ಬೆಂಗಳೂರು: ಭಾರತದಿಂದ ಓಡಲು ಇಟಲಿಯ ಅಕ್ಕ ದಾರಿ ಹುಡುಕುತ್ತಿದ್ದಾರೆ. ಇದು ಭಾರತ್ ಜೋಡೋ ಅಲ್ಲ. ಇದು ಯಶಸ್ವಿ ಆಗುವುದಿಲ್ಲ. ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ವಿಜಯದಶಮಿ ದಸರ ಹಬ್ಬ ಮುಗಿಸಿ, ವಿಜಯ ಯಾತ್ರೆ ಸಂಘಟಿಸಿದ್ದೇವೆ. ತಾಯಿ ದುಷ್ಟರ ಸಂಹಾರ ಮಾಡಿದಳು. ತಾಯಿ ಪ್ರಾರ್ಥನೆ ಮೂಲಕ ಕಾರ್ಯಕಾರಿಣಿ ಆರಂಭವಾಗಿದೆ. 150 ಸೀಟುಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಕೆಂಪೇಗೌಡರು ಕಟ್ಟಿದ ನಾಡಿದು, ಬೆಂಗಳೂರು ಕಟ್ಟಿದ ವ್ಯಕ್ತಿಯ ಸ್ಮರಣೆ ಮಾಡಿ ಕಾರ್ಯಕ್ರಮ ಆರಂಭಿಸಿದ್ದೇವೆ.
ಕೆಂಪೇಗೌಡರ ಸ್ಮರಣೆ:ಹೊಸಪೇಟೆ ಬಳಿಕ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. 108 ಅಡಿ ಎತ್ತರದ ಕೆಂಪೇಗೌಡರ ಪುತ್ಥಳಿ ಅನಾವರಣ ಮಾಡೋ ಮೂಲಕ ಕೆಂಪೇಗೌಡರ ಸ್ಮರಣೆ ಮಾಡುವ ಕೆಲಸ ಮಾಡಲಾಗಿದೆ. ಕಳೆದ ಮೂರು ವರ್ಷಗಳಿಂದ ನೆರೆ ಹೆಚ್ಚಾಗಿದೆ, ಸಂಕಷ್ಟದಲ್ಲೂ ಯಡಿಯೂರಪ್ಪ ಒಬ್ಬರೇ ಪ್ರವಾಸ ಮಾಡಿದ್ದರು.
ಈಗ ಬೊಮ್ಮಾಯಿ ಅವರು ಉತ್ತಮ ತಂಡದ ಜೊತೆ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸೇರಿ ಉತ್ತಮ ಯೋಜನೆ ನೀಡಿದ್ದಾರೆ. ಬಿಜೆಪಿ ಮುಖಂಡರ ಪ್ರವಾಸಕ್ಕೆ ಜನರಿಂದ ಅತ್ಯುತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಫಲಾನುಭವಿಗಳು ಆನಂದದಿಂದಿದ್ದಾರೆ. ದೇಶ ಮಾತ್ರವಲ್ಲದೇ, ವೀರಶೈವ ಸಮಾಜವನ್ನೂ ಒಡೆಯಲು ಮುಂದಾದ ಪಕ್ಷ ಕಾಂಗ್ರೆಸ್ ಎಂದು ಟೀಕಿಸಿದ ಅವರು, ಭಾರತದಿಂದ ಓಡಲು ಇಟಲಿಯ ಅಕ್ಕ ದಾರಿ ಹುಡುಕುತ್ತಿದ್ದಾರೆ. ಇದು ಭಾರತ್ ಜೋಡೋ ಅಲ್ಲ. ಇದು ಯಶಸ್ವಿ ಆಗುವುದಿಲ್ಲ ಎಂದು ವಿಶ್ವಾಸದಿಂದ ನುಡಿದರು.
ಭ್ರಷ್ಟಾಚಾರವೇ ಕಾಂಗ್ರೆಸ್‍ನ ದೊಡ್ಡ ಕೊಡುಗೆ:ಭಯೋತ್ಪಾದನೆ, ಭ್ರಷ್ಟಾಚಾರವೇ ಕಾಂಗ್ರೆಸ್‍ನ ದೊಡ್ಡ ಕೊಡುಗೆ. 6 ದಶಕಗಳ ಕಾಲ ಆಡಳಿತ ಮಾಡಿದ ಕಾಂಗ್ರೆಸ್ ಸದಾ ಕಾಲ ಹಗರಣಗಳನ್ನೇ ಮಾಡಿತು. ಕಾಂಗ್ರೆಸ್ ಅವಧಿಯಲ್ಲಿ ಎಲ್ಲ ಪ್ರಧಾನಿಗಳ ಅವಧಿಯಲ್ಲಿ ಭ್ರಷ್ಟಾಚಾರ ಆಗಿದೆ. ಲಾಲ್ ಬಹಾದ್ದೂರ್ ಶಾಸ್ತ್ರಿ ಅವರನ್ನ ಹೊರತುಪಡಿಸಿದರೆ, ನೆಹರು, ಇಂದಿರಾ, ರಾಜೀವ್ ಗಾಂಧಿ ಕಾಲದಲ್ಲಿ ಹಗರಣ ಆಗಿದೆ.