ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸುವ ವಿದ್ಯಮಾನಗಳು ಜರುಗಿದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಕುರಿತಂತೆ ಯಾವುದೇ ಹೇಳಿಕೆಗಳನ್ನು ನೀಡಿಲ್ಲ.
ಗುರುವಾರ ಭೋಜನಕೂಟದ ನೆಪದಲ್ಲಿ ಪಕ್ಷದ ಶಾಸಕರು ಪ್ರತ್ಯೇಕವಾಗಿ ಸಭೆ ನಡೆಸಿ ನಾಯಕತ್ವ ಬದಲಾವಣೆಯಂತಹ ವಿಷಯಗಳ ಕುರಿತು ಚರ್ಚೆ ನಡೆಸಿರುವ ಮಾಹಿತಿ ಬಹಿರಂಗಗೊಂಡು ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಸಂಬಂಧ ಸಭೆ ನಡೆಸಿದವರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಆದರೆ ಸರ್ಕಾರ ಹಾಗೂ ಪಕ್ಷ ಮಾತ್ರ ಮೌನಕ್ಕೆ ಶರಣಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈವರೆಗೂ ಬಂಡಾಯ ಸಭೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪೂರ್ವ ನಿಗದಿಯಂತೆ ಬೆಳಗ್ಗೆ 10.30 ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಚಲನಚಿತ್ರ ರಂಗದ ನಿಯೋಗವನ್ನು ಭೇಟಿ ಮಾಡಿ ಅಹವಾಲು ಆಲಿಸಿದರು. ನಂತರ 11 ಗಂಟೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. 12.15 ಕ್ಕೆ ಗ್ರಾನೈಟ್ ಉದ್ದಿಮೆದಾರರ ನಿಯೋಗದೊಂದಿಗೆ ಸಮಾಲೋಚನೆ ನಡೆಸಿದರು. 1 ಗಂಟೆಗೆ ಮಂಡ್ಯ ಜಿಲ್ಲೆಯ ಶಾಸಕರ ನಿಯೋಗದ ಜೊತೆ ಸಭೆ ನಡೆಸಿದರು.
ಆಂತರಿಕವಾಗಿ ಭಿನ್ನಮತದಂತಹ ಚಟುವಟಿಕೆ ನಡೆಯುತ್ತಿದ್ದರೂ ಇದರ ಬಗ್ಗೆ ಸಿಎಂ ತಲೆಕೆಡಿಸಿಕೊಂಡಿಲ್ಲ. ಅತೃಪ್ತರೊಂದಿಗೆ ಸಿಎಂ ಸಭೆ ನಡೆಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದಂತೆ ಯಾವುದೇ ಸಭೆ ಕರೆದಿಲ್ಲ ಎಂದು ಟ್ವೀಟ್ ಮಾಡಿದ್ದು, ಬಿಟ್ಟರೆ ಮತ್ತೆ ಯಾವ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ.
ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಯಾವುದೇ ಹೇಳಿಕೆ ನೀಡಲ್ಲ. ಪ್ರತ್ಯೇಕ ಸಭೆ ನಡೆದಿಲ್ಲ ಎನ್ನುವುದಾಗಲಿ, ನಡೆದಿದ್ದರೆ ಕಾರಣ ಕೇಳುವುದಾಗಲಿ ಮಾಡಿಲ್ಲ. ಪಕ್ಷದಲ್ಲಿ ಏನೂ ಆಗಿಲ್ಲ ಎನ್ನುವಂತೆ ಇರುವುದು ಸಾಕಷ್ಟು ಕುತೂಹಲ ಮೂಡಿಸಿದೆ.