊತೆಗೆ ಲೋಕಾಯುಕ್ತದ ಸಿದ್ದರಾಮಯ್ಯ ಕೇಸ್ ಕೂಡ ತನಿಖೆ ಆಗಲಿ. ನಮ್ಮ‌ ಕಾಲಘಟ್ಟದ ಯಾವುದರ ಬಗ್ಗೆ ಬೇಕಾದರೂ ತನಿಖೆ‌ ಅಗಲಿ. ಆದರೆ 20 ಸಾವಿರ ಕೋಟಿ ಬಗ್ಗೆ ಬಹಿರಂಗ ಪಡಿಸಿ ಎಂದು ಸಿದ್ದರಾಮಯ್ಯ ಅವರಿಗೆ ನಳೀನ್​ ಕುಮಾರ್​ ಕಟೀಲ್​ ಸವಾಲು ಹಾಕಿದರು.

ಆರ್​ಎಸ್​ಎಸ್ ಬ್ಯಾನ್​ ವಿಚಾರ : ಆರ್​ಎಸ್​ಎಸ್ ನಿಷೇಧದ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಆರ್​ಎಸ್​ಎಸ್ ಈ ದೇಶದಲ್ಲಿ ರಾಷ್ಟ್ರ ಭಕ್ತಿ ಕಲಿಸಿದೆ. ಬಜರಂಗದಳ, ಆರ್​ಎಸ್​ಎಸ್ ನಿಷೇಧ ಮಾಡಲು ನಿಮಗೆ ಹಕ್ಕಿಲ್ಲ. ಈ ದೇಶ ನಡೆಸುವ ಪ್ರಧಾನ ಮಂತ್ರಿ ಆರ್​ಎಸ್​ಎಸ್ ಸ್ವಯಂ ಸೇವಕ. ಕೇಂದ್ರದ ಮಂತ್ರಿಗಳು, ನಾವೆಲ್ಲರೂ ಆರ್​ಎಸ್​ಎಸ್ ಸ್ವಯಂ ಸೇವಕರಾಗಿದ್ದೇವೆ. ಎಂದು ನಳೀನ್​ ಕುಮಾರ್​ ಕಟೀಲ್​ ಹೇಳಿದರು. ಜವಾಹರಲಾಲ್​ ನೆಹರೂ, ಇಂದಿರಾ ಗಾಂಧಿ ಎಲ್ಲರೂ ಆರ್​ಎಸ್​ಎಸ್ ನಿಷೇಧಕ್ಕೆ ಕೈ ಹಾಕಿ ಮೈ ಸುಟ್ಟುಕೊಂಡಿದ್ದಾರೆ.

ಈ ಹಿಂದೆ ನರಸಿಂಹ ರಾವ್ ಕಾಂಗ್ರೆಸ್ ಸರ್ಕಾರ ಇದ್ದಾಗ ಇದೆಲ್ಲಾ ಆಗಿದೆ. ನಿಷೇಧದ ಕೆಲಸ ಮಾಡಿದಾಗಲೆಲ್ಲಾ ದೇಶದಲ್ಲಿ ಕಾಂಗ್ರೆಸ್ ಸರ್ಕಾರವೇ ಬಂದಿಲ್ಲ. ಭಜರಂಗದಳ, ಆರ್​ಎಸ್​ಎಸ್ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇರಲ್ಲ. ಸಿದ್ದರಾಮಯ್ಯ ರಾಜಕೀಯ ಮುಗಿಯುತ್ತೆ. ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆಗೆ ತಾಕತ್ ಇದ್ದರೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನ ಬಂಧಿಸಿ. ನಿಮ್ಮ ಮೆರವಣಿಗೆ, ವಿಜಯೋತ್ಸವ, ಸಭೆಗಳಲ್ಲೇ ಪಾಕಿಸ್ತಾನ ಪರ ಘೋಷಣೆ ಬಂದಿದೆ. ಅದು ಬಿಟ್ಟು ರಾಜ್ಯವನ್ನು ವಿಭಜನಾವಾದದ ಮೂಲಕ ಕಟ್ಟೋದು ಬೇಡ. ಪ್ರಿಯಾಂಕ್ ಖರ್ಗೆ ಬಾಯಿಗೆ ಹಿಡಿತ ಇಟ್ಟುಕೊಂಡು, ನಾಲಿಗೆಯಲ್ಲಿ ಸರಿಯಾಗಿ ಮಾತನಾಡಲಿ ಎಂದು ನಳೀನ್​ ಕುಮಾರ್​ ಕಟೀಲ್​ ಆಕ್ರೋಶ ಹೊರಹಾಕಿದರು.

ಇವರೇನು ನಿಷೇಧ ಮಾಡೋದು? ನಾವು ಪಿಎಫ್ಐ ಅನ್ನು ನಿಷೇಧ ಮಾಡಿದ್ದೇವೆ. ಆರ್​ಎಸ್​ಎಸ್ ರಾಷ್ಟ್ರಭಕ್ತಿ ಸಂಕೇತ ಎಂದು ಕಾಂಗ್ರೆಸ್ ನಲ್ಲೇ ಹೇಳಿದ್ದಾರೆ. ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್​ ಅವರೆ ಆರ್​ಎಸ್​ಎಸ್​ ಪ್ರಾರ್ಥನೆ ಹೇಳಿದ್ದಾರೆ. ಆ ಪ್ರಾರ್ಥನೆಯಲ್ಲಿ ಏನಿದೆ ಅಂತ ಪ್ರಿಯಾಂಕ್ ಖರ್ಗೆ ಅವರು ಡಿಕೆಶಿ ಬಳಿ ಕೇಳಲಿ. ರಾಜ್ಯವನ್ನು ದ್ವೇಷ, ವಿಭಜನೆ ಮೂಲಕ ಕಾಂಗ್ರೆಸ್ ಆಡಳಿತ ಮಾಡುತ್ತಿದೆ. ಇವರ ಮಂತ್ರಿ ಮಂಡಲದ ಗಲಾಟೆಯಲ್ಲೇ ಕಾಂಗ್ರೆಸ್ ವಿಭಜನೆ ಆಗುತ್ತೆ. ಇದರ ಭಯದಲ್ಲಿ ಆರ್​ಎಸ್‌ಎಸ್ ಹೆಸರಲ್ಲಿ ಕಾಂಗ್ರೆಸ್ ಗಟ್ಟಿ ಮಾಡುತ್ತಿದ್ದಾರೆ. ಇವರ ಜಗಳ ಹೊರ ಬಾರದಂತೆ ಮಾಡಲು ಇದು ಷಡ್ಯಂತ್ರ ಎಂದರು.

ಇದನ್ನೂ ಓದಿ :ಕರೆಂಟ್ ಬಿಲ್ ಕಟ್ಬೇಡಿ, ಬಸ್ ಟಿಕೆಟ್ ತಗೋಬೇಡಿ: ಜನರಿಗೆ ಆರ್. ಅಶೋಕ್ ಕರೆ

Last Updated : May 26, 2023, 4:27 PM IST

ABOUT THE AUTHOR

...view details