ಬೆಂಗಳೂರು: ಜನತೆ ಯಾವುದೇ ಕಾರಣಕ್ಕೂ ಹಸಿವಿನಿಂದ ಬಳಲುವಂತಾಗಬಾರದು ಎಂದು ಉಚಿತ ಪಡಿತರ ವಿತರಿಸುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ನವೆಂಬರ್ ಅಂತ್ಯದವರೆಗೆ ವಿಸ್ತರಿಸಿರುವುದಾಗಿ ಘೋಷಿಸಿರುವ ಪಿಎಂ ನರೇಂದ್ರ ಮೋದಿ ನಡೆಯನ್ನು ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸ್ವಾಗತಿಸಿದ್ದಾರೆ.
ನಳಿನ್ ಕುಮಾರ್‌ಕಟೀಲ್ ಪತ್ರಿಕಾ ಹೇಳಿಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ 80 ಕೋಟಿಗೂ ಅಧಿಕ ಬಡ ಹಾಗೂ ಕೆಳ ವರ್ಗದ ಜನರ ಕಾಳಜಿ ಇದೆ. ಅವರೆಲ್ಲರ ಸುರಕ್ಷತೆಗಾಗಿಯೇ ಈಗಾಗಲೇ ಸುಮಾರು 60 ಸಾವಿರ ಕೋಟಿಗೂ ಅಧಿಕ ಹಣ ವಿನಿಯೋಗಿಸಲಾಗಿದೆ. ಮುಂದಿನ 5 ತಿಂಗಳ ಕಾಲ ಉಚಿತ ಪಡಿತರ ವಿತರಿಸಲು ಈಗ ಹೆಚ್ಚುವರಿಯಾಗಿ 90 ಸಾವಿರ ಕೋಟಿ ರೂ. ತೆಗೆದಿರಿಸಿದ್ದಾರೆ. ಈ ಯೋಜನೆಯಡಿ ಬಡವರಿಗೆ 5 ಕೆಜಿ ಗೋಧಿ ಮತ್ತು ಅಕ್ಕಿ ಹಾಗೂ 1ಕೆಜಿ ಬೇಳೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇದು ಮಹತ್ವದ ಹೆಜ್ಜೆ ಎಂದು ಕಟೀಲ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಒಂದು ದೇಶ, ಒಂದು ಪಡಿತರ ಚೀಟಿ :ಕೇಂದ್ರ ಸರ್ಕಾರ ಬಹುದೊಡ್ಡ ಕನಸಾಗಿರುವ ಒಂದು ರಾಷ್ಟ್ರ-ಒಂದು ಪಡಿತರ ಚೀಟಿ' ಯೋಜನೆಯಡಿ ಪ್ರವಾಸಿ ಕಾರ್ಮಿಕರು ಸೇರಿ ಕೋಟ್ಯಂತರ ಬಡ ಹಾಗೂ ಮಧ್ಯಮ ವರ್ಗದವರು ದೇಶದ ಯಾವುದೇ ಮೂಲೆಯಿಂದ ಬೇಕಾದರೂ ತಮ್ಮ ಪ್ರತಿ ತಿಂಗಳ ಪಡಿತರ ಪಡೆದುಕೊಳ್ಳಬಹುದಾಗಿದೆ. ಇದು ಬಡವರ ಬದುಕಿನ ಆಶಾಕಿರಣ ಎಂದರೂ ತಪ್ಪಾಗದು. ಕೇಂದ್ರದ ಬಿಜೆಪಿ ಸರ್ಕಾರ ಸದಾ ಬಡವರ ಜೊತೆ ಇರುತ್ತದೆ. ಬಡವರ, ಶ್ರಮಿಕರ ಸಬಲೀಕರಣಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳು ಜಾರಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿರುವುದನ್ನು ನಾವು ಗಮನಿಸಬಹುದಾಗಿದೆ.
ದೇಶದ ಕಾನೂನಿನ ಎದುರು ಪ್ರಧಾನಮಂತ್ರಿ ಒಂದೇ, ಜನಸಾಮಾನ್ಯರು ಒಂದೇ, ಎಲ್ಲರಿಗೂ ಕಾನೂನು ಏಕರೂಪದಲ್ಲಿರಬೇಕು. ನಮ್ಮ ಸ್ಥಳೀಯ ಆಡಳಿತಗಳು ಈ ನಿಟ್ಟಿನಲ್ಲಿ ಸೂಕ್ತ ಗಮನಹರಿಸಬೇಕು ಎಂದಿರುವ ಮೋದಿಯವರ ನಡೆಯನ್ನು ನಾವೆಲ್ಲ ಸ್ವಾಗತಿಸೋಣ ಎಂದು ನಳಿನ್ ಕುಮಾರ್ ಕಟೀಲ್ ಕರೆ ಕೊಟ್ಟಿದ್ದಾರೆ.
ಕೊರೊನಾ ಸಮರದಲ್ಲಿ ದೇಶ ಹೋರಾಟ ನಡೆಸುವಾಗ ಬೆಂಬಲವಾಗಿ ನಿಂತಿದ್ದು ಅನ್ನ ನೀಡುವ ರೈತ ಹಾಗೂ ತೆರಿಗೆ ಕಟ್ಟುವವರು. ಇವರು ಸಹಾಯ ಮಾಡದಿದ್ದರೆ ಇಡೀ ದೇಶವೇ ಸಂಕಷ್ಟದ ಸ್ಥಿತಿಗೆ ತಲುಪಿತ್ತು ಎಂದು ಪ್ರಧಾನಿ ಹೇಳಿದ್ದಾರೆ. ಅದೇ ರೀತಿಯಲ್ಲಿ ಲೋಕಲ್ನಿಂದ ವೋಕಲ್ ಆಗುವ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣದ ಕನಸನ್ನು ಪುನರುಚ್ಚರಿಸಿದ್ದಾರೆ. ಅವರ ಆಶಯದಂತೆ ನಾವೆಲ್ಲ ನಡೆದುಕೊಳ್ಳೋಣ ಎಂದು ಕಟೀಲ್ ತಿಳಿಸಿದ್ದಾರೆ.