ಬೆಂಗಳೂರು: ಸಾವಯವ ಕೃಷಿ ಮೂಲಕ ಒಂದು ಲಕ್ಷ ರೈತರನ್ನು ಒಗ್ಗೂಡಿಸಿ ರೈತ ಸಮಾವೇಶ ಏರ್ಪಡಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರೈತ ಮೋರ್ಚಾಗೆ ಟಾರ್ಗೆಟ್ ನೀಡಿದ್ದಾರೆ.
ಬೆಂಗಳೂರು ಉತ್ತರದ ಒಡೆಯರಹಳ್ಳಿ ತೋಟದಲ್ಲಿ ನಡೆದ ರಾಜ್ಯ ರೈತ ಮೋರ್ಚಾದ ರಾಜ್ಯ ಪದಾಧಿಕಾರಿಗಳ ಮಾಸಿಕ ಸಭೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಂಘಟನೆಯನ್ನು ಬೂತ್ ಮಟ್ಟಕ್ಕೆ ತೆಗೆದುಕೊಂಡು ಹೋಗಲು ರಾಜ್ಯ ರೈತ ಮೋರ್ಚಾ ಪದಾಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಸಂಘಟನೆಯ ಜೊತೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಕಾರ್ಯಕ್ರಮಗಳು ಗ್ರಾಮಮಟ್ಟದಲ್ಲಿ ಆಗಬೇಕೆಂದು ತಿಳಿಸಿದರು.
ದೇಶದಲ್ಲಿ ಹಾಗೂ ರಾಜ್ಯದಲ್ಲಿ ಪ್ರಗತಿ ಸಾಧಿಸಿರುವ ರೈತರ ತೋಟಗಳಿಗೆ ಮತ್ತು ಉದ್ಯಮಗಳಿಗೆ ಭೇಟಿ ನೀಡಿ ಅವರ ಕಾರ್ಯವಿಧಾನಗಳನ್ನು ಉಳಿದ ರೈತರಿಗೆ ಪರಿಚಯಿಸುವ ಹಾಗೂ ರೈತರ ಆರ್ಥಿಕತೆಯನ್ನು ಬಲಗೊಳಿಸುವ ಕೆಲಸವಾಗಬೇಕು. ರೈತರು ಬೆಳೆಗಳಲ್ಲಿ ವೈವಿಧ್ಯತೆ ರೂಪಿಸುವ ನಿಟ್ಟಿನಲ್ಲಿ ರೈತ ಮೋರ್ಚಾ ಸಂಘಟಿಸಬೇಕೆಂದು ತಿಳಿಸಿದರು. ರೈತ ಮೋರ್ಚಾವು ರಾಜ್ಯದಲ್ಲಿರುವ ರೈತರಿಗೆ ಮಾರುಕಟ್ಟೆ ವೃದ್ಧಿಸಿಕೊಳ್ಳುವುದರಲ್ಲಿ ಸಹಾಯ ಮಾಡಬೇಕು ಎಂದು ತಿಳಿಸಿದರು.
ರೈತ ಮೋರ್ಚಾ ರಾಜ್ಯಾಧ್ಯಕ್ಷರ ಈರಣ್ಣ ಕಡಾಡಿ ಮಾತನಾಡಿ, ರೈತ ಸಂಘಟನೆಯನ್ನು ಪರಿಣಾಮಕಾರಿಯಾಗಿ ರೂಪಿಸಬೇಕು. ರಾಜ್ಯ ಪದಾಧಿಕಾರಿಗಳು ಜಿಲ್ಲಾ ಪ್ರವಾಸಗಳನ್ನು ಹಮ್ಮಿಕೊಳ್ಳಬೇಕು. ಜಿಲ್ಲಾ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳಿಗೆ ರಾಜ್ಯ ಪದಾಧಿಕಾರಿಗಳು ಜವಾಬ್ದಾರಿಗಳ ಬಗ್ಗೆ ತಿಳಿಹೇಳಬೇಕು. 2022ರಲ್ಲಿ ರೈತರ ಆದಾಯ ದ್ವಿಗುಣಗೊಳ್ಳಬೇಕಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸಬೇಕು. ರಾಜ್ಯ ಪದಾಧಿಕಾರಿಗಳು ರೈತ ಉತ್ಪಾದಕ ಸಂಸ್ಥೆಗಳ ರೂಪುರೇಷೆಗಳು ಮತ್ತು ಪಾರಂಪರಿಕ ಕೃಷಿ ಯೋಜನೆಗಳ ಅರಿವು ಮೂಡಿಸಬೇಕು ಎಂದರು.